ಹುಬ್ಬಳ್ಳಿ: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿ ಕಾಮಕುಮಾರ ನಂದಿ ಅವರನ್ನು ಬರ್ಬರವಾಗಿ ಹತ್ಯೆ (Jain muni Murder) ಮಾಡಿರುವ ಪ್ರಕರಣ ಸಂಬಂಧ ಜೈನ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ವರೂರಿನ ಜೈನಮುನಿ ಗುಣಧರನಂದಿ ಮಹಾರಾಜ್ ಅವರು ಕಣ್ಣೀರು ಹಾಕಿದ್ದು, “ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಸರ್ಕಾರ ಲಿಖಿತ ಭರವಸೆ ಕೊಡುವವರೆಗೆ ಅನ್ನಾಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವವರೆಗೆ ಸಲ್ಲೇಖನ ಮಾಡುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜೈನಮುನಿ ಗುಣಧರನಂದಿ ಮಹಾರಾಜ್, ಶಾಂತಿ ಪ್ರಿಯ ಸಮಾಜದ ಮುನಿಗಳ ಬರ್ಬರ ಹತ್ಯೆಯು ತೀವ್ರ ನೋವು ತಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಸಂತಾಪ ಸೂಚಿಸಿಲ್ಲ. ಇದರಿಂದ ನಮಗೆ ಆಘಾತವಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸರ್ಕಾರಕ್ಕೆ ನಮ್ಮಂತಹ ಅಲ್ಪಸಂಖ್ಯಾತರು ಬೇಡವಾಗಿದೆ. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಕೊಲೆಗಡುಕರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಸರ್ಕಾರ ಲಿಖಿತವಾಗಿ ಭರವಸೆ ನೀಡಬೇಕು. ಅಲ್ಲಿಯವರೆಗೆ ಅನ್ನಾಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವವರೆಗೆ ಸಲ್ಲೇಖನ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಅನ್ನ ನೀರು ಬಿಟ್ಟು ಜೈನಮುನಿ ಸತ್ಯಾಗ್ರಹ; ಅವರ ಹೇಳಿಕೆ ಇಲ್ಲದೆ
ಶಾಸಕ ಈಗ ಫೋನ್ ಸ್ವಿಚ್ಡ್ ಆಫ್ ಮಾಡಿದ್ದಾನೆ ಪುಣ್ಯಾತ್ಮ
ರಾಜ್ಯದಲ್ಲಿ ನಮಗೆ ಅಸುರಕ್ಷತೆ ಇದೆ. ಜನರಿಗೆ ಸಹಾಯ ಮಾಡಿ, ಹಣ ಕೊಟ್ಟು ಹೆಣ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಸ್ವಾತಂತ್ರ್ಯಾ ನಂತರ ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಕೊಲೆ ನಡೆದು ಇಪ್ಪತ್ನಾಲ್ಕು ಗಂಟೆಯಾದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಬೆಳಗಾವಿ ಎಸ್‌ಪಿ ಕೂಡಲೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಶಾಸಕ ಗಣೇಶ ಹುಕ್ಕೇರಿ ಸರಿಯಾಗಿ ಸ್ಪಂದಿಸಿಲ್ಲ, ಅವರು ಬೆಂಗಳೂರಲ್ಲಿ ಆರಾಮಾಗಿದ್ದಾರೆ. ಶಾಸಕ ಈಗ ಫೋನ್ ಸ್ವಿಚ್ಡ್ ಆಫ್ ಮಾಡಿದ್ದಾನೆ ಪುಣ್ಯಾತ್ಮ. ನಮ್ಮ ಸಮಾಜ ಅವರಿಗೆ ಮತ ಹಾಕಿದರೂ ನಮಗೆ ಸ್ಪಂದಿಸಿಲ್ಲ ಎಂದು ಜೈನಮುನಿ ಗುಣಧರನಂದಿ ಮಹಾರಾಜ್ ಕಿಡಿಕಾರಿದರು.
ಸಿಎಂ ವಿರುದ್ಧ ಕಿಡಿ; ಇಲ್ಲಿದೆ ವಿಡಿಯೊ
ಇದನ್ನೂ ಓದಿ: Siddaramaiah : ಬಜೆಟ್ ಮಂಡನೆ ಬಳಿಕ ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ಸಿದ್ದರಾಮಯ್ಯ, ಯಾರ ಭೇಟಿಯೂ ಇಲ್ಲ
ಮುಖ್ಯಮಂತ್ರಿಗಳು ನಮಗೆ ಸಂವೇದನೆ ವ್ಯಕ್ತಪಡಿಸದೆ, ಇನ್ನೊಂದು ತತ್ವದವರಿಗೆ ಬೆಂಬಲ ಕೊಡುತ್ತಿದ್ದಾರೆ. ಜೈನ ಬಸ್ತಿಗಳು ಅತಿಕ್ರಮ ಆಗುತ್ತಿವೆ. ನಮಗೆ ಸುರಕ್ಷತೆ ಇಲ್ಲವಾಗಿದೆ. ಸರ್ಕಾರಕ್ಕೆ ಅಲ್ಪಸಂಖ್ಯಾತ ಜೈನರು ಬೇಕಿಲ್ಲ. ಅವರಿಗೆ ಬಹುಸಂಖ್ಯಾತರು ಮಾತ್ರವೇ ಬೇಕಾಗಿದ್ದಾರೆ. ಸರ್ಕಾರ ಅವರ ಪರವಾಗೇ ಬದುಕಲಿ, ನಾವು ಹೀಗೆಯೇ ಇರುತ್ತೇವೆ. ನಮ್ಮ ಸಮಾಜ ಶಾಂತ ರೀತಿಯಿಂದ ವರ್ತಿಸುತ್ತದೆ ಎಂದು ಜೈನಮುನಿ ಗುಣಧರನಂದಿ ಮಹಾರಾಜ್ ಹೇಳಿದರು.