ಚಿಕ್ಕೋಡಿ: ಇಲ್ಲಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ (Jain Muni Murder) ಪ್ರಕರಣದಲ್ಲಿ ಜೈನಮುನಿಗಳ ಮೃತದೇಹ (Jain Muni Deadbody) ಸಾಗಿಸಿದ್ದ ಬೈಕ್ ಅನ್ನು ಇಲ್ಲಿನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಆದರೆ, ಈಗ ಹತ್ಯೆಯ ಬಗ್ಗೆ ಒಂದೊಂದೇ ಆಘಾತಕಾರಿ ವಿಷಯಗಳು ಬಹಿರಂಗವಾಗತೊಡಗಿವೆ. ಕೊಲೆ ಮಾಡಿದ ಬಳಿಕ ದುರುಳರು, ಗುಡ್ಡಗಾಡು ಪ್ರದೇಶವೊಂದಕ್ಕೆ ಮೃತದೇಹವನ್ನು ಹೊತ್ತೊಯ್ದು ತುಂಡರಿಸಿದ್ದಾರೆ (chopped off in hilly areas) ಎಂಬ ಅಂಶ ಗೊತ್ತಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಒಂದೊಂದೇ ವಿಷಯಗಳು ಗೊತ್ತಾಗತೊಡಗಿವೆ. ಪ್ರಕರಣದ ಎ1 ಆರೋಪಿ ನಾರಾಯಣ ಮಾಳಿಯು (Narayana Mali) ಹತ್ಯೆಗೆ ಮೊದಲೇ ಸ್ಕೆಚ್ ಹಾಕಿಕೊಂಡಿದ್ದ. ತಾನು ಜೈನಮುನಿಯನ್ನು ಹೇಗೆ ಕೊಲ್ಲಬೇಕೆಂದು ನಿರ್ಧಾರವನ್ನೂ ಮಾಡಿದ್ದ. ಕೊಂದ ಮೇಲೆ ಏನು ಮಾಡುವುದು ಎಂಬ ಬಗ್ಗೆಯೂ ವಿಚಾರ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆತ ಹತ್ಯೆಗೂ ಮುನ್ನ ಅಂದರೆ ಜುಲೈ 5ರಂದು ರಾತ್ರಿ ಚಿಕ್ಕೋಡಿಯಲ್ಲಿ ಹಸನಸಾಬ್ ದಲಾಯತ್‌ನನ್ನು (Hasan Sab Dalayat) ಸಂಪರ್ಕಿಸಿದ್ದ. ಅವನಿಗೆ ತನ್ನ ಪ್ಲ್ಯಾನ್ ಅನ್ನು ಹೇಳಿದ್ದ. ಆತನನ್ನೂ ಒಪ್ಪಿಸಿದ್ದ. ಇಬ್ಬರೂ ಸೇರಿ ಕೊಲೆ ಮಾಡುವ ಪ್ಲ್ಯಾನ್ ಅನ್ನು ಸಿದ್ಧಪಡಿಸಿದ್ದ.
ಇದನ್ನೂ ಓದಿ: Tomato Price : 30 ಗುಂಟೆ, 3 ತಿಂಗಳು, 7.50 ಲಕ್ಷ ಆದಾಯ; ಬೊಂಬಾಟ್ ಟೊಮ್ಯಾಟೊ!
ಹತ್ಯೆಗೆ ಇಬ್ಬರೂ ಹೊರಟರು!
ಕೊಲೆ ಮಾಡಲು ನಿರ್ಧಾರ ಮಾಡಿದ ಮೇಲೆ ನಾರಾಯಣ ಮಾಳಿ ಹಾಗೂ ಹಸನಸಾಬ್ ದಲಾಯತ್ ಇಬ್ಬರೂ ಮದ್ಯ ಸೇವನೆ ಮಾಡಿದ್ದಾರೆ. ಕುಡಿದ ಮೇಲೆ ಇಬ್ಬರೂ ಗೋಣಿ ಚೀಲ, ಮಾರಕಾಸ್ತ್ರವನ್ನು ತೆಗೆದುಕೊಂಡು ಬೈಕ್‌ನಲ್ಲಿ ಆಶ್ರಮದತ್ತ ತೆರಳಿದ್ದರು. ಈ ನಡುವೆ ಚಿಕ್ಕೋಡಿಯಲ್ಲಿ ಬೈಕ್‌ಗೆ ಸಾಕಷ್ಟು ಪೆಟ್ರೋಲ್ ಅನ್ನು ಹಾಕಿಸಿಕೊಂಡಿದ್ದರು.
ಕರೆಂಟ್ ಶಾಕ್ ಕೊಟ್ಟರು!
ಆಶ್ರಮಕ್ಕೆ ಬಂದವರೇ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಭೇಟಿ ಮಾಡಿದರು. ಹೀಗೆ ಮಾತನಾಡುತ್ತಾ ಅವರಿಗೆ ಕರೆಂಟ್ ಶಾಕ್ (Electricity Shock) ನೀಡಿ ಕೊಲ್ಲಲು ಯತ್ನ ಮಾಡಿದ್ದಾರೆ. ಆದರೆ, ಅದರಿಂದ ಅವರು ಮೃತಪಟ್ಟಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ತಮ್ಮ ಬಳಿ ಇದ್ದ ಟವೆಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಬಳಿಕ ತಾವು ತಂದಿದ್ದ ಗೋಣಿ ಚೀಲದಲ್ಲಿ ಮೃತದೇಹವನ್ನು ಕಟ್ಟಿ ಬೈಕ್‌ನಲ್ಲಿ ಹೊತ್ತೊಯ್ದಿದ್ದರು. ಇದ್ಯಾವುದೂ ಆಶ್ರಮದಲ್ಲಿ ಗೊತ್ತಾಗದಂತೆ ಜಾಗ್ರತೆ ವಹಿಸಿದ್ದರು.
ಗುಡ್ಡಗಾಡು ಪ್ರದೇಶದಲ್ಲಿ ಮೃತದೇಹ ಕತ್ತರಿಸಿದರು!
ಬೈಕ್‌ನಲ್ಲಿ ಮೃತದೇಹವನ್ನು ಹಾಕಿಕೊಂಡವರು ಸೀದಾ ನಂದಿಪರ್ವತ ಆಶ್ರಮದಿಂದ ಪರ್ಯಾಯ ಮಾರ್ಗವಾಗಿ ರಾಯಬಾಗ ತಾಲೂಕಿನ ಕಟಕಬಾವಿಗೆ (Katakabavi in Raybhag) ಪ್ರಯಾಣ ಮಾಡಿದ್ದಾರೆ. ಮಾರ್ಗಮಧ್ಯೆ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಅಲ್ಲಿ ಮೃತದೇಹವನ್ನು ಒಟ್ಟು 9 ಭಾಗವಾಗಿ ಕತ್ತರಿಸಿದ್ದರು. ಮೃತದೇಹವನ್ನು ಕತ್ತರಿಸಿ ಪುನಃ ಚೀಲದಲ್ಲಿ ಕಟ್ಟಿಕೊಂಡು ತನ್ನ ಕಟಕಬಾವಿಯ ಸ್ವಂತ ಗದ್ದೆಗೆ ನಾರಾಯಣ ಮಾಳಿ ಹೋಗಿದ್ದ. ಇದಕ್ಕಾಗಿ ಇವರಿಬ್ಬರೂ ಸುಮಾರು 35 ಕಿ.ಮೀ. ವರೆಗೆ ಬೈಕ್‌ನಲ್ಲಿ ಜೈನಮುನಿಗಳ ಮೃತದೇಹದೊಂದಿಗೆ ಸುತ್ತಾಡಿದ್ದಾರೆ. ಕಟಕಬಾವಿಯ ತನ್ನ ಗದ್ದೆಯಲ್ಲಿರುವ ಬೋರ್‌ವೆಲ್‌ನಲ್ಲಿ ಮೃತದೇಹದ ತುಂಡುಗಳನ್ನು ಎಸೆದು ವಾಪಸ್ ಆಗಿದ್ದರು.
ಇದನ್ನೂ ಓದಿ: Kidnap Case : ಪೋಷಕರಿಂದಲೇ ನವವಿವಾಹಿತೆ ಅಪಹರಣ! ಮತ್ತೆ ಮನೆ ಸೇರುತ್ತಾಳಾ ಮಡದಿ?
ವಿಚಾರಣೆ ವೇಳೆ ಸಿಕ್ಕಿಬಿದ್ದಿದ್ದರು
ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಆದರೆ, ಸಿಕ್ಕಿರಲಿಲ್ಲ. ಆಶ್ರಮಕ್ಕೆ ನಾರಾಯಣ ಮಾಳಿ ಬಂದಿದ್ದ ವಿಷಯ ಗೊತ್ತಾಗಿ ವಿಚಾರಣೆ ನಡೆಸಿದಾಗ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಕೊಲೆ ಸಂಗತಿ ಬೆಳಕಿಗೆ ಬಂದಿತ್ತು.