Site icon Vistara News

Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ

Kam kumar nandi maharaj and Dr G Parameshwar with CBI Logo

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ (Jain muni Murder) ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ (Dr G Parameshwar) ಹೇಳಿದರು.

ತಾಲೂಕಿನ ಹಲಗಾ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಈ ಘಟನೆ ನಡೆಯಬಾರದಿತ್ತು. ನನಗೆ ಬಹಳ ನೋವಾಗಿದೆ. ಒಬ್ಬ ಸ್ವಾಮೀಜಿ, ಸಂತ ಯಾವುದೇ ಅಪೇಕ್ಷೆ ಇಲ್ಲದೆ ಜೀವನ ನಡೆಸುತ್ತಾರೆ. ಅಂಥವರಿಗೆ ಯಾವುದೇ ಕಾರಣಕ್ಕೂ ಹೀಗೆ ಆಗಬಾರದು. ನಮ್ಮ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು (Jain muni murder accused) ಹಿಡಿದು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ತನಿಖೆ ಆರಂಭವಾಗಿದೆ. ಎಲ್ಲವನ್ನೂ ಕಾನೂನು ನೋಡಿಕೊಳ್ಳಲಿದೆ. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದು ಹೇಳಿದರು.

ಎಲ್ಲ ಸಮುದಾಯದ ಸಾಧು ಸಂತರಿಗೆ ನಾನು ಭರವಸೆ ನೀಡುತ್ತೇನೆ. ಸರ್ಕಾರ ಈ ಪ್ರಕರಣದಲ್ಲಿ ಗಂಭೀರವಾಗಿದೆ. ಎಲ್ಲರಿಗೂ ರಕ್ಷಣೆ ಕೊಡುತ್ತೇವೆ. ಹುಬ್ಬಳ್ಳಿಯ ಗುಣಧರನಂದಿ ಮಹಾರಾಜರ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇನೆ. ಮುನಿಗಳು ಧರ್ಮಪ್ರಚಾರಕ್ಕೆ ಪಾದಯಾತ್ರೆ (Munis Padayatra) ನಡೆಸುವ ವೇಳೆ ಭದ್ರತೆ ನೀಡುತ್ತೇವೆ. ಜೈನ ಸಮುದಾಯಕ್ಕೆ ಮಂಡಳಿ ಮಾಡಿಕೊಳ್ಳಲು ಕೋರಿದ್ದಾರೆ. ಅದಕ್ಕೂ ನಮ್ಮ ಸರ್ಕಾರ ಬದ್ಧವಿದೆ. ನಾನು ಕೂಡ ಹಿರೇಕೋಡಿಯ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಭಾನುವಾರವೇ ನಾನು ಚಿಕ್ಕೋಡಿಗೆ ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಕಳಿಸಿದ್ದೇನೆ. ಅವರೂ ಕೂಡ ಘಟನೆಯ ಎಲ್ಲ ಮಾಹಿತಿ ಪಡೆದಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಒಂದೂವರೆ ತಿಂಗಳಲ್ಲಿ ಎಲ್ಲವೂ ಬದಲಾಗಿ ಬಿಡುತ್ತದೆಯೇ?

ಮುನಿಗಳ ಹತ್ಯೆಯ ತನಿಖೆ ಬಗ್ಗೆ ಬಿಜೆಪಿ ನಾಯಕರಿಂದ ಸಂಶಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ, ನೀವು ಸರ್ಕಾರ ನಡೆಸುವಾಗ ಪೊಲೀಸರ (Karnataka Police) ಮೇಲೆ ನಂಬಿಕೆ ಇತ್ತು. ಒಂದೂವರೆ ತಿಂಗಳಲ್ಲಿ ಎಲ್ಲವೂ ಬದಲಾಗಿ ಬಿಡುತ್ತದೆಯೇ? ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಬೇಕು. ಮುನಿಗಳ ಹತ್ಯೆ ಘಟ‌ನೆ ಗಂಭೀರವಾಗಿ ಇರುವಂಥದ್ದು. ಕೆಲವೇ ಗಂಟೆಗಳಲ್ಲಿ ನಮ್ಮ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ. ಅದು ಪೊಲೀಸರ ಸಮರ್ಥನೆಯನ್ನು ತೋರುತ್ತದೆ ಅಲ್ವಾ? ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲದರಲ್ಲೂ ರಾಜಕೀಯ ತರುವುದು ಸೂಕ್ತವಲ್ಲ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಮುನಿಗಳ ಹತ್ಯೆ ಪ್ರಕರಣವನ್ನು ನಾವು ಸಿಬಿಐಗೆ ಕೊಡಲ್ಲ, ಅದರ ಅವಶ್ಯಕತೆ ಇಲ್ಲ. ಯಾವ ಕಾರಣಕ್ಕೆ ಮುನಿಗಳ ಹತ್ಯೆಯಾಗಿದೆ ಎಂಬ ಬಗ್ಗೆ ಈಗಲೇ ಮಾತನಾಡುವುದು ಸರಿಯಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿವೈಎಸ್‌ಪಿ (DYSP) ನೇತೃತ್ವದಲ್ಲಿ ತನಿಖೆ ನಡೆದಿದೆ. ಏನು ಫಲಿತಾಂಶ ಬರಲಿದೆ ಕಾದು ನೋಡೋಣ. ತನಿಖಾ ವರದಿಯನ್ನು ಸರ್ಕಾರಕ್ಕೆ ಕೊಡುತ್ತಾರೆ. ನಾನು ಈಗ ಏನೂ ಹೇಳುವುದಿಲ್ಲ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಹಣದ ವ್ಯವಹಾರಕ್ಕೆ (Money issue) ಮುನಿಗಳ ಹತ್ಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ (Media Report) ಬರುತ್ತಿವೆ. ಸತ್ಯಾಂಶ ಅದೇ ಇರಬಹುದು, ಇಲ್ಲವೇ ಬೇರೆ ಇರಬಹುದು. ತನಿಖಾ ವರದಿ ಬಂದ ಮೇಲೆಯೇ ಎಲ್ಲವೂ ಗೊತ್ತಾಗಲಿದೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಜೈನ ಸಮುದಾಯದ (Jain Community) ಜತೆ ಸರ್ಕಾರ ಇದೆ

ಮುನಿಗಳ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ (Statewide protest) ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ, ಈಗಾಗಲೇ ನಾನು ಜೈನ ಸಮುದಾಯಕ್ಕೆ (Jain Community) ಮನವಿ ಮಾಡಿರುವೆ. ಸರ್ಕಾರ ನಿಮ್ಮ ಜತೆಗೆ ಇದೆ, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರದಿಂದ ತನಿಖೆ ವಿಳಂಬ ಆಗುವುದಿಲ್ಲ. ಮುನಿಗಳ ಹತ್ಯೆ ಕೇವಲ ಜೈನ ಸಮುದಾಯಕ್ಕೆ ಅಲ್ಲ, ನಮಗೂ ನೋವಾಗಿದೆ. ಸರ್ಕಾರ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಡಾ. ಜಿ. ಪರಮೇಶ್ವರ ತಿಳಿಸಿದರು.

ಕೇಂದ್ರ ಸರ್ಕಾರ (Central Government) ವರದಿ ಕೇಳಿಲ್ಲ

ಮುನಿಗಳ ಹತ್ಯೆ ಬಗ್ಗೆ ಕೇಂದ್ರ ಸರ್ಕಾರ (Central Government) ವರದಿ ಕೇಳಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವರದಿ ಕೇಳಿಲ್ಲ ಎಂದು ಉತ್ತರಿಸಿದರು.

ಜಿ. ಪರಮೇಶ್ವರ ನೇತೃತ್ವದಲ್ಲಿ ಮಹತ್ವದ ಸಭೆ (Meeting)

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ, ಕಾನೂನು ಮತ್ತು ‌ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ, ಉತ್ತರ ವಲಯ ಐಜಿಪಿ ವಿಕಾಸಕುಮಾರ್, ಬೆಳಗಾವಿ ಎಸ್‌ಪಿ ಡಾ. ಸಂಜೀವ್ ಪಾಟೀಲ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಚಿಕ್ಕೋಡಿಯ ಜೈನ ಸಮುದಾಯದ ಮುಖಂಡರು (Jain Community Leaders) ಸಭೆಯಲ್ಲಿ ಭಾಗಿಯಾಗಿದ್ದರು.

Exit mobile version