ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮ ಕುಮಾರ ನಂದಿ ಮಹರಾಜ್ ಅವರ ಹತ್ಯೆಗೆ (Jain Muni murder) ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಈ ಕೊಲೆಯನ್ನು ಮಾಡಿದ್ದು ನಾರಾಯಣ ಮಾಳಿ (Narayana Male) ಒಬ್ಬನೇ ಎಂದು ಇದುವರೆಗೆ ಹೇಳಲಾಗಿತ್ತು. ಇನ್ನೊಬ್ಬ ಆರೋಪಿ ಹುಸೇನ್ ದಲಾಯತ್ (Hussain dalayat) ಶವವನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಸಹಕರಿಸಿದ್ದ ಎಂದು ಹೇಳಲಾಗಿದೆ. ಆದರೆ, ಈಗ ಮಾಳಿ ಮತ್ತು ಹುಸೇನ್ ಇಬ್ಬರೂ ಸೇರಿಯೇ ಈ ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ. ಇದರೊಂದಿಗೆ ಇದೊಂದು ವ್ಯವಸ್ಥಿತ ಸಂಚು ಎಂಬ ಬಿಜೆಪಿ ಆರೋಪಕ್ಕೆ ಸಣ್ಣ ಬೆಂಬಲ ಸಿಕ್ಕಂತಾಗಿದೆ.
ಚಿಕ್ಕೋಡಿ ಠಾಣೆಯಲ್ಲಿ ದಾಖಲಾದ ಜೈನ ಮುನಿ ಕೊಲೆ ಸಂಬಂಧದ ಎಫ್ಐಆರ್‌ನಲ್ಲಿ (First Information report) ಹಲವು ವಿಷಯಗಳ ಉಲ್ಲೇಖ ಮಾಡಲಾಗಿದೆ. ನಾರಾಯಣ ಮಾಳಿ ಮತ್ತು ಹಸನ್ ದಲಾಯತ್ ಇಬ್ಬರೂ ಸೇರಿ ಜೈನ ಮುನಿಗಳ ಹತ್ಯೆ ಮಾಡಿದ್ದಾರೆ ಎಂದು ಅದರಲ್ಲಿ ತಿಳಿಸಲಾಗಿದೆ. ಇದುವರೆಗೆ ಕೇವಲ ನಾರಾಯಣ ಮಾಳಿ ಮಾತ್ರ ಕೊಲೆಗಾರ ಎಂಬ ವಾದ ಮಾಡಲಾಗಿತ್ತು. ಈಗ ಹುಸೇನ್ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಹಾಗಿದ್ದರೆ ಪೊಲೀಸರ ಎಫ್‌ಐಆರ್‌ನಲ್ಲಿರುವ ಅಂಶಗಳೇನು?
- ಜೈನ ಮುನಿಗಳು ಹಿರೇಕೋಡಿ ಗ್ರಾಮದ ಹದ್ದಿಯಲ್ಲಿ ವೆಲ್ಫೇರ್ ಸೊಸೈಟಿಯನ್ನು ನಡೆಸುತ್ತಿದ್ದರು. ಈ ಸೊಸೈಟಿಯ ಸಮೀಪ ನಾರಾಯಣ ಮಾಡಿ ಒಕ್ಕಲುತನ ಮಾಡಿಕೊಂಡು ಕುಟುಂಬ ಸಮೇತ ವಾಸಿಸುತ್ತಿದ್ದ.
- ನಾರಾಯಣ ಮಾಡಿ ಸ್ವಾಮೀಜಿಯವರ ಜತೆ ಹಣಕಾಸು ವ್ಯವಹಾರ ಹೊಂದಿದ್ದು, ಮುನಿಗಳು ಹಣ ಮರಳಿಸುವಂತೆ ಪದೇಪದೆ ಒತ್ತಾತಯಿಸುತ್ತಿದ್ದರು.
- ಪದೇಪದೇ ಹಣ ಕೇಳುತ್ತಿದ್ದುದರಿಂದ ಸಿಟ್ಟಿಗೆದ್ದ ನಾರಾಯಣ ಮಾಳಿ ತನ್ನ ಗೆಳೆಯ ಹುಸೇನ್ ದಲಾಯತ್‌ನನ್ನು ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ.
- ಮೊದಲು ಸ್ವಾಮೀಜಿಯವರ ಕೋಣೆಗೆ ಹೋಗಿ ಅಲ್ಲಿ ಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಇಬ್ಬರೂ ಯತ್ನಿಸಿದರು.
- ಆದರೆ, ಕರೆಂಟ್ ಶಾಕ್‌ನಿಂದ ಕೊಲ್ಲಲು ಅವರು ವಿಫಲರಾದರು. ಆಗ ಇಬ್ಬರೂ ಸೇರಿ ಕುತ್ತಿಗೆಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
- ಕೊಲೆ ಮಾಡಿದ ಬಳಿಕ ಶವವನ್ನು ಕಣ್ಮರೆ ಮಾಡಿ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಶವವನ್ನು ಗೋಣಿ ಚೀಲದಲ್ಲಿ ಕಟ್ಟಿ ನಾರಾಯಣ ಮಾಳಿಯ ಬೈಕ್‌ನಲ್ಲಿ ಕೊಂಡೊಯ್ಯಲಾಯಿತು.
- ಬೈಕ್‌ನಲ್ಲಿ ಮೃತದೇಹವನ್ನು ಕಟಕಬಾವಿಯ ಒಂದು ತೆರೆದ ಬೋರ್‌ವೆಲ್ ಬಳಿಗೆ ಒಯ್ಯಲಾಯಿತು (ಸುಮಾರು 35 ಕಿ.ಮೀ. ದೂರ)
- ಅಲ್ಲಿ ಸ್ವಾಮೀಜಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಯ ಒಳಗೆ ಹಾಕಲಾಗಿದೆ.
- ದೇಹದ ತುಂಡುಗಳ ಜತೆ ರಕ್ತಸಿಕ್ತ ಬಟ್ಟೆಗಳನ್ನು ಕೂಡಾ ಅದೇ ಬಾವಿಗೆ ಎಸೆಯಲಾಗಿದೆ.
- ಸ್ವಾಮೀಜಿಯ ಒಂದು ಡೈರಿಯನ್ನು ಕೂಡಾ ಸುಟ್ಟು ಹಾಕಲಾಗಿದೆ.
ಎಫ್‌ಐಆರ್‌ನ ಈ ವಿಚಾರಗಳನ್ನು ಗಮನಿಸಿದಾಗ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್ ದಲಾಯತ್ ಆರಂಭದಿಂದಲೇ ಈ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು, ಸಂಪೂರ್ಣವಾಗಿ ತೊಡಗಿಕೊಂಡಿದ್ದು ಸ್ಪಷ್ಟವಾಗುತ್ತದೆ.
ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ತನಿಖೆ
ಆರೋಪಿಗಳು ಡೈರಿಯನ್ನು ಸುಟ್ಟು ಹಾಕಲು ಏನು ಕಾರಣ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅದರಲ್ಲಿ ಸ್ವಾಮೀಜಿ ಬರೆದಿಡುತ್ತಿದ್ದ ಅಂಶದ ಬಗ್ಗೆ ವಿಚಾರಣೆ ಮುಂದುವರಿದಿದೆ. ಸ್ವಾಮೀಜಿ ಬಳಿ ಇದ್ದ ಡೈರಿ ಸಿಕ್ಕಿದ್ದರೆ ಪ್ರಕರಣದ ತನಿಖೆಗೂ ಸಹಾಯ ಆಗ್ತಿತ್ತು ಎಂಬ ಅಭಿಪ್ರಾಯ ಪೊಲೀಸ್ ವಲಯದಲ್ಲಿದೆ.
ಇದನ್ನೂ ಓದಿ: Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ
ನಾಪತ್ತೆಯಿಂದ ಕೊಲೆಯವರೆಗೆ
ಜೈನಮುನಿ ಶ್ರೀ ಕಾಮ ಕುಮಾರ ನಂದಿ ಮಹರಾಜ್ ಅವರು ಕಳೆದ ಗುರುವಾರದಿಂದಲೇ ನಾಪತ್ತೆಯಾಗಿದ್ದರು. ಶುಕ್ರವಾರ ಅವರ ನಾಪತ್ತೆಯ ಬಗ್ಗೆ ಪ್ರಕರಣ ದಾಖಲಾಗಿ ಹುಡುಕಾಟ ಆರಂಭವಾಗಿತ್ತು. ಶನಿವಾರ ಮುಂಜಾನೆ ಇದೊಂದು ಕೊಲೆ ಎಂದು ಬಯಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆರಂಭದಲ್ಲಿ ಪ್ರಕರಣದಲ್ಲಿ ನಾರಾಯಣ ಮಾಳಿ ಒಬ್ಬನದೇ ಹೆಸರು ಕೇಳಿಬಂದಿತ್ತು. ಬಳಿಕ ಹುಸೇನ್ ದಲಾಯತ್ ಹೆಸರು ಸೇರಿತ್ತು. ಆತ ಶವವನ್ನು ಕತ್ತರಿಸಿ ಎಸೆಯುವಲ್ಲಿ ಸಹಾಯ ಮಾಡಿದ್ದ ಎಂದು ಹೇಳಲಾಗಿತ್ತು. ಆದರೆ, ಈಗ ಆತನೂ ಕೊಲೆಯಲ್ಲಿ ಸಂಪೂರ್ಣ ಭಾಗಿದಾರ ಎನ್ನುವುದು ಸ್ಪಷ್ಟವಾಗಿದೆ.