Site icon Vistara News

Jain Muni murder : ಹಂತಕರ ಸಂಪರ್ಕದಲ್ಲಿದ್ದವರಿಗೆ ಡವಡವ, ಕೊನೆ ಬಾರಿ ಕಾಲ್‌ ಮಾಡಿದ್ದು ಯಾರಿಗೆ?

Jain Muni murder case

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮಠದ ಮುನಿವರ್ಯರಾದ ಶ್ರೀ ಕಾಮಕುಮಾರ ನಂದಿ ಮಹಾರಾಜರ (Jain muni Sri Kamakumara nandi Maharaj) ಬರ್ಬರ ಹತ್ಯೆಗೆ (Jain Muni murder) ಸಂಬಂಧಿಸಿ ಇಬ್ಬರು ಆರೋಪಿಗಳಾದ ನಾರಾಯಣ ಮಾಳಿ (Narana Male murder accused) ಮತ್ತು ಹುಸೇನ್‌ ದಲಾಯತ್‌ನನ್ನು (Hussain dalayat accused) ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ನಡೆದ ಕೊಲೆಯಂತೆ ಕಾಣುತ್ತದೆ, ಆದರೆ ಕೊಲೆ ಮಾಡಿದ ರೀತಿ ಕ್ರೌರ್ಯದ ಪರಾಕಾಷ್ಠೆಯನ್ನು ತೋರಿಸುತ್ತಿದೆ. ಈ ಕೊಲೆಯಲ್ಲಿ ಇವರಿಬ್ಬರೇ ಇರುವುದೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬ ವಿಚಾರದಲ್ಲೂ ತನಿಖೆ ನಡೆಯುತ್ತಿದೆ. ಇದು ಹಲವರ ಎದೆಯಲ್ಲಿ ಡವಡವ ಸೃಷ್ಟಿ ಮಾಡಿದೆ.

ಆರೋಪಿಗಳು ಮಠದಲ್ಲಿ ಮುನಿಗಳನ್ನು ಮೊದಲು ವಿದ್ಯುತ್‌ ಶಾಕ್‌ ನೀಡಿ ಕೊಲೆ ಮಾಡಲು ಯತ್ನಿಸಿದ್ದರು. ಆದರೆ, ಅದು ವಿಫಲವಾದಾಗ ಕೊರಳಿಗೆ ಟವೆಲ್‌ ಬಿಗಿದು ಕೊಂದಿದ್ದರು. ಶವವನ್ನು 35 ಕಿ.ಮೀ. ದೂರದ ಕಟಕಬಾವಿಗೆ ಸಾಗಿಸಿ ಅಲ್ಲಿ ಒಂಬತ್ತು ತುಂಡುಗಳಾಗಿ ಮಾಡಿ ಒಂದು ತೆರೆದ ಬಾವಿಗೆ ಹಾಕಿದ್ದರು. ಮುನಿಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಆಪ್ತರನ್ನು ವಿಚಾರಿಸಿದಾಗ ಕೊಲೆಯ ವಿಚಾರ ಬಯಲಾಗಿತ್ತು. ಸ್ವಾಮೀಜಿಗಳಿಗೆ ಆಪ್ತನೇ ಆಗಿದ್ದ ನಾರಾಯಣ ಮಾಳಿ ತನ್ನ ಗೆಳೆಯ ಹುಸೇನ್‌ ಡಲಾಯತ್‌ ಜತೆ ಸೇರಿ ಈ ಕೊಲೆ ಮಾಡಿದ್ದ. ಈ ನಡುವೆ ಅವರು ಜೈನ ಮುನಿಗಳಿಗೆ ಸೇರಿದ ಒಂದು ಡೈರಿಯನ್ನೂ ಸುಟ್ಟು ಹಾಕಿದ್ದ.

ಹಂತಕರ ಸಂಪರ್ಕದಲ್ಲಿದ್ದವರಿಗೆ ನೋಟಿಸ್‌

ಪೊಲೀಸರು ಹಂತಕರು ಸಿಕ್ಕಿದ್ದಾರೆ ಎಂಬಲ್ಲಿಗೆ ಈ ಪ್ರಕರಣದ ತನಿಖೆಯನ್ನು ನಿಲ್ಲಿಸಿಲ್ಲ. ಇದರಲ್ಲಿ ದೊಡ್ಡ ಮಟ್ಟದ ಷಡ್ಯಂತ್ರವಿದೆ ಎಂಬ ಬಿಜೆಪಿ ಆರೋಪವೂ ಸೇರಿದಂತೆ ನಾನಾ ಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಹೀಗಾಗಿ ಕೊಲೆಗೆ ಹಿಂದೆ ಮತ್ತು ಮುಂದೆ ಹಂತಕರು ಯಾರಿಗೆಲ್ಲ ಕರೆ ಮಾಡಿದ್ದಾರೆ ಎಂಬ ಅಂಶವನ್ನು ಇಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ. ಹೀಗಾಗಿ ಹಂತಕರ ಫೋನ್ ಸಂಪರ್ಕದಲ್ಲಿ ಇದ್ದವರಿಗೆ ಡವಡವ ಶುರುವಾಗಿದೆ.

ಘಟನೆಗೂ ಮುನ್ನ, ಬಳಿಕ ಹಂತಕರಿಗೆ ಮೊಬೈಲ್ ಕರೆ ಮಾಡಿದವರಿಗೆ ವಿಚಾರಣೆಗೆ ಹಾಜರಾಗುವಂತೆ ಚಿಕ್ಕೋಡಿ ಪೋಲೀಸರು ನೋಟೀಸ್ ನೀಡುತ್ತಿದ್ದಾರೆ. ಕೊಲೆ ಘಟನೆಗೂ ಒಂದು ವಾರ ಮುನ್ನ ಯಾರೆಲ್ಲ ಕರೆ ಮಾಡಿದ್ರು ಎಂಬ ಮಾಹಿತಿ ಕಲೆ ಹಾಕಿರುವ ಪೊಲೀಸರು ಘಟ‌ನೆ ಬಳಿಕ ಹಂತಕರ ಸಂಪರ್ಕದಲ್ಲಿ ಇದ್ದವರ ಮಾಹಿತಿಯೂ ಸಂಗ್ರಹಿಸುತ್ತಿದ್ದಾರೆ.

ಕಾಮಕುಮಾರ ನಂದಿ ಮಹಾರಾಜರ ಎರಡು ಮೊಬೈಲ್, ಆರೋಪಿಗಳ ತಲಾ ಒಂದು ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು ಜೈನಮುನಿಗಳ ನಿಕಟ ಸಂಪರ್ಕದಲ್ಲಿ ಇದ್ದವರು ಯಾರು? ಹಂತಕರೊಂದಿಗೆ ಸಂಪರ್ಕದಲ್ಲಿ ಇದ್ದವರು ಯಾರು ಎಂಬ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ.

ಕೊಲೆಗೂ ಮುನ್ನ ಜೈನಮುನಿಗಳು ಯಾರನ್ನು ಸಂಪರ್ಕಿಸಿದ್ದರು ಎಂಬ ಅಂಶದ ಮೇಲೂ ತನಿಖೆ ಸಾಗುತ್ತಿದೆ. ಜೈನಮುನಿಗಳ ಸಂಪರ್ಕಿಸಿದವರ ಮಾಹಿತಿಯನ್ನೂ ಸಹ ಕಲೆ ಹಾಕಿ ವಿಚಾರಣೆ ನಡೆಸಲು‌ ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ: Jain Muni Murder: ಜೈನ ಮುನಿ ಹತ್ಯೆಗೆ ಬಿಗ್‌ ಟ್ವಿಸ್ಟ್;‌ ಹುಸೇನ್‌ ದಲಾಯತ್‌ ಕೂಡಾ ಕೊಲೆಯಲ್ಲಿ ಭಾಗಿ

Exit mobile version