ಹುಬ್ಬಳ್ಳಿ: ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ (Jain muni Murder) ಅವರ ಹತ್ಯೆ ವಿಚಾರವನ್ನು ಜೈನ ಸಮುದಾಯದವರು ಮತ್ತು ಜೈನಮುನಿಗಳು ಗಂಭೀರವಾಗಿ ಪರಿಗಣಿಸಿದ್ದು, ರಕ್ಷಣೆಗಾಗಿ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾರೆ. ಒಂದು ವೇಳೆ ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ಸಂಜೆಯೊಳಗೆ ತೀರ್ಮಾನವನ್ನು ಪ್ರಕಟ ಮಾಡದೇ ಇದ್ದರೆ ತಮ್ಮ ಆಮರಣಾಂತ ಉಪವಾಸವನ್ನು ಮುಂದುವರಿಸುವುದಾಗಿ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನಮುನಿ ಗುಣಧರನಂದಿ ಮಹಾರಾಜ್ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದು, ನಮ್ಮ ಭಾರತ ದೇಶದಲ್ಲಿ ಆತಂಕವಾದಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆಯನ್ನು ನಮ್ಮ ಜೈನ ಮುನಿಗಳಿಗೆ ನೀಡಲಾಗಿದೆ. ಒಬ್ಬ ಜೈನಮುನಿಗೆ ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ಇಂತಹ ಘಟನೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರೀತಿಯಲ್ಲಿಯೂ ಸ್ಪಂದಿಸಿಲ್ಲ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:Jain Muni Murder : ಜು.10ಕ್ಕೆ ಜೈನರ ಮೌನ ಪ್ರತಿಭಟನೆ; ಸಿಬಿಐಗೆ ಕೊಡಿ ಎಂದ ಜೋಶಿ
ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸೋಮವಾರ (ಜುಲೈ 10) ಸಂಜೆ 5 ಗಂಟೆಯವರೆಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಲಾಗಿದೆ. ಜೈನಮುನಿಗಳು ದೇಶಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಳ್ಳುವವರಿದ್ದಾರೆ. ಅಂತಹ ಜೈನಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಬೇಡಿಕೆ ಇಡಲಾಗಿದೆ. ಮಳೆ ಚಳಿ ಎನ್ನದೇ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವ ಮುನಿಗಳಿಗೆ ಯಾವುದೇ ಆಶ್ರಯ, ಭದ್ರತೆ ಇರುವುದಿಲ್ಲ. ಹೀಗಾಗಿ ಈ ರೀತಿ ಪಾದಯಾತ್ರೆ ನಡೆಸಲಿರುವ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಜತೆಗೆ ಆಶ್ರಯ ಕಲ್ಪಿಸಬೇಕು ಎಂಬ ಬಗ್ಗೆ ಕೋರಲಾಗಿದೆ. ಈ ಮನವಿಗೆ ಸರ್ಕಾರಗಳು ಸ್ಪಂದಿಸುವವರೆಗೆ ನಾನು ಆಮರಣಾಂತ ಉಪವಾಸವನ್ನು ಕೈಬಿಡುವುದಿಲ್ಲ ಎಂದು ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.
ಶಾ ಗಮನಕ್ಕೆ ತರುತ್ತೇನೆ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ: ಕಾಮಕುಮಾರ ನಂದಿ ಮಹಾರಾಜ್ ಸ್ವಾಮೀಜಿ ಹತ್ಯೆ ಖಂಡನೀಯ. ಅವರಿಗೆ ವಿದ್ಯುತ್ ಶಾಕ್ ಕೊಟ್ಟು, ಕೈ ಕಾಲು ಕತ್ತರಿಸಿ ಬೋರ್ವೆಲ್ನಲ್ಲಿ ಹಾಕಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆಯಾಗಿದೆ. ಜೈನ ಸನ್ಯಾಸಿಗಳು ಸರ್ವಸಂಗ ಪರೀತ್ಯಾಗಿಗಳು. ಅವರು ಕಾಣೆಯಾಗಿದ್ದಾರೆ ಅಂದ ಮೇಲೂ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ತಗೆದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡರು. ಈ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, ಜೈನಮುನಿಗಳು ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ದರು ಎಂಬ ಮಾಹಿತಿ ಇದೆ. ಆದರೆ, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಶಾಸಕ ಅಭಯ ಪಾಟೀಲ್ ಅವರು ಈ ವಿಷಯವನ್ನು ತೀವ್ರವಾಗಿ ತೆಗೆದುಕೊಂಡಾಗ ಹೆಸರು ಬಿಡುಗಡೆ ಮಾಡಿದರು. ಯಾರೇ ಮಾಡಿದರೂ ಇದು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿಪಡಿಸಕೊಳ್ಳಬೇಕು. ಮುನಿಗಳ ಬೇಡಿಕೆಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ. ರಾಜ್ಯ ಸರ್ಕಾರಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಪಂಚಭೂತಗಳಲ್ಲಿ ಲೀನ
ಜೈನಮುನಿಗಳಿಗೆ ರಕ್ಷಣೆ ಸಿಗುವವರೆಗೂ ಆಮರಣ ಉಪವಾಸ ಮಾಡುವುದಾಗಿ ವರೂರು ನವಗ್ರಹ ತೀರ್ಥಕ್ಷೇತ್ರದ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ. ಅವರನ್ನು ಭೇಟಿಯಾಗಿ ಆಮರಣ ಉಪವಾಸವನ್ನು ಕೈಬಿಡಿ ಎಂದು ನಾನು ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನ್ಯಾಯ ಸಿಗದೆ ಇದ್ದಲ್ಲಿ ಎಲ್ಲರೂ ಕೂಡಿ ಪ್ರತಿಭಟನೆ ಮಾಡೋಣ ಎಂದು ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿದರು.