ಚಿಕ್ಕೋಡಿ: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯನ್ನು ಬರ್ಬರವಾಗಿ ಹತ್ಯೆ (Jain muni Murder) ಮಾಡಲಾಗಿದ್ದು, ಹಣಕಾಸಿನ ವ್ಯವಹಾರಕ್ಕೋಸ್ಕರ ಕೊಲೆ ಮಾಡಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಜೈನಮುನಿ ಕಾಮಕುಮಾರ ನಂದಿ ಸ್ವಾಮೀಜಿ ಜತೆ ಪ್ರಮುಖ ಆರೋಪಿಯು ಉತ್ತಮ ಒಡನಾಟ ಹೊಂದಿದ್ದ. ಮುನಿಗಳ ವಿಶ್ವಾಸ ಗಳಿಸಿದ್ದ ಆತ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ. ನೀಡಿದ ಹಣವನ್ನು ಜೈನಮುನಿಗಳು ವಾಪಸ್ ಕೇಳಿದ್ದಕ್ಕೆ ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿ ಆತ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಬಯಲಾಗಿದೆ.
ಇದನ್ನೂ ಓದಿ: Weather Report : ಕರಾವಳಿಗೆ ಆರೆಂಜ್, ಮಲೆನಾಡಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ಹೇಗಿರಲಿದೆ ಮಳೆ ಅಬ್ಬರ
ಘಳಿಗೆಗೊಂದು ಹೇಳಿಕೆ
ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೈದು ಸಂಬಂಧಿಕರ ಗದ್ದೆಯಲ್ಲಿ ಎಸೆದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮೂಲತಃ ಖಟಕಬಾವಿ ಗ್ರಾಮದವನೇ ಆಗಿದ್ದ ಈ ಆರೋಪಿಯು ಜೈನಮುನಿ ವಿಶ್ವಾಸ ಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ. ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಜೈನಮುನಿಗಳು ಗಟ್ಟಿಯಾಗಿ ಹೇಳಿದ್ದರಿಂದ ಆತ ಜೈನಮುನಿಗಳ ಕೊಂದು ಸಂಬಂಧಿಕರ ಗದ್ದೆಯ ಕೊಳವೆಬಾವಿಯಲ್ಲಿ ಎಸೆದಿದ್ದಾಗಿ ಮಾಹಿತಿ ನೀಡಿದ್ದ. ಅಲ್ಲದೆ, ತನ್ನ ಕೃತ್ಯಕ್ಕೆ ಚಿಕ್ಕೋಡಿ ಮೂಲದ ಯುವಕನೊಬ್ಬನ ಸಹಾಯ ಪಡೆದಿದ್ದಾಗಿ ಹೇಳಿಕೊಂಡಿದ್ದ. ಸದ್ಯ ಇಬ್ಬರನ್ನೂ ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಜೆಸಿಬಿಗಳ ಸಹಾಯದಿಂದ ಶೋಧಕಾರ್ಯವನ್ನು ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇದೆ. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.
ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು.
ಇದನ್ನೂ ಓದಿ: Kichcha Sudeep: ನಿರ್ಮಾಪಕ ಕುಮಾರ್ ಆರೋಪಕ್ಕೆ ಕೆಂಡವಾದ ಕಿಚ್ಚ; 10 ಕೋಟಿ ರೂ. ಕೇಳಿ ನೋಟಿಸ್, ಕೇಸ್ ದಾಖಲು
ರಾತ್ರಿ ಇಡೀ ಪೊಲೀಸರಿಗೆ ತಪ್ಪು ಮಾಹಿತಿ
ತನಿಖೆ ಸಂದರ್ಭದಲ್ಲಿ ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಶವವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ, ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿದೆ.