ಬೆಳಗಾವಿ: ರಾಜ್ಯಾದ್ಯಂತ ಬಿಜೆಪಿಯ ಜನಸಂಕಲ್ಪ ಯಾತ್ರೆ ಜೋರಾಗಿ ನಡೆಯುತ್ತಿದೆ. ಮಂಗಳವಾರ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಎರಡು ಕಾರ್ಯಕ್ರಮಗಳು ನಡೆದಿದ್ದರೆ ಬುಧವಾರ ಬೆಳಗಾವಿ ಜಿಲ್ಲೆಯಲ್ಲೇ ಎರಡು ಕಾರ್ಯಕ್ರಮಗಳು ಆಯೋಜನೆಯಾಗಿವೆ. ಮಧ್ಯಾಹ್ನ 1 ಗಂಟೆಗೆ ರಾಯಬಾಗ ಮತ್ತು ಸಂಜೆ 4.30ಕ್ಕೆ ಖಾನಾಪುರದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಾರಕಿಹೊಳಿ ಸಹೋದರರು ಭಾಗವಹಿಸುತ್ತಾರಾ ಎನ್ನುವ ಕುತೂಹಲ ಜೋರಾಗಿದೆ.
ರಾಯಬಾಗದಲ್ಲಿ ನಡೆಯಲಿರುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಶೇಷ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ೧೨.೨೫ಕ್ಕೆ ಆಗಮಿಸಲಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿ ಜಿಲ್ಲೆಯ ನಾಯಕರು ಸಾಥ್ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ರಾಯಬಾಗದಿಂದ ಖಾನಾಪುರಕ್ಕೆ ಪ್ರಯಾಣ ಮಾಡಲಿರುವ ಸಿಎಂ 4.35ಕ್ಕೆ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮರಾಠಾ, ಅಹಿಂದ ಮತಗಳನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿಯಲ್ಲಿ ಈ ಸಂಕಲ್ಪ ಯಾತ್ರೆ ನಡೆಯುತ್ತಿರುವುದು ಕಂಡುಬರುತ್ತಿದೆ. ಈ ಸಮುದಾಯವನ್ನು ಒಳಗೊಳಿಸುವುದು ಬಿಜೆಪಿಯ ಸಂಕಲ್ಪವಾಗಿದೆ.
ಈಗ ಇರುವ ಕುತೂಹಲ ಏನೆಂದರೆ, ಈ ಸಮಾವೇಶದಲ್ಲಿ ಬೆಳಗಾವಿಯಲ್ಲಿ ಭಾರಿ ಪ್ರಭಾವಿಯಾಗಿರುವ ಜಾರಕಿಹೊಳಿ ಸಹೋದರರು ಭಾಗವಹಿಸುತ್ತಾರಾ ಎನ್ನುವುದು. ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ರಮೇಶ್ ಜಾರಕಿಹೊಳಿ ಅವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಮತ್ತೆ ಸಚಿವರಾಗಿ ಮಾಡಬೇಕು ಎನ್ನುವುದು ಅವರ ಬೇಡಿಕೆ. ಅದು ಈಡೇರಿಲ್ಲದೆ ಇರುವುದರಿಂದ ಅವರು ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ದೂರವಿದ್ದಾರೆ ಎನ್ನಲಾಗಿದೆ. ಈ ನಡುವೆ ಕೆಎಂಎಫ್ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಕೂಡಾ ಪಕ್ಷದ ವಿಚಾರಕ್ಕೆ ಬಂದರೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ. ಇದೆಲ್ಲದರ ನಡುವೆ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಶಬ್ದದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಚರ್ಚೆಗೆ ಕಾರಣವಾಗಿದೆ.
ಜನಸಂಕಲ್ಪ ಯಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಯ ಮೇಲೆಯೇ ಎಲ್ಲರೂ ಮಾತನಾಡುವ ಸಾಧ್ಯತೆ ಇರುವುದರಿಂದ ಜಾರಕಿಹೊಳಿ ಬ್ರದರ್ಸ್ ನಡೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ | ಬಿಜೆಪಿಗೆ ಗೆಲುವಿನ ಟ್ರೆಂಡ್ ಇದೆ, 150 ಸ್ಥಾನ ಗೆಲ್ಲಲಿದೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್