ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ತಮ್ಮನ್ನು ಮೊಣಕಾಲ್ಮೂರಿಗೆ ಸೀಮಿತ ಮಾಡದೇ ಉತ್ತರ ಕರ್ನಾಟಕ ಭಾಗದಲ್ಲಿ ಪೂರ್ಣ ಬಳಸಿಕೊಂಡಿದ್ದೇ ಆಗಿದ್ದರೆ ಬಿಜೆಪಿ 134 ಸ್ಥಾನ ಗೆದ್ದು ಸರಳ ಬಹುಮತದಿಂದ ಸರ್ಕಾರ ರಚನೆ ಮಾಡುತ್ತಿತ್ತು ಎಂದು ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ.
ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾಹಿತಿ ನೀಡುವ ಸಲುವಾಗಿ ಬ್ರೂಕ್‌ಫೀಲ್ಡ್ ಲೇಔಟ್‌ನಲ್ಲಿರುವ ʼಪಾರಿಜಾತʼ ನಿಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಮಾತನಾಡಿದರು.
ತಮ್ಮ ಬೆನ್ನಹಿಂದೆ ಜಗಜ್ಯೋತಿ ಬಸವೇಶ್ವರರ ಬೃಹತ್ ಪ್ರತಿಮೆ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಣ್ಣ ಪ್ರತಿಮೆಯನ್ನು ಇರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, 2018ರ ಚುನಾವಣೆಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗಿನ ಮಾತುಕತೆಯನ್ನು ನೆನೆದರು.
ಕರ್ನಾಟಕ ಚುನಾವಣೆ ಕುರಿತು ಒಂದು ಸಂದರ್ಶನದಲ್ಲಿ, ಜನಾರ್ದನ ರೆಡ್ಡಿಗೂ ನಿಮಗೂ ಏನು ಸಂಬಂಧ? ಎಂದು ಪತ್ರಕರ್ತರು ಪ್ರಶ್ನಿಸಿದರು. ಪಕ್ಷಕ್ಕೂ ರೆಡ್ಡಿ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳಿದ್ದರು. ಇದನ್ನು ನಾನು ಮನೆಯಲ್ಲೇ ಕುಳಿತು ಟಿವಿಯಲ್ಲಿ ವೀಕ್ಷಿಸಿದ್ದೆ. ಎರಡು ದಿನದ ನಂತರ ನವದೆಹಲಿಯಿಂದ ಶ್ರೀರಾಮುಲು ಫೋನ್ ಮಾಡಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಆಗಮಿಸಿ ಎಂದರು.
ಅಮಿತ್ ಶಾ ಮನೆಗೆ ಕರೆಸಿಕೊಂಡು ಮಾತನಾಡಿದರು. ಕರ್ನಾಟಕದಲ್ಲಿ ಪಕ್ಷಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಆ ರೀತಿ ಹೇಳಿಬಿಟ್ಟೆ. ಹಾಗೆ ಹೇಳಬಾರದಿತ್ತು ಎಂದು ಶ್ರೀರಾಮುಲು ಅವರು, ಯಡಿಯೂರಪ್ಪ ಅವರು ಹೇಳಿದ್ದಾರೆ. ಈಗ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡರೆ, ಜನಾರ್ದನ ರೆಡ್ಡಿ ಮೇಲೆ ಬಿಜೆಪಿ ಅವಲಂಬಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತವೆ. ಆದ್ಧರಿಂದ, ನೀವು ಪಕ್ಷದ ಮೇಲೆ ಅಭಿಮಾನ ಇಟ್ಟು ಪ್ರಚಾರದಲ್ಲಿ ಭಾಗವಹಿಸಿ. ಮೊಣಕಾಲ್ಮೂರಿನಲ್ಲಿ ಶ್ರೀರಾಮುಲು ಅವರನ್ನು ಗೆಲ್ಲಿಸಿಕೊಡಿ ಎಂದರು. ಆನಂತರದಲ್ಲಿ ಬಿಜೆಪಿಯ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿ ಕೊಡುವುದಾಗಿ ಹೇಳಿದ್ದರು. ಯಡಿಯೂರಪ್ಪ ಅವರನ್ನು ಸಿಎಂ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ವರುಣ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿತ್ತು. ನಾಮಪತ್ರ ಸಲ್ಲಿಸಲು ಲಕ್ಷಾಂತರ ಜನರು ಸೇರಿದ್ದರು. ಶ್ರೀರಾಮುಲು ಅವರೂ ಈ ವೇಳೆ ಉಪಸ್ಥಿತರಿರಲು ಹೆಲಿಕಾಪ್ಟರ್ ಮೂಲಕ ಮೈಸೂರಿನವರೆಗೆ ಹೋಗಿದ್ದರು. ಇದೆಲ್ಲದರ ನಡುವೆಯೇ, ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರ ಬಾಯಿಂದಲೇ ಹೇಳಿಸಲಾಯಿತು. ಪಕ್ಷದ ಹಿರಿಯರು ಈ ಮುಂಚೆಯೇ ಇದನ್ನು ಹೇಳಬಹುದಾಗಿತ್ತು. ಘಟಾನುಘಟಿ ನಾಯಕರ ಎದುರು ಸ್ಪರ್ಧೆ ಮಾಡುವ ಧೈರ್ಯ ತೋರಿದ ಸಂದರ್ಭದಲ್ಲಿ ಘೋಷಣೆ ಮಾಡಿಸಿದರು.
ಆ ಚುನಾವಣೆಯಲ್ಲಿ ಪಕ್ಷಕ್ಕೆ 104 ಸ್ಥಾನ ಲಭಿಸಿತು, ಸರಳ ಬಹುಮತ ಸಿಗಲಿಲ್ಲ. ಆದರೆ ನಂತರ ಅಮಿತ್ ಶಾ ನನ್ನನ್ನು ಭೇಟಿ ಮಾಡಲಿಲ್ಲ. ಭೇಟಿ ಮಾಡಲು ಐದಾರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಯಾವ ಕಾರಣಕ್ಕೆ ಭೇಟಿ ಮಾಡಲಿಲ್ಲ ಎನ್ನುವುದು ಗೊತ್ತಾಗಲಿಲ್ಲ. ವಿಜಯೇಂದ್ರ ಅವರು ಸ್ಪರ್ಧೆ ಮಾಡಿದ್ದರೆ ಆ ಭಾಗದಲ್ಲಿ ಮೂರ್ನಾಲ್ಕು ಕ್ಷೇತ್ರ ಗೆದ್ದು ಬರುತ್ತಿದ್ದರು. ನನ್ನನ್ನು ಮೊಣಕಾಲ್ಮೂರಿಗೆ ಸೀಮಿತ ಮಾಡದೆ ಉತ್ತರ ಕರ್ನಾಟಕ ಭಾಗದಲ್ಲಿ ಬಳಸಿಕೊಂಡಿದ್ದರೆ ಕನಿಷ್ಟ 20-30 ಸಾವಿರ ವೋಟುಗಳು ಬೇಕಾದ ಕ್ಷೇತ್ರಗಳಲ್ಲಿ ಹೆಚ್ಚು ಶಾಸಕರು ಬಿಜೆಪಿಯಿಂದ ಗೆದ್ದುಬರುತ್ತಿದ್ದರು. 104ರ ಬದಲಿಗೆ 134 ಶಾಸಕರು ಜಯಗಳಿಸುತ್ತಿದ್ದರು. 30-40 ವರ್ಷದಿಂದ ಪಕ್ಷಕ್ಕೆ ದುಡಿದ 15-20 ಜನರಿಗೆ ಅಧಿಕಾರ ಸಿಗುತ್ತಿತ್ತು.
ಸರಳ ಬಹುಮತಕ್ಕಿಂತ ಕಡಿಮೆ ಬಂದಿದ್ದರಿಂದ ಈಗ ಹೊರಗಿನಿಂದ ಶಾಸಕರನ್ನು ಕರೆತಂದು ಸರ್ಕಾರ ಮಾಡಲಾಗಿದೆ. ಇದೂ ಒಂದು ರೀತಿಯ ಸಮ್ಮಿಶ್ರ ಸರ್ಕಾರದ ರೀತಿ ಆಗಿದೆ ಎಂದರು.
ಇದನ್ನೂ ಓದಿ | Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ