ಕೊಪ್ಪಳ: ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಚುನಾವಣೆಯನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ್ದು, ಸ್ವತಃ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾಲಕ್ಷ್ಮಿ ಅವರೇ ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಈ ವಿಚಾರವನ್ನು ಜನಾರ್ದನ ರೆಡ್ಡಿ (Janardhana Reddy) ಅವರೇ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಲ್ಯಾಣ ರಥ ಯಾತ್ರೆಯಲ್ಲಿ ರೆಡ್ಡಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಬಳ್ಳಾರಿ ನಗರದಲ್ಲಿ ಈಗ ರೆಡ್ಡಿ ಅವರ ಸೋದರ ಸೋಮಶೇಖರ ರೆಡ್ಡಿ ಬಿಜೆಪಿ ಶಾಸಕರಾಗಿದ್ದಾರೆ. ಇದರೊಂದಿಗೆ ಬಳ್ಳಾರಿ ನಗರ ಕೌಟುಂಬಿಕ ಹೋರಾಟಕ್ಕೆ ಅಣಿಯಾಗಬೇಕಾಗಿದೆ.
ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಕಲ್ಯಾಣ ರಥಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʻʻಯಾರ ಮೇಲೂ ಪ್ರತಿಕಾರ ತೀರಿಸಿಕೊಳ್ಳಲು ನಾನು ಪಕ್ಷ ಸ್ಥಾಪಿಸಿಲ್ಲ. ಸಾಮಾನ್ಯ ಜನರ ಜೀವನ ಹೇಗಿರುತ್ತದೆ ಎಂದು ನನಗೆ ಗೊತ್ತು. ನಾನೂ ಒಬ್ಬ ಸಾಮಾನ್ಯ ಪೊಲೀಸ್ ಕಾನ್‌ಸ್ಟೇಬಲ್ ಮಗ. ಹಿಂದುಳಿದ, ದೀನ ದಲಿತರ, ಬಡವರ ಕಲ್ಯಾಣಕ್ಕಾಗಿ ನಾನು ಶ್ರಮಿಸುತ್ತೇನೆʼʼ ಎಂದು ಹೇಳಿದರು.
ʻʻಕಲ್ಯಾಣ ಕರ್ನಾಟಕ ಪಕ್ಷ ಜನ್ಮ ತಾಳಿ ಕೇವಲ ಒಂದು ತಿಂಗಳಾಗಿದೆ. 30 ದಿನದ ಈ ಕೂಸು ರಾಜ್ಯದ ಅನೇಕರ ನಿದ್ದೆಗೆಡಿಸಿದೆ. ಈ ಹಿಂದೆ ನನ್ನ ಹೆದರಿಸಲು ಪ್ರಯತ್ನ ಮಾಡಿದರು. ಆಗಲೇ ನಾನು ಹೆದರಿಲ್ಲ. ಈಗಲೂ ನಾನು ಯಾರಿಗೂ ಹೆದರುವುದಿಲ್ಲʼʼ ಎಂದರು ಜನಾರ್ದನ ರೆಡ್ಡಿ.
ಸಮಯ ಉಳಿಸಲು ಹೆಲಿಕಾಪ್ಟರ್ ಖರೀದಿಸಿದೆ
ʻʻನಾನು ಹೆಲಿಕಾಪ್ಟರ್ ಗೆದುಕೊಂಡಿದ್ದು ಸಮಯ ಉಳಿತಾಯಕ್ಕಾಗಿ. ನಾನು ಸಚಿವನಾಗಿದ್ದಾಗ ಸಮಯ ಉಳಿತಾಯ ಮಾಡಿ ಜನರ ಜೊತೆ ಇರಲೆಂದು ಖರೀದಿಸಿದೆ. ನಾನು ಯಾರ ಜೇಬಿಗೂ ಕೈ ಹಾಕಿ ಗಳಿಸಿಲ್ಲ. ನಾನೇ ದುಡಿದ ಹಣದಿಂದ ಅಭಿವೃದ್ಧಿಪಡಿಸಿದೆʼʼ ಎಂದು ಹೇಳಿದರು ಜನಾರ್ದನ ರೆಡ್ಡಿ. ʻʻಬಸವಣ್ಣನವರ ತತ್ವ ಸಿದ್ದಾಂತದ ಮೇಲೆ 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ರಾಜ್ಯದಾದ್ಯಂತ ಓಡಾಡಿದ್ದೆ. ಗಂಗಾವತಿ ಕ್ಷೇತ್ರಕ್ಕೆ ಅನೇಕ ಬಾರಿ ಬಂದಿದ್ದೆʼʼ ಎಂದು ನೆನಪಿಸಿದರು.
ಆಶೀರ್ವಾದ ಕೋರಿದ ಅರುಣಾಲಕ್ಷ್ಮಿ
ಈ ನಡುವೆ, ರ‍್ಯಾಲಿಯಲ್ಲಿ ಮಾತನಾಡಿದ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಅವರು ತಮ್ಮ ಪತಿಯ ಸಾಹಸಕ್ಕೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ʻʻಇಂದು ಮಾಘ ಮಾಸದ ದಶಮಿಯ ಪವಿತ್ರ ದಿನದಂದು ಕಲ್ಯಾಣ ರಥಯಾತ್ರೆ ಚಾಲನೆ ನೀಡುತ್ತಿದ್ದೇವೆ. ಜನಾರ್ದನ ರಡ್ಡಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಗೆಲುವು, ಅಧಿಕಾರ ಸಿಗಲಿ ಎಂದು ಕುಲದೇವರಲ್ಲಿ ಪ್ರಾರ್ಥಿಸಿದ್ದೇನೆ. ಎಲ್ಲ ದೇವರುಗಳು ಅವರಿಗೆ ಗೆಲುವು ನೀಡಲಿ. ಜನಾರ್ದನರೆಡ್ಡಿ ಅವರನ್ನು ಮನೆಯ ಮಗನಂತೆ ಪ್ರೀತಿಸುತ್ತಿರುವ ನಿಮ್ಮ ಪ್ರೀತಿಗೆ ನಾವು ಋಣಿ. ಜನಾರ್ದನರಡ್ಡಿ ಅವರು ಸದಾಶಯದೊಂದಿಗೆ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಮುಂದೆ ಮಹಾವೃಕ್ಷವಾಗಿ ಬೆಳೆದು ರಾಜ್ಯದ ಜನರಿಗೆ ನೆರಳು, ಸಿಹಿಯಾದ ಹಣ್ಣನ್ನು ಕೊಡುತ್ತದೆ. ಹೀಗಾಗಿ ಅವರಿಗೆ ಆಶೀರ್ವಾದ ಮಾಡಿʼʼ ಎಂದು ಮನವಿ ಮಾಡಿದರು.
ಇದನ್ನೂ ಓದಿ | Janardhana Reddy: ರಾಜಸ್ತಾನದ ಅಜ್ಮೀರ್ ದರ್ಗಾಕ್ಕೆ ಜನಾರ್ದನ ರೆಡ್ಡಿ ದಂಪತಿ ಭೇಟಿ