Site icon Vistara News

Karnataka Politics | ಜನಾರ್ದನ ರೆಡ್ಡಿ ಹೊಸ ಪಕ್ಷ ಪ್ರಸ್ತಾಪ; ಬಿಜೆಪಿ ಮೇಲೆ ಒತ್ತಡ ತಂತ್ರವೇ?

karnataka politics

ಮಾರುತಿ ಪಾವಗಡ, ಬೆಂಗಳೂರು

ಕರ್ನಾಟಕದ ಜನ ಹಲವು ಹೊಸ ಪಕ್ಷಗಳ ಹುಟ್ಟನ್ನು ಕಂಡಿದ್ದಾರೆ. ಹಲವಾರು ಘಟಾನುಘಟಿ ರಾಜಕಾರಣಿಗಳು ಹಠಕ್ಕಾಗಿ, ಛಲಕ್ಕಾಗಿ, ಸೇಡಿಗಾಗಿ ಮತ್ತು ಪ್ರತಿಷ್ಠೆಗಾಗಿ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಆದರೆ ಅವರು ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಇದೀಗ ಗಾಲಿ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ತಮ್ಮ ಪ್ರಭಾವ ಬಳ್ಳಾರಿ ಸುತ್ತಮುತ್ತ ಮಾತ್ರ ಎನ್ನುವುದು ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಇಷ್ಟಾಗಿಯೂ ಅವರ ಹೊಸ ಪಕ್ಷ ಸ್ಥಾಪನೆ ನಿರ್ಧಾರದ ನಡೆ ಕುತೂಹಲ ಮೂಡಿಸಿದೆ.

ಸರಿಸಾಟಿ ಇಲ್ಲದ ದೇವರಾಜ ಅರಸು ಸಹ ಯಶಸ್ವಿ ಆಗಲಿಲ್ಲ!

ರಾಜ್ಯದ ಮುಖ್ಯಮಂತ್ರಿಯಾಗಿ ಎಂಟು ವರ್ಷಗಳ ಕಾಲ ಉತ್ತಮ ಆಡಳಿತ ಕೊಟ್ಟಿದ್ದ ದೇವರಾಜು ಅರಸು ಮತ್ತು ಇಂದಿರಾ ಗಾಂಧಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆಗ ಅರಸು ಅವರನ್ನು ಕಾಂಗ್ರೆಸ್‌ನಿಂದ ಹೊರ ಹಾಕಲಾಯಿತು. ಕೊನೆಗೆ ಅವರು ಅರಸು ಕಾಂಗ್ರೆಸ್‌ನ್ನು 1970ರಲ್ಲಿ ಸ್ಥಾಪಿಸಿದರು. ಚುನಾವಣೆಯಲ್ಲಿ ಅವರ ಪಕ್ಷ ಯಶಸ್ಸು ಕಾಣಲಿಲ್ಲ. ಆದರೆ ಕಾಂಗ್ರೆಸ್‌ ಮತ ವಿಭಜನೆ ಆಗಿ ಜನತಾ ಪಕ್ಷ ಅಧಿಕಾರ ಹಿಡಿಯಲು ಇದು ಕಾರಣವಾಯಿತು. ಹಿಂದುಳಿದ ವರ್ಗದ ನಾಯಕ, ದೀನ ದಲಿತರ ಬಂಧು ಎಂದು ಖ್ಯಾತಿ ಗಳಿಸಿದ್ದ ಅರಸು ಅಂಥ ಅರಸರನ್ನೇ ಜನ ಹೊಸ ಪಕ್ಷದ ಅಡಿಯಲ್ಲಿ ಸ್ವೀಕರಿಸಲಿಲ್ಲ.

ಬಂಗಾರಪ್ಪ ಕಟ್ಟಿದ ಪಕ್ಷ ಒಂದೇ ಎರಡೇ!

ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಎಸ್‌ ಬಂಗಾರಪ್ಪ ಅವರು ಕಾಂಗ್ರೆಸ್‌ನಿಂದ ಸಿಡಿದು ಕ್ರಾಂತಿ ರಂಗ ಪಕ್ಷ ಸ್ಥಾಪಿಸಿ 1983ರಲ್ಲಿ ಜನತಾ ಪಕ್ಷದ ಜತೆ ಪ್ರಚಾರ ಮಾಡಿದರು. ಕ್ರಾಂತಿ ರಂಗ ಮತ್ತು ಬಿಜೆಪಿ ಬೆಂಬಲದೊಂದಿಗೆ ಜನತಾ ಪಕ್ಷ ಭರ್ಜರಿ ಜಯ ಗಳಿಸಿತು. ಕಾಂಗ್ರೆಸ್‌ ಹೀನಾಯವಾಗಿ ಸೋತಿತು. ಕಾಂಗ್ರೆಸ್‌ ಸೋಲಿನಲ್ಲಿ ಬಂಗಾರಪ್ಪ ಪ್ರಮುಖ ಪಾತ್ರ ವಹಿಸಿದರು. ಮುಂದೆ ರಾಮಕೃಷ್ಣ ಹೆಗಡೆ ಸಿಎಂ ಆದ ಬಳಿಕ ಬಂಗಾರಪ್ಪ ಮತ್ತೆ ಕಾಂಗ್ರೆಸ್‌ಗೆ ಮರಳಿದರು. 1990ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಂಗಾರಪ್ಪ ಸಿಎಂ ಸಹ ಆದರು. ಆದರೆ ಹೈಕಮಾಂಡ್ 1992ರಲ್ಲಿ ಬಂಗಾರಪ್ಪ ಅವರನ್ನ ಕೆಳಗಿಳಿಸಿತು. ಆಗ ಅವರು ಮತ್ತೆ ಸಿಡಿದೆದ್ದು ಕೆಸಿಪಿ (ಕರ್ನಾಟಕ ಕಾಂಗ್ರೆಸ್ ಪಕ್ಷ) ಕಟ್ಟಿದರು. ಇದರ ಪರಿಣಾಮ ಬಂಗಾರಪ್ಪ ವೋಟ್ ಡಿವೈಡ್ ಮಾಡೋದರಲ್ಲಿ ಯಶಸ್ವಿಯಾಗಿ ಜನತಾ ದಳ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಯಿತು.

ಕಾಂಗ್ರೆಸ್ ಕೇವಲ ನಲವತ್ತು ಸ್ಥಾನಕ್ಕೆ ಇಳಿದಿತ್ತು. ಬಂಗಾರಪ್ಪ 1997ರಲ್ಲಿ ಪುನಃ ಕಾಂಗ್ರೆಸ್‌ಗೆ ಮರಳಿದರು. ಕಾಂಗ್ರೆಸ್‌ ತಮಗೆ ಸೂಕ್ತ ಮರ್ಯಾದೆ ಕೊಡುತ್ತಿಲ್ಲ ಎಂದು ಕೋಪಗೊಂಡ ಬಂಗಾರಪ್ಪ ಮತ್ತೆ ಕೆವಿಸಿ ಪಕ್ಷ (ಕರ್ನಾಟಕ ವಿಕಾಸ ಪಕ್ಷ) ಕಟ್ಟಿದರು. ಅಲ್ಲೂ ಸಕ್ಸೆಸ್‌ ಆಗದೆ 2004ರಲ್ಲಿ ಬಿಜೆಪಿ ಸೇರಿದರು. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ಹಿಂದುಳಿದ ವರ್ಗಗಳ ಮತ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವಾಯಿತು. ಶಿವಮೊಗ್ಗ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಸದೃಢವಾಗಲೂ ಕಾರಣವಾಯಿತು. ಅಲ್ಲಿಂದ ಬಳಿಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದರು. ಅದನ್ನೂ ಬಿಟ್ಟು 2010ರಲ್ಲಿ ಜೆಡಿಎಸ್ ಸೇರಿದರು. ತಂದೆಯ ಪಕ್ಷಾಂತರದಿಂದ ಬೇಸತ್ತ ಮಗ ಕುಮಾರ ಬಂಗಾರಪ್ಪ ಬಿಜೆಪಿಯಲ್ಲೇ ಉಳಿದರು. ಮತ್ತೊಬ್ಬ ಮಗ ಮಧು ಬಂಗಾರಪ್ಪ ಮಾತ್ರ ತಂದೆಯ ಜತೆ ಉಳಿದರು. ಹಠವಾದಿ ಬಂಗಾರಪ್ಪ ಯಾವುದೇ ಪಕ್ಷಕ್ಕೆ ಹೋದರೂ, ಹೊಸ ಪಕ್ಷ ಕಟ್ಟಿದರೂ ಸೊರಬದಲ್ಲಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದರು. ಹೊಸ ಪಕ್ಷ ಕಟ್ಟಿ ತಾವು ಯಶಸ್ವಿ ಆಗಲಿಲ್ಲ. ಆದರೆ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಯಶಸ್ವಿ ಆಗಿದ್ದರು.

ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ

2011ರಲ್ಲಿ ಯಡಿಯೂರಪ್ಪ ಅವರು ಅಕ್ರಮ ಡಿನೋಟಿಫಿಕೇಷನ್ ಕೇಸ್‌ನಲ್ಲಿ ಜೈಲು ಪಾಲಾದರು. ಆ ಬಳಿಕ ಬಿಜೆಪಿ ನಾಯಕರ ವಿರುದ್ಧ ರೊಚ್ಚಿಗೆದ್ದು 2012ರಲ್ಲಿ ಹಾವೇರಿಯಲ್ಲಿ ಕೆಜೆಪಿಗೆ (ಕರ್ನಾಟಕ ಜನತಾ ಪಕ್ಷ) ಚಾಲನೆ ಕೊಟ್ಟರು. 2013ರ ಚುನಾವಣೆಯಲ್ಲಿ ಬಿಜೆಪಿಯ ಮತ ವಿಭಜಿಸುವಲ್ಲಿ ಅವರು ಯಶಸ್ವಿ ಆದರು. ಆದರೆ ಅವರ ಪಕ್ಷ ಕೇವಲ 6 ಸ್ಥಾನ ಗೆದ್ದಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ನಲವತ್ತು ಸೀಟಿಗೆ ಸೀಮಿತವಾಯಿತು. ಬಳಿಕ 2013ರಲ್ಲಿ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು. ಅವರ ಬಲದಿಂದ ಬಿಜೆಪಿ 2014ರಲ್ಲಿ ಲೋಕಸಭೆಯಲ್ಲಿ 18 ಸ್ಥಾನ ಗೆದ್ದಿತು. 2018ರಲ್ಲಿ ರಾಜ್ಯಾಧ್ಯಕ್ಷರಾಗಿ ಬಿಜೆಪಿ 104 ಸ್ಥಾನ ಗಳಿಸಲು ಕಾರಣರಾದರು.

ಬಿಎಸ್ಆರ್ ಕಟ್ಟಿದ್ದ ರೆಡ್ಡಿ, ರಾಮುಲು

ಅದೇ ರೀತಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಬಿಜೆಪಿ ವಿರುದ್ಧ ತಿರುಗಿಬಿದ್ದು ʼಬಡವರ ಶ್ರಮಿಕರ ಪಕ್ಷʼ ಸ್ಥಾಪಿಸಿದ್ದರು. 2013ರಲ್ಲಿ ರಾಮುಲು ಜತೆಗೆ ನಾಲ್ವರು ಮಾತ್ರ ಗೆದ್ದು ವಿಧಾನಸಭೆಗೆ ಪ್ರವೇಶಿಸಿದರು. ಹಲವು ಕ್ಷೇತ್ರಗಳಲ್ಲಿ ಈ ಪಕ್ಷ ಬಿಜೆಪಿಗೆ ಸಾಕಷ್ಟು ಹಾನಿ ಮಾಡಿತು. ಆ ಬಳಿಕ ಶ್ರೀರಾಮುಲು ಮತ್ತೆ ಬಿಜೆಪಿಗೆ ಮರಳಿದರು.
ಈ ನಡುವೆ, ಉದ್ಯಮಿ ವಿಜಯ ಸಂಕೇಶ್ವರ ಅವರು ಸದುದ್ದೇಶದಿಂದ ಕನ್ನಡ ನಾಡು ಪಕ್ಷ ಸ್ಥಾಪಿಸಿದರಾದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಕಲ್ಯಾಣಕ್ಕಾಗಿ ರೆಡ್ಡಿ ಪಕ್ಷ!

ಗಣಿ ಹಗರಣದಲ್ಲಿ ಸಿಲುಕಿದ ಬಳಿಕ ತೆಪ್ಪಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಈಗ ಏಕಾಏಕಿ ಕಲ್ಯಾಣ ರಾಜ್ಯದ ಕನವರಿಕೆ ಶುರುವಾಗಿದೆ. ಈಗ ಏಕಾಏಕಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಾರ್ಟಿ ಕಟ್ಟಬೇಕೆನ್ನುವ ಉಮೇದು ಬಂದು ಬಿಟ್ಟಿದೆ. ವಿಧಾನಸಭೆ ಹತ್ತಿರವಾಗುತ್ತಿರುವಂತೆಯೇ ಬಿಜೆಪಿಯವರು ತಮ್ಮ ಕಡೆ ದೃಷ್ಟಿ ಹರಿಸುತ್ತಾರೆ ಎಂದು ರೆಡ್ಡಿ ಕಾಯುತ್ತಿದ್ದರು ಆದರೆ ರೌಡಿ ಪಾಲಿಟಿಕ್ಸ್ ವಿವಾದ ಜೋರಾಗುತ್ತಿರುವ ಹಿನ್ನೆಲೆಯಲ್ಲಿ, ಈಗ ರೆಡ್ಡಿ ಹೆಗಲ ಮೇಲೆ ಕೇಸರಿ ಶಾಲು ಹಾಕಿದರೆ ಭಾರಿ ಗದ್ದಲವಾಗುತ್ತದೆ ಎಂದು ಬಿಜೆಪಿ ನಾಯಕರು ಲೆಕ್ಕ ಹಾಕಿದ್ದಾರೆ. ರೆಡ್ಡಿ ಸೈಲೆಂಟ್ ಆಗಿ ಬಿಜೆಪಿಯನ್ನು ಬೆಂಬಲಿಸಲಿ ಎನ್ನುವುದು ಅವರ ಪ್ಲ್ಯಾನ್‌. ಆದರೆ ಜನಾರ್ದನ ರೆಡ್ಡಿ ಕುಪಿತಗೊಂಡಿದ್ದಾರೆ. ರಾಜಕೀಯ ವೇದಿಕೆ ಇಲ್ಲದೆ ಅವರು ಚಡಪಡಿಸುತ್ತಿದ್ದಾರೆ. ಕನಿಷ್ಠ ವಿಧಾನ ಪರಿಷತ್‌ ಸ್ಥಾನ ಅಥವಾ ರಾಜ್ಯಸಭೆ ಸ್ಥಾನ ಸಿಗಲಿ ಎಂಬುದು ಅವರ ಆಸೆ. ಹಾಗಾಗಿ ಹೊಸ ಪಕ್ಷ ಸ್ಥಾಪನೆಯ ಹಾವು ಬಿಟ್ಟು ರಾಜ್ಯ ಬಿಜೆಪಿಯನ್ನು ಹೆದರಿಸಲು ಅವರು ಪ್ರಯತ್ನಿಸುತ್ತಿರುವಂತಿದೆ. ಬಳ್ಳಾರಿ ಸುತ್ತಮುತ್ತ ಎರಡು ಮೂರು ಕ್ಷೇತ್ರ ಬಿಟ್ಟರೆ ಉಳಿದ ಕಡೆ ಎಲ್ಲೂ ಜನಾರ್ದನ ರೆಡ್ಡಿ ಪ್ರಭಾವ ಇಲ್ಲ. ಹೊಸ ಪಕ್ಷ ಕಟ್ಟಿದರೆ ಠೇವಣಿ ಉಳಿಸಿಕೊಳ್ಳುವುದೂ ಕಷ್ಟ ಎನ್ನುವುದು ಅವರಿಗೂ ಗೊತ್ತು. ಆದರೆ ಯೋಜನೆಯ ಪ್ರಕಾರ ಅವರು ನಿಜಕ್ಕೂ ಪಕ್ಷ ಸ್ಥಾಪನೆ ಮಾಡಿದ್ದೇ ಆದಲ್ಲಿ ಬಿಜೆಪಿಗೆ ಎಷ್ಟರಮಟ್ಟಿಗೆ ಹಾನಿಯಾಗುತ್ತದೆ ಎನ್ನುವುದು ಕಾಂಗ್ರೆಸ್‌ ಪಕ್ಷಕ್ಕೂ ಮಹತ್ವದ್ದಾಗಿರುತ್ತದೆ.

ಇದನ್ನೂ ಓದಿ | Maha Politics | ರಾಜಕೀಯ ಗೊಂದಲದ ಬಗ್ಗೆ ಕರ್ನಾಟಕದ ಜನಪ್ರತಿನಿಧಿಗಳು ಹೀಗೆಂದಿದ್ದಾರೆ

Exit mobile version