ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಕಾರ್ಯದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಇಂದು (ಸೆ.೧೦) ಜನಸ್ಪಂದನ (Janaspandana) ಕಾರ್ಯಕ್ರಮ ನಡೆಯಲಿದೆ. ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.
2 ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. 2 ವರ್ಷಗಳಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್‍ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುವುದಾಗಿ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು.
ಜನಸ್ಪಂದನಕ್ಕೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲ್ಲೂಕುಗಳಿಂದ ಜನರು ಬರಲಿದ್ದಾರೆ. ಇದರ ನಂತರ ರಾಜ್ಯದ ಆರು ವಲಯಗಳಲ್ಲಿ ಇಂಥ ಜನಸಭೆ ಏರ್ಪಡಿಸುವ ಉದ್ದೇಶ ಪಕ್ಷಕ್ಕೆ ಇದೆ.
40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಆಗಮಿಸುವವರಿಗೆ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಇದರ ಗುತ್ತಿಗೆ ಕೊಡಲಾಗಿದೆ ಎಂದು ವಿವರ ನೀಡಿದರು. 3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಷಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12 ಕಡೆ ಜಾಗಗಳನ್ನು ಗುರುತಿಸಲಾಗಿದೆ. 5 ಸಾವಿರ ಬಸ್‍ಗಳನ್ನು ಕಾರ್ಯಕರ್ತರ ಆಗಮನಕ್ಕೆ ನಿಗದಿಪಡಿಸಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆಯನ್ನು ಸರ್ಕಾರ ನಡೆಸಿದೆ.
ಇದನ್ನೂ ಓದಿ | ವಿಸ್ತಾರ TOP 10 NEWS | ಗಡ್ಕರಿ ಮಹತ್ವದ ಸಭೆಯಿಂದ ಜನಸ್ಪಂದನ ಕ್ಷಣಗಣನೆವರೆಗಿನ ದಿನದ ಪ್ರಮುಖ ಸುದ್ದಿಗಳಿವು
ಕೇಂದ್ರದ ಹಿರಿಯ ಸಚಿವೆ ಸ್ಮೃತಿ ಇರಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕೀಯ ಚುನಾವಣಾ ರಣಕಹಳೆಯನ್ನು ದೊಡ್ಡಬಳ್ಳಾಪುರದಿಂದ ಮೊಳಗಿಸಲು ಬಿಜೆಪಿ ನಿರ್ಧರಿಸಿದೆ.
ಮೂರು ಸಲ ಮುಂದೂಡಿಕೆ
ಬಿಜೆಪಿಯ ʼಜನೋತ್ಸವʼ ಕಾರ್ಯಕ್ರಮ ಹಲವಾರು ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಲೇ ಇತ್ತು. ಮೊದಲಿಗೆ ಜುಲೈ 28ರಂದು ಆಯೋಜಿಸಲು ತೀರ್ಮಾನಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ರದ್ದುಗೊಳಿಸಲಾಗಿತ್ತು. ಇದಾದ ನಂತರ ಆಗಸ್ಟ್ 28ಕ್ಕೆ ಮುಂದೂಡಲಾಯಿತಾದರೂ ಗಣೇಶ ಚತುರ್ಥಿ ಸೇರಿ ಹಲವು ಕಾರಣಗಳಿಂದಾಗಿ ಸೆ.8ಕ್ಕೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಸಚಿವ ಉಮೇಶ್ ಕತ್ತಿ ಅವರ ನಿಧನದಿಂದಾಗಿ ಸೆ.11ರಂದು ಆಯೋಜಿಸಲು ತೀರ್ಮಾನಿಸಲಾಯಿತು. ಆದರೀಗ ಮತ್ತೆ ದಿನಾಂಕವನ್ನು ಬದಲಾಯಿಸಿ ಸೆ.10ರಂದೇ ನಡೆಸಲಾಗುತ್ತಿದೆ. ಹಾಗೆಯೇ, ʼಜನೋತ್ಸವʼದ ಬದಲಾಗಿ “ಜನಸ್ಪಂದನ” ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಇದನ್ನೂ ಓದಿ | Janaspandana | ಜನಸ್ಪಂದನಕ್ಕೆ 3 ಲಕ್ಷ ಜನ ಬರ್ತಾರೆ ಎಂದ ಸಚಿವ ಡಾ.ಕೆ. ಸುಧಾಕರ್