Site icon Vistara News

ಜನಸ್ಪಂದನ ಮುನ್ನ ಸಿಎಂ ದೇಗುಲ ಭೇಟಿ, ಬದಲಾಗದ ಜನೋತ್ಸವ ಬ್ಯಾನರ್‌, ಯಾರ್ಯಾರು ಬರುತ್ತಾರೆ?

janaspandana

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ದೇಗುಲ ಭೇಟಿ ನೀಡಿದರು.

ಆರ್‌ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮುಂಜಾನೆ ಜನರ ಅಹವಾಲುಗಳನ್ನು ಆಲಿಸಿದ ಬಳಿಕ, ವಸಂತ ನಗರದಲ್ಲಿರುವ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಇಲ್ಲಿ ಪೂಜೆ ಸಲ್ಲಿಸಿ ನಂತರ ಇತರ ಬಿಜೆಪಿ ನಾಯಕರೊಂದಿಗೆ ದೊಡ್ಡಬಳ್ಳಾಪುರಕ್ಕೆ ಹೊರಡಲಿದ್ದಾರೆ.

ಬದಲಾಗದ ಜನೋತ್ಸವ ಫ್ಲೆಕ್ಸ್‌

ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಭಾಂಗಣ, ಆಸನ, ಭೋಜನವ್ಯವಸ್ಥೆ ಮಾಡಿಕೊಂಡಿದೆ. ದೊಡ್ಡಬಳ್ಳಾಪುರದಲ್ಲಿನ ಸಮಾವೇಶಕ್ಕೆ ಯಲಹಂಕದಿಂದಲೇ ಬಿಜೆಪಿ ನಾಯಕರ ಸ್ವಾಗತ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಆದರೆ ಕಾರ್ಯಕ್ರಮದ ಹೆಸರು ಬದಲಾದರೂ ಹಲವೆಡೆ ʼಜನೋತ್ಸವʼ ಎಂದೇ ಬಳಸಿರುವುದು ಕಂಡುಬಂದಿದೆ.

ಕತ್ತಿ, ಪ್ರವೀಣ್‌ ನೆನಪು

ಜನಸ್ಪಂದನ ಸಮಾವೇಶದ ವೇದಿಕೆಯ ಮೇಲೆ ಅಗಲಿದ ಸಚಿವ ಉಮೇಶ್‌ ಕತ್ತಿ, ಹತ್ಯೆಯಾದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಭಾವಚಿತ್ರಗಳಿದ್ದು, ಕಾರ್ಯಕ್ರಮದ ಆರಂಭದಲ್ಲೇ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಕೇಂದ್ರ ಸಚಿವೆಯ ಆಗಮನ

ಜನಸ್ಪಂದನದಲ್ಲಿ ವರಿಷ್ಠರ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.50ಕ್ಕೆ ದೇವನಹಳ್ಳಿ ಏರ್‌ಪೋರ್ಟ್‌ಗೆ ಇರಾನಿ ದೆಹಲಿಯಿಂದ ಬಂದಿಳಿಯಲಿದ್ದಾರೆ. ಏರ್‌ಪೋರ್ಟ್‌ನಲ್ಲಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಮತ್ತಿತರರು ಸ್ವಾಗತ ಕೋರಲಿದ್ದಾರೆ. ಸಮಾವೇಶದ ವೇದಿಕೆಗೆ 12.15ರ ಸುಮಾರಿಗೆ ಬರಲಿದ್ದಾರೆ. ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ, ಸಚಿವರು, ಸಂಸದರು, ಶಾಸಕರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ಇಂದಿನ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಹೈಲೈಟ್‌ ಇದು

Exit mobile version