ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪ್ರದೇಶದ ದೊಡ್ಡಾಣೆ ಗ್ರಾಮದ ಪುಟ್ಟಮ್ಮ ಅಸ್ವಸ್ಥರಾಗಿದ್ದರು. ಆದರೆ, ೯ ಕಿ.ಮೀ. ದೂರದ ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರೆ ಯಾವ ವಾಹನ ವ್ಯವಸ್ಥೆಯೂ ಇಲ್ಲ. ಹೀಗಾಗಿ ಅವರನ್ನು ಡೋಲಿಯಲ್ಲಿ ಕೂರಿಸಿ ಒಂಬತ್ತು ಕಿ.ಮೀ. ದೂರ ಗುಡ್ಡ ಬೆಟ್ಟ ಹತ್ತಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು.
ಇದು ಪುಟ್ಟಮ್ಮ ಅವರೊಬ್ಬರ ಸಮಸ್ಯೆಯಲ್ಲ. ಈ ಭಾಗದಲ್ಲಿ ವಾಸಿಸುತ್ತಿರುವ ಹತ್ತಾರು ಕುಟುಂಬಗಳು ನಿತ್ಯ ಇಂಥಹುದೇ ಸಮಸ್ಯೆಯನ್ನು ಎದುರಿಸುತ್ತಿವೆ. ಯಾಕೆಂದರೆ, ಇಲ್ಲಿಗೆ ಇದ್ದ ಏಕೈಕ ಆಸರೆ ಜನವನ ಸಾರಿಗೆ ಸ್ಥಗಿತಗೊಂಡಿದೆ.
ಚಾಮರಾಜ ನಗರದ ಹನೂರು ತಾಲೂಕಿನ ಈ ಭಾಗದಲ್ಲಿ ಬಹು ಹಿಂದಿನಿಂದಲೂ ಇದೇ ಸಮಸ್ಯೆ. ಹೀಗಾಗಿಯೇ ಅವರು ನಾಗರಿಕ ಸಮಾಜದಿಂದಲೇ ದೂರವಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲೆ, ಕಾಲೇಜು, ಪೇಟೆಗಳೆಲ್ಲ ಅವರ ಪಾಲಿಗೆ ಗಗನ ಕುಸುಮವೇ ಆಗಿತ್ತು. ಆದರೆ, ನಿಜವಾದ ಸಮಸ್ಯೆ ಎದುರಾಗುತ್ತಿದ್ದುದು ಅವರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ.
ಆದರೆ, ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿನ ಸಮಸ್ಯೆಗಳಿಗೆ ಒಂದು ಸಣ್ಣ ಪರಿಹಾರ ಒದಗಿತ್ತು. ಕೆಲವು ವರ್ಷಗಳಿಂದ ಇಲ್ಲಿನ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಜನವನ ಸಾರಿಗೆಯನ್ನು ಆರಂಭಿಸಲಾಗಿತ್ತು. ರಸ್ತೆ ಸಂಪರ್ಕಗಳಿಲ್ಲದ ಮಹದೇಶ್ವರ ಬೆಟ್ಟ ಅರಣ್ಯ ವ್ಯಾಪ್ತಿಯ ಗ್ರಾಮಗಳ ಅನಾರೋಗ್ಯ ಪೀಡಿತರು, ಗರ್ಭಿಣಿಯರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾಗಿದ್ದ ಈ ಸಾರಿಗೆ ವ್ಯವಸ್ಥೆಯಡಿ ನಾಲ್ಕು ಜೀಪುಗಳು ನಿರಂತರ ಸಂಚಾರ ಮಾಡುತ್ತಿದ್ದವು. ಹೀಗಾಗಿ ಕಾಡುಮೇಡು ಸುತ್ತಿ ಬೆಟ್ಟಗುಡ್ಡ ಹತ್ತಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಬರುತ್ತಿದ್ದ ಗ್ರಾಮಸ್ಥರಿಗೆ ಸ್ವಲ್ಪ ಅನುಕೂಲ ಆಗಿತ್ತು.
ಆದರೆ, ಇತ್ತೀಚೆಗೆ ಡಿಸಿಎಫ್ ಏಡುಕೊಂಡಲು ಅವರ ವರ್ಗಾವಣೆ ಆಗುತ್ತಿದ್ದಂತೆಯೇ ಜನವನ ಸಾರಿಗೆ ಸ್ಥಗಿತಗೊಡಿದೆ. ಹೀಗಾಗಿ ಮತ್ತೆ ಜನರು ಅದೇ ರೀತಿಯಲ್ಲಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪುಟ್ಟಮ್ಮ ಅವರಂತೆ ಇನ್ನೂ ಹಲವರು ಇದೇ ರೀತಿ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆತರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಹೀಗಾಗಿ ಕೂಡಲೇ ಜನವನ ಸಾರಿಗೆಯನ್ನು ಮರು ಆರಂಭ ಮಾಡಬೇಕು ಎಂದು ಅಲ್ಲಿನ ಜನರು ಆಗ್ರಹಿಸಿದ್ದಾರೆ.