Site icon Vistara News

Jarakiholi Brothers | ಮುಂದಿನ ಎಲೆಕ್ಷನ್‌ನಲ್ಲಿ ನಾನು, ರಮೇಶ್‌ ಜಾರಕಿಹೊಳಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇವೆ: ಬಾಲಚಂದ್ರ

balachandra jarakiholi ಬೆಳಗಾವಿ ರಾಜಕೀಯ ಜಾರಕಿಹೊಳಿ ಸಹೋದರರು

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಾರಕಿಹೊಳಿ ಸಹೋದರರಿಂದ (Jarakiholi Brothers) ಒಗ್ಗಟ್ಟು ಪ್ರದರ್ಶನ ನಡೆದಿದ್ದು, ಮೂವರು ಸಹೋದರರು ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ತಾವು ಬಿಜೆಪಿಯಿಂದ ಅರಭಾವಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ, ತಮ್ಮ ಸಹೋದರ ರಮೇಶ್‌ ಜಾರಕಿಹೊಳಿ ಗೋಕಾಕ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿಯೇ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

balachandra jarakiholi ಬೆಳಗಾವಿ ರಾಜಕೀಯ ಜಾರಕಿಹೊಳಿ ಸಹೋದರರು

ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ರಮೇಶ್‌ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭಾಗಿಯಾಗಿದ್ದರು. ಒಂದೆರಡು ರಾಜಕೀಯ ವಿಷಯ ಮಾತನಾಡಲು ಅವಕಾಶ ನೀಡುವಂತೆ ಮನವಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಬಿಜೆಪಿಯಿಂದಲೇ ಸ್ಪರ್ಧೆ ಮಾಡುವೆ
ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಕೆಲವರು ಹರಿಬಿಟ್ಟಿದ್ದಾರೆ. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಸುಳ್ಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಈ ಊಹಾಪೋಹದ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ. 2023ರ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆ. ಬಿಜೆಪಿ ಬಿಟ್ಟು ನಾನು ಬೇರೆ ಯಾವ ಪಕ್ಷದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ | CM Bommai | ಕೇಂದ್ರ ಜಲಶಕ್ತಿ ಸಚಿವರ ಜತೆ ಸಿಎಂ ಬೊಮ್ಮಾಯಿ ಚರ್ಚೆ: ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿಕೆ

ರಮೇಶ್‌ ಜಾರಕಿಹೊಳಿ ಕೂಡ ಗೋಕಾಕ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿಯೇ ಸ್ಪರ್ಧಿಸಲಿದ್ದಾರೆ. ನಾವು ಜೆಡಿಎಸ್‌ಗೆ ಹೋಗುತ್ತೇವೆ, ಕಾಂಗ್ರೆಸ್‍ಗೆ ಹೋಗುತ್ತೇವೆ ಎಂದು ನಮ್ಮ ರಾಜಕೀಯ ವೈರಿಗಳೇ ಸುದ್ದಿ ಹಬ್ಬಿಸುತ್ತಿದ್ದಾರೆ. ದಯಮಾಡಿ ನನ್ನ ಹೇಳಿಕೆಯನ್ನು ವರದಿ ಮಾಡಿ ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ನರೇಂದ್ರ ಮೋದಿ, ಅಮಿತ್ ಶಾ ಇರುವ ತನಕ ನಮ್ಮ ಪಕ್ಷವನ್ನು ಇನ್ನೂ 10 ವರ್ಷ ಅಲುಗಾಡಿಸಲು ಯಾರಿಂದಲೂ ಆಗಲ್ಲ. ನರೇಂದ್ರ ಮೋದಿ ಅವರು ಕೇಂದ್ರದಲ್ಲಿದ್ದಾರೆ. ಗುಜರಾತಿನಲ್ಲಿ ಬಿಜೆಪಿ 120 ಸ್ಥಾನ ಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹೈಕಮಾಂಡ್ ನಾಯಕರ ಶ್ರಮದಿಂದ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾವು ಅಧಿಕಾರದಲ್ಲಿ ಇದ್ದರೆ ನಿಮ್ಮೆಲ್ಲ ಕೆಲಸಗಳು ಆಗುತ್ತವೆ. ಎಲ್ಲ ಜಾತಿಯವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇನೆ. ದ್ವೇಷ, ಸಿಟ್ಟಿನಿಂದ ಯಾರ ಮತವನ್ನೂ ನಾನು ಪಡೆಯಲ್ಲ. ನಮ್ಮಿಂದ ದೂರ ಹೋದವರನ್ನೂ ಪ್ರೀತಿಯಿಂದ ಕರೆದು ವಿಶ್ವಾಸ ಗಳಿಸುತ್ತೇನೆ ಎಂದು ಹೇಳಿದರು.

ಜನವರಿ ೨೫ರ ನಂತರ ಗೋಕಾಕದಲ್ಲಿ ಬೃಹತ್ ಸಭೆಯನ್ನು ನಡೆಸಲಿದ್ದೇವೆ. ೨೦೧೮ರ ಚುನಾವಣೆಯಲ್ಲಿ ನಾನು ಆರಿಸಿ ಬರುತ್ತೇನೆ ಎಂದು ಭಾಷಣ ಮಾಡಿದ್ದೆ. ಆಗ ವಿರೋಧಿಗಳು ಇವನೇನು ದೇವರಾ ಅಂತ ಪ್ರಶ್ನೆ ಮಾಡಿದ್ದರು. ಅವರಿಗೆ ನಾನು ದೇವರಲ್ಲ‌, ನಾನು ದೇವರ ಮಗ ಎಂದು ಹೇಳಿದ್ದೆ. ನಾನು ‌ಈಗಲೂ ಹೇಳುತ್ತೇನೆ, ಬೇಕಾದರೆ ಬರೆದುಕೊಂಡು ಬಿಡಿ ೨೦೨೩ರ ಚುನಾವಣೆಯಲ್ಲಿಯೂ ಗೆದ್ದು ಬರುತ್ತೇನೆ. ಇದನ್ನು ನಾನು ಸೊಕ್ಕಿನಿಂದ ಹೇಳುತ್ತಿಲ್ಲ. ಬದಲಾಗಿ ನಿಮ್ಮ ಪ್ರೀತಿ, ವಿಶ್ವಾಸ ನನ್ನ ಮೇಲೆ ಇದೆ ಎನ್ನುವ ಕಾರಣಕ್ಕೆ ಆತ್ಮವಿಶ್ವಾಸದಿಂದ‌ ಹೇಳುತ್ತಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡುವವರನ್ನು ಕಲ್ಲೋಳಿಯ ಹನುಮಪ್ಪ (ಆಂಜನೇಯ) ನೋಡಿಕೊಳ್ಳಲಿ ಎಂದ ಬಾಲಚಂದ್ರ‌ ಜಾರಕಿಹೊಳಿ ಪರೋಕ್ಷವಾಗಿ ಸಂಸದ ಈರಣ್ಣ ಕಡಾಡಿಯನ್ನು ತಿವಿದರು.

ಇದನ್ನೂ ಓದಿ | ಕಿಟಕಿಯಿಂದ ₹5 ಕೋಟಿ ಬಿಸಾಡಿದ್ದ ಅಧಿಕಾರಿಗೆ ಉನ್ನತ ಹುದ್ದೆ: ಸಚಿವರ ಶಿಫಾರಸು; ವಿವಾದ ಆಗುತ್ತಿದ್ದಂತೆಯೇ ವಾಪಸು

Exit mobile version