ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಸ್ವಲ್ಪ ತಡವಾದರೂ ತೊಂದರೆಯಿಲ್ಲ ಎಂಬರ್ಥದಲ್ಲಿ ಮಾತನಾಡಿರುವ ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರ ಕುರಿತು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಸಮುದಾಯವನ್ನು 3ಎಯಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ಪಂಚಮಸಾಲಿಗೆ 2ಎ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಬೇಡಿಕೆಗೆ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂಬ ಆಕ್ರೋಶ ಸಮುದಾಯದಲ್ಲಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಸೆಪ್ಟೆಂಬರ್ ಒಳಗೆ ಮೀಸಲಾತಿ ಕೊಡುವ ಭರವಸೆ ನೀಡಿದ್ದರು. ಆದರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರು. ಬಸವರಾಜ ಬೊಮ್ಮಾಯಿ ಈ ಕುರಿತು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಸರ್ವಪಕ್ಷಗಳ ಸಭೆ ಕರೆಯುವುದಾಗಿ ಸಿಎಂ ಸದನದಲ್ಲಿ ಹೇಳಿದ್ದರು. ಆದರೆ ಎಸ್‌ಸಿಎಸ್‌ಟಿ ಸಮುದಾಯದ ಮೀಸಲಾತಿ ಬಗ್ಗೆ ಮಾತ್ರ ಸರ್ವಪಕ್ಷ ಸಭೆ ಕರೆದಿದ್ದಾರೆ. ಸರ್ವಪಕ್ಷ ಸಭೆ ಕರೆದು ತೀರ್ಮಾನಿಸಬೇಕು ಎಂದು ಆಗ್ರಹಿಸಲು ಅಕ್ಟೋಬರ್ 21 ರಂದು ಹುಕ್ಕೇರಿಯಲ್ಲಿ ಸಮುದಾಯದ ಸಮಾವೇಶ ಕರೆಯಲಾಗಿದೆ. ಮೀಸಲಾತಿ ಕೊಡುತ್ತೀರೋ ಅಥವಾ ಇಲ್ಲವೊ ಎಂಬುದನ್ನು ಸಿಎಂ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | ಪ್ರವರ್ಗ 2ಎಗೆ ಪಂಚಮಸಾಲಿ ಸೇರ್ಪಡೆ; ಸಿಎಂ ಭೇಟಿಯಾದ ಶ್ರೀ ವಚನಾನಂದ ಸ್ವಾಮೀಜಿ
2ಎಮೀಸಲಾತಿ ನೀಡದಿದ್ದರೆ 25 ಲಕ್ಷ ಪಂಚಮಸಾಲಿ ಸಮುದಾಯದ ಜನ ವಿಧಾನಸೌಧದ ಮುಂದೆ ಧರಣಿ ಕೂರಲಾಗುವುದು ಎಂದ ಸ್ವಾಮೀಜಿ, ಧರಣಿ ಕೂರುವ ದಿನಾಂಕವನ್ನು 21 ರಂದು ನಡೆಯುವ ಸಮಾವೇಶದಲ್ಲಿ ಪ್ರಕಟಿಸಲಾಗುವುದು. ಬೇರೆ ಸಮುದಾಯದ ಮೀಸಲಾತಿ ಕಿತ್ತು ಕೊಡಿ ಎಂದು ನಾವು ಕೇಳುತ್ತಿಲ್ಲ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಬೇರೆ ಸಮುದಾಯದ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದನ್ನು ಸ್ವಾಗತಿಸುತ್ತೇನೆ. ಅದೇ ರೀತಿ ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಪಂಚಮಸಾಲಿ ಸಮುದಾಯಕ್ಕೆ ನೀಡುವುದೂ ಬೇಡ. ನಾವು 3ಎಯಲ್ಲಿ ಈಗ ಇದ್ದೇವೆ. ನಮ್ಮನ್ನು 2ಎಗೆ ಸೇರಿಸಬೇಕು. ಯಾರದ್ದೋ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿ ತಡ ಆದರೂ ನಡೆಯುತ್ತದೆ ಎಂಬ ಅರ್ಥದಲ್ಲಿ ಮಾತನಾಡಿರುವ ವಚನಾನಂದ ಶ್ರೀಗಳ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನೊಂದವರ ನೋವ ನೋಯದವರೆತ್ತ ಬಲ್ಲರೋ ಎಂಬಂತೆ, ಯಾರಿಗೆ ನೋವು ಇದೆ, ಯಾರಿಗೆ ಹಸಿವಿದೆ ಅಂತಹವರು ಮೀಸಲಾತಿ ಬೇಗ ಕೊಡಿ ಎಂದು ಕೇಳುತ್ತಾರೆ. ಸುಖವಾಗಿದ್ದವರಿಗೆ ಸಾವಿರ ವರ್ಷಗಳಾದರೂ ಬೇಡ. ನಾವು ಕೃಷಿ ಕಾರ್ಮಿಕರು, ಮಕ್ಕಳಿಗೆ ತೊಂದರೆ ಆಗುತ್ತದೆ. 27 ವರ್ಷಗಳ ಬೇಡಿಕೆಯಿದೆ, ಈ ಹೋರಾಟ ಮುಂದುವರೆಸಿದ್ದೇವೆ. ಸರ್ಕಾರ ನಮ್ಮ ಸಮುದಾಯದ ಕಟ್ಟ ಕಡೆಯ ರೈತ, ಒಬ್ಬ ವಿದ್ಯಾರ್ಥಿ ಹೇಳಿದಂತೆ ಕೇಳಬೇಕೇ ಹೊರತು ಸಮಾಜ ಒಡೆಯುವವರ ಮಾತು ಕೇಳಬಾರದು ಎಂದರು.