ಬೆಂಗಳೂರು: ಜೂನ್ 27ರಂದು (ಮಂಗಳವಾರ) ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು (Kempe Gowda Jayanti) ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಅದರ ಭಾಗವಾಗಿ ರಾಜ್ಯ ಸರ್ಕಾರವು ಜಯದೇವ ಹೃದ್ರೋಗ ಸಂಸ್ಥೆ (Jayadeva Hospital), ಝೀರೋಧ ಕಂಪನಿ ಸಿಇಒ ನಿತಿನ್ ಕಾಮತ್ (Nitin Kamat) ಹಾಗೂ ಗಾಲ್ಫ್ ಪಟು ಅದಿತಿ ಅಶೋಕ್ (Aditi Ashok) ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು (Kempegowda International award) ಘೋಷಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸೋಮವಾರ ಸಂಜೆ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. ಒಂದು ಸಂಸ್ಥೆ ಮತ್ತು ಇಬ್ಬರು ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ ಫಲಕ ಹೊಂದಿರುತ್ತದೆ.
ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ನೀಡುವ ಹೃದಯವಂತ ಆಸ್ಪತ್ರೆ
ಬೆಂಗಳೂರಿನ ಕೀರ್ತಿಯನ್ನು ಜಗದಗಲ ಪಸರಿಸಿದ ಕೀರ್ತಿಯನ್ನು ಹೊಂದಿರುವ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅತ್ಯುತ್ತಮ ಸಮಾಜ ಸೇವೆಗಾಗಿ ನೀಡುವ ಈ ಬಾರಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಒಟ್ಟು 1,500ಕ್ಕೂ ಅಧಿಕ ಹಾಸಿಗೆ ಸೌಲಭ್ಯ ಹೊಂದಿರುವ ಹೃದ್ರೋಗ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಡಾ. ಸಿ.ಎನ್. ಮಂಜುನಾಥ್ ಅವರು ಆಡಳಿತ ನಿರ್ದೇಶಕರಾಗಿರುವ ಈ ಸಂಸ್ಥೆ ನಿಜಾರ್ಥದಲ್ಲಿ ಬಡವರ ಬಂಧುವಾಗಿದೆ.
ಗಾಲ್ಫ್ ಕ್ರೀಡೆಯಲ್ಲಿ ವಿಶ್ವ ಮಟ್ಟದ ಸಾಧನೆ ಮಾಡಿದ ಅದಿತಿ ಅಶೋಕ್
ಈ ಬಾರಿ ಕ್ರೀಡಾ ವಿಭಾಗದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಬೆಂಗಳೂರಿನ ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಅದಿತಿ ಅಶೋಕ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು.
ಕಿರಿಯ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ನಿತಿನ್ ಕಾಮತ್
ಷೇರು ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಮಾಡಿದ ಜೆರೋಧಾ ಕಂಪನಿಯ ಸ್ಥಾಪಕ ನಿತಿನ್ ಕಾಮತ್ ಈ ಬಾರಿಯ ಉದ್ಯಮ ವಿಭಾಗದ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೋದ್ಯಮವನ್ನು ಕಟ್ಟಿ ಅದನ್ನು ಜಗತ್ತೇ ತಿರುಗಿ ನೋಡುವಂತ ಸಂಸ್ಥೆಯಾಗಿ ಬೆಳೆಸಿದವರು ನಿತಿನ್ ಕಾಮತ್. ಎಸ್ಸೆಸ್ಸೆಲ್ಸಿಯನ್ನು ಅರ್ಧದಲ್ಲೇ ಬಿಟ್ಟು ಉದ್ಯಮಿಯಾದ ಇವರು ಈಗ ಈ ಸಂಸ್ಥೆಯಿಂದ ಬರುವ ಆದಾಯದ 25%ನ್ನು ಸಾಮಾಜಿಕ ಸೇವೆಗೆ ನೀಡುತ್ತಾರೆ.
ಮಧ್ಯಾಹ್ನ ಬೆಂಗಳೂರು, ಸಂಜೆ ಹಾಸನ
ಮಂಗಳವಾರ ಮಧ್ಯಾಹ್ನ 12ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಿಜೆಪಿ ಸರ್ಕಾರವು ಕೆಂಪೇಗೌಡ ಜಯಂತಿಯನ್ನು ಹಾಸನದಲ್ಲಿ ನಡೆಸಲು ತೀರ್ಮಾನಿಸಿತ್ತು. ಕಾಂಗ್ರೆಸ್ ಸರ್ಕಾರ ಈ ತೀರ್ಮಾನವನ್ನು ಗೌರವಿಸುತ್ತಲೇ ಬೆಂಗಳೂರಿನ ಬಳಿಕ ಹಾಸನದಲ್ಲಿ ಸಮಾರಂಭ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: Datti Awards: ಕನ್ನಡ ಸಾಹಿತ್ಯ ಪರಿಷತ್ತಿನ ʻಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿʼ ಪ್ರಶಸ್ತಿ ಪ್ರಕಟ