ನವದೆಹಲಿ: ಕಾಂಗ್ರೆಸ್ ಸರ್ಕಾರದ ಸಚಿವರ ಆಯ್ಕೆ ಪ್ರಕ್ರಿಯೆ ನಡೆದಿರುವಂತೆಯೇ ನವದೆಹಲಿಗೆ ತೆರಳಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ತಮ್ಮ ಸಮುದಾಯಕ್ಕೆ ಐದು ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಐವರಿಗೆ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದೇವೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ವಿಜಯಾನಂದ ಕಾಶಪ್ಪನವರ್‌ಗೆ ಸಚಿವ ಸ್ಥಾನ ಕೊಡಬೇಕು.
ಸಮುದಾಯದ ವಿನಯ್ ಕುಲಕರ್ಣಿ, ವಿಜಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಅವರುಗಳಿಗೆ ಸಚಿವ ಸ್ಥಾನ ನೀಡಬೇಕು. ಈ ಮೂವರ ಜತೆಗೆ ಇಬ್ಬರು ಯುವಕರು ಸಂಪುಟ ಸೇರಬೇಕು. ಇದೆಲ್ಲವನ್ನೂ ಪಕ್ಷದ ನಾಯಕರಿಗೂ ದೂರವಾಣಿ ಮೂಲಕ ಮನವಿ ಮಾಡಿದ್ದೇವೆ.
ಇಲ್ಲಿ ಆಗುತ್ತಿರುವ ಬೆಳವಣಿಗೆಗಳೆಲ್ಲವನ್ನೂ ಪಂಚಮಸಾಲಿ ಸಮಯದಾಯ ಗಮನಿಸುತ್ತಿದೆ. ಸಚಿವ ಸ್ಥಾನ ನೀಡುವಂತೆ ಎಚ್ಚರಿಕೆ ಮಾತುಗಳನ್ನು ಹೇಳುತ್ತಿದ್ದೇನೆ. ನಮ್ಮ ಬೇಡಿಕೆ ಈಡೇರದಿದ್ದರೆ ಪಕ್ಷದ ಮೇಲೆ ಸಮುದಾಯ ಬೇಸರಗೊಳ್ಳುವ ಸಾಧ್ಯತೆ ಇದೆ. ಇದೇ ಮುಂದುವರಿದರೆ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗುರಿ ನಿರ್ಧಾರ ಮಾಡಿಕೊಂಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಆಕ್ರಮಣಕಾರಿಯಾಗಿ ಲೋಕಸಭೆ ಚುನಾವಣೆ ತಯಾರಿ ಆರಂಭವಾಗಲಿದೆ. ಈ ನಡುವೆಯೇ ಪಂಚಮಸಾಲಿ ಸಮುದಾಯಕ್ಕೆ ಐವರು ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯವನ್ನು ಸರ್ಕಾರ ಯಾವ ರೀತಿ ಪರಿಗಣಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Panchamasali: ಪಂಚ ಶಾಸಕರರಿಗೆ ಸಚಿವ ಸ್ಥಾನ ನೀಡಿ: ಪಂಚಮಸಾಲಿ ಕಾರ್ಯಕಾರಿಣಿಯಲ್ಲಿ ಸರ್ಕಾರಕ್ಕೆ ಒತ್ತಾಯ