ಮಂಡ್ಯ: ಇಲ್ಲಿನ ಕೇಂದ್ರೀಯ ವಿದ್ಯಾಲಯ ಸ್ಥಳಾಂತರಕ್ಕೆ ಒತ್ತಾಯದ ಹಿನ್ನೆಲೆಯಲ್ಲಿ ಮಂಡ್ಯದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಸ್ಥಳಾಂತರ ಕಾರ್ಯ ನಡೆಯದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಎಚ್ಚರಿಸಿದರು.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೇಂದ್ರೀಯ ವಿದ್ಯಾಲಯವು ಮಂಡ್ಯ ಜಿಲ್ಲೆಯ ಒಂದು ಕಟ್ಟಡದಲ್ಲಿ ಕಾರ್ಯಾರಂಭಗೊಂಡು 8 ವರ್ಷ ಕಳೆದಿದೆ. ಆದರೆ, ಈ ಸ್ಥಳದಲ್ಲಿ ನೂತನ ಕಟ್ಟಡವೊಂದು ನಿರ್ಮಾಣವಾಗುವ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹೀಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 26.57 ಕೋಟಿ ರೂ. ಅನುದಾನ ಕೂಡ ಬಿಡುಗಡೆಯಾಗಿದೆ. ಆದರೆ, ಈವರೆಗೆ ಕಟ್ಟಡ ನಿರ್ಮಾಣದ ಕಾರ್ಯ ಆರಂಭವಾಗಿಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಆರೋಪಿಸಿದರು.
ಸಮೀಪದ ಶಾಲೆಗೆ ಸ್ಥಳಾಂತರಿಸಲು ಒತ್ತಾಯ:
ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ಆರಂಭಿಸಲು ಮೊದಲಿಗೆ ಕೇಂದ್ರೀಯ ವಿದ್ಯಾಲಯವನ್ನು ಸ್ಥಳಾಂತರಗೊಳಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳೊಳಗೆ ಈಗಿರುವ ಕೇಂದ್ರಿಯ ವಿದ್ಯಾಲಯವನ್ನು ಸಮೀಪದ ಮೈಷುಗರ್ ಶಾಲೆಗೆ ಸ್ಥಳಾಂತರ ಮಾಡಬೇಕು. ಅಲ್ಲದೆ, ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ಆರಂಭಿಸಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಜಯಪ್ರಕಾಶ್ ಗೌಡ ಒತ್ತಾಯಿಸಿದರು. ಮೈಷುಗರ್ ಪ್ರೌಢಶಾಲೆಯಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಬೇಕಾದ ಕೊಠಡಿಗಳು ಲಭ್ಯವಿದ್ದು, ಅಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಸ್ಥಳಾಂತರಗೊಳಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ಒಂದು ತಿಂಗಳೊಳಗೆ ಶಾಲೆ ಸ್ಥಳಾಂತರವಾಗದಿದ್ದಲ್ಲಿ ಶಾಲಾ ಮಕ್ಕಳು ಹಾಗೂ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಪ್ರೊ.ಜಯಪ್ರಕಾಶ್‌ಗೌಡ ಎಚ್ಚರಿಕೆ ನೀಡಿದರು.
ನೂತನ ಕಟ್ಟಡ ನಿರ್ಮಾಣವಾಗಿಲ್ಲ, ಜಾಗ ಕಡಿಮೆಯಿದೆ ಎಂಬ ಕಾರಣವನ್ನಿಟ್ಟುಕೊಂಡು ಇಲ್ಲಿ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಮಕ್ಕಳಿಗೆ ಪಿಯುಸಿವರೆಗೆ ಶಿಕ್ಷಣ ನೀಡಬೇಕು. ಮೈಷುಗರ್ ಶಾಲೆಗೆ ಸ್ಥಳಾಂತರಿಸಿದರೆ ಮಾತ್ರ ಇದು ಸಾಧ್ಯ. ಅಲ್ಲದೆ, ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸಲು ಅವಕಾಶವಿದ್ದು, ಕನ್ನಡ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿಲ್ಲ. ಕನ್ನಡ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಜಯಪ್ರಕಾಶ್ ಗೌಡ ಒತ್ತಾಯಿಸಿದರು.
ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಐಶ್ವರ್ಯ, ಶಿವರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಮುಂದಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಚಲುವರಾಯಸ್ವಾಮಿ ; ಮಂಡ್ಯದಲ್ಲಿ ಅಭಿಮಾನಿಗಳ ಜೈಕಾರ