ಹಾಸನ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಈ ನಡುವೆ ಜೆಡಿಎಸ್‌ನ ಆಪರೇಷನ್ ಎನ್.ಆರ್. ಸಂತೋಷ್ ಸಕ್ಸಸ್ ಆಗಿದೆ. ಕಡೂರು ವೈ.ಎಸ್.ವಿ. ದತ್ತಾ ಮಾದರಿಯಲ್ಲಿ ಅರಸೀಕೆರೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಜೆಡಿಎಸ್ ನಾಯಕರು ಗಾಳ ಹಾಕಿದ್ದು, ಬಿಜೆಪಿ ಟಿಕೆಟ್ ಸಿಗದೆ ಬಂಡಾಯದ ಮುನ್ಸೂಚನೆ ನೀಡಿದ್ದ ಎನ್.ಆರ್.ಸಂತೋಷ್ ಜೆಡಿಎಸ್ ಸೇರ್ಪಡೆ ಸಾಧ್ಯತೆ ದಟ್ಟವಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್. ಸಂತೋಷ್, ನಾಲ್ಕು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರನ್ನೇ ಸಂಸದ ಪ್ರಜ್ವಲ್ ಮತ್ತು ಮಾಜಿ ಸಚಿವ ರೇವಣ್ಣ ಪಕ್ಷಕ್ಕೆ ಸೆಳೆದಿದ್ದಾರೆ.
ಅರಸೀಕೆರೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಮ್ಮ ನಿವಾಸದೆದುರು ಸಂತೋಷ್ ಕರೆದಿದ್ದ ಸಭೆಯಲ್ಲಿ ಜೆಡಿಎಸ್ ಸೇರಿ ಎಂದು ಬೆಂಬಲಿಗರು ಒತ್ತಾಯಿಸಿದ್ದರು. ಹೀಗಾಗಿ ಜೆಡಿಎಸ್ ಸೇರ್ಪಡೆ ಬಗ್ಗೆ ಚಿಂತನೆ ನಡೆಸಿ ಶೀಘ್ರವೇ ತೀರ್ಮಾನ ತಿಳಿಸುವುದಾಗಿ ಸಂತೋಷ್ ಹೇಳಿದ್ದರು. ಇದೀಗ ಮಾಜಿ ಸಚಿವ ರೇವಣ್ಣ ಜತೆಗೆ ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಸಂತೋಷ್ ಹೊರಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Karnataka Elections: ಜೆಡಿಎಸ್ 2ನೇ ಪಟ್ಟಿ ಪ್ರಕಟ, ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್, ವೈಎಸ್‌ವಿ ದತ್ತಗೂ ಸಿಕ್ತು ಚಾನ್ಸ್
ಇನ್ನು ಈಗಾಗಲೇ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಬಾಣಾವರ ಅಶೋಕ್ ಜತೆಗೆ ಪ್ರಜ್ವಲ್ ಹಾಗೂ ರೇವಣ್ಣ ಮಾತುಕತೆ ನಡೆಸಿದ್ದು, ಅವರು ಕೂಡ ನಿಮ್ಮ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಗೆಲ್ಲಿಸುವ ರಣ ತಂತ್ರದೊಂದಿಗೆ ಸಂತೋಷ್‌ಗೆ ರೇವಣ್ಣ ಗಾಳ ಹಾಕಿದ್ದಾರೆ. ಹೀಗಾಗಿ ಶುಕ್ರವಾರ ರಾತ್ರಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಜೆಡಿಎಸ್ ಸೇರ್ಪಡೆ ಬಗ್ಗೆ ಸಂತೋಷ್ ತೀರ್ಮಾನ ಮಾಡಲಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್.ಆರ್. ಸಂತೋಷ್ ಅರಸೀಕೆರೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಇದಕ್ಕಾಗಿ ಕಳೆದ 3 ವರ್ಷದಿಂದ ಅರಸೀಕೆರೆಯಲ್ಲಿ ನೆಲೆನಿಂತಿದ್ದ ಅವರು, ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಾ ಶಾಸಕ ಶಿವಲಿಂಗೇಗೌಡ ಸೇರಿ ಜೆಡಿಎಸ್ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪಕ್ಷಾಂತರ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ | KS Eshwarappa: ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿಯಿಂದ ನನ್ನ ಕೊಲೆಗೆ ಸ್ಕೆಚ್: ಕೆ.ಎಸ್. ಈಶ್ವರಪ್ಪ
ಜೆಡಿಎಸ್ ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿತ್ತು. ಇನ್ನು ಶುಕ್ರವಾರ (ಏ.14) ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಎನ್.ಆರ್. ಸಂತೋಷ್ ಬಿಜೆಪಿಯಲ್ಲಿ ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಈ ಹಿಂದೆ ಬಾಣಾವರ ಅಶೋಕ್‌ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ, ಇದೀಗ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಕುತೂಹಲ ಮೂಡಿದೆ.