Site icon Vistara News

JDS Politics : ಲೋಕಸಭೆಗೆ ಜೆಡಿಎಸ್‌ 3 ಸೂತ್ರ; ಆ. 15ರಿಂದ ರಾಜ್ಯ ಪ್ರವಾಸ

HD Devegowda and HD Kumaraswamy

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ (JDS Politics) ನಿರೀಕ್ಷಿತ ಸೀಟನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲೋಕಸಭೆಯತ್ತ ದೃಷ್ಟಿ ನೆಡಲಾಗಿದೆ. ಅಲ್ಲದೆ, ಲೋಕಸಭಾ ಚುನಾವಣೆಗೆ (Lok Sabha Election 2024) ಇನ್ನು ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ (HD Kumaraswamy) ಅವರು ಟೊಂಕ ಕಟ್ಟಿ ನಿಂತಿದ್ದು, ಸೋಮವಾರ (ಆಗಸ್ಟ್‌ 7) ಪಕ್ಷದ ಸಭೆ ನಡೆಸಿದ್ದು, ಕೆಲವೊಂದು ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಜೆಡಿಎಸ್‌ ಮುಖಂಡರು ಆಗಸ್ಟ್ 15ರ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸವನ್ನು (JDS State Tour) ಕೈಗೊಳ್ಳುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಇನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡ (GT Devegowda) ಅವರ ನೇತೃತ್ವದಲ್ಲಿ ಕೋರ್ ಕಮಿಟಿಯನ್ನು (JDS Core Committee) ರಚಿಸಲಾಯಿತು. ಇದರ ಜತೆಗೆ ಸಂಘಟಿತ, ವಿಷಯಾಧಾರಿತ ಜನಪರ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ.

ಎಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಉಪಸ್ಥಿತಿಯಲ್ಲಿ ಪಕ್ಷದ ಪ್ರಮುಖರ ಸಭೆಯನ್ನು ಸೋಮವಾರ ನಡೆಸಲಾಗಿದ್ದು, ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ನೂತನ ಕೋರ್ ಕಮಿಟಿ ರಚನೆ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ:Internal Reservation : ಒಳ ಮೀಸಲಾತಿ ವಿರುದ್ಧ ಸಿಡಿದ ಸಿದ್ದು ಪರಮಾಪ್ತ; ಒಳ ಪೆಟ್ಟಿನ ಆತಂಕದಲ್ಲಿ ಕೈಪಡೆ

ಸೋಲಿಗೆ ಅಂಜದಿರಿ, ಪಕ್ಷ ಸಂಘಟನೆ ಮಾಡಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಯಾರೂ ಎದೆಗುಂದುವುದು ಬೇಡ. ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು. ಪಕ್ಷ ಸಂಘಟನೆಗೆ ಬಹಳಷ್ಟು ಒತ್ತು ಕೊಟ್ಟು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸೋಣ. ಇದು ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ ಸೂಚನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಜಿಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ

ಮಾಜಿ ಸಚಿವ ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆಗೆ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರು ಈ ಕಮಿಟಿಗೆ ಸಂಚಾಲಕರಾಗಿರುತ್ತಾರೆ. ಒಟ್ಟು 20 ಸದಸ್ಯರು ಕಮಿಟಿಯಲ್ಲಿ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

15ರ ನಂತರ ಸಂಘಟನೆಗೆ ಪ್ರವಾಸ:

ಪಕ್ಷದ ಸಂಘಟನೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 15ರ ನಂತರ ರಾಜ್ಯಾಧ್ಯಂತ ಪಕ್ಷದ ಪ್ರಮುಖ ಮುಖಂಡರು ಪ್ರವಾಸ ಮಾಡಲಿದ್ದಾರೆ. ನಾನೂ ಸೇರಿ ಪಕ್ಷದ ಬಹುತೇಕ ಹಿರಿಯ ನಾಯಕರು ಪ್ರವಾಸ ಕೈಗೊಳ್ಳುವರು ಎಂದು ಎಚ್.ಡಿ. ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.

ಹೋರಾಟದ ರೂಪುರೇಷೆ

ನಮ್ಮ ಹೋರಾಟ ಸಂಘಟಿತವಾಗಿರಬೇಕು ಹಾಗೂ ವಿಷಯಾಧಾರಿತ ಆಗಿರಬೇಕು. ಜನಪರವಾಗಿ ಇರಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ಹೋರಾಟ ಮಾಡುತ್ತೇವೆ. ಅಲ್ಲದೆ, ಪಕ್ಷದ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: BBMP Scams: ಬಿಬಿಎಂಪಿ ಕಾಮಗಾರಿ ಅಕ್ರಮಗಳಿಗೆ ತನಿಖೆಯ ಬಾಣ ಬಿಟ್ಟ ಡಿಕೆಶಿ; 4 ತನಿಖಾ ಸಮಿತಿ ರಚನೆಗೆ ಆದೇಶ

ಸಭೆಯಲ್ಲಿ ಹಿರಿಯ ನಾಯಕರಾದ ಬಂಡೆಪ್ಪ ಕಾಶೆಂಪೂರ್, ಎಚ್.ಕೆ. ಕುಮಾರಸ್ವಾಮಿ, ಅಲ್ಕೊಡ್ ಹನುಮಂತಪ್ಪ, ಸುರೇಶ್‌ ಗೌಡ, ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ, ಕೆ.ಎನ್. ತಿಪ್ಪೇಸ್ವಾಮಿ, ನೆಮಿರಾಜ್ ನಾಯ್ಕ, ವೈಎಸ್‌ವಿ ದತ್ತಾ, ಲಿಂಗೇಶ್, ಅಪ್ಪಾಜಿ ಗೌಡ, ವೀರಭದ್ರಯ್ಯ ಹಾಲರವಿ, ಮಾಗಡಿ ಮಂಜುನಾಥ್, ಸೂರಜ್ ನಾಯಕ್ ಸೋನಿ, ತಿಮ್ಮರಾಯಪ್ಪ, ದೊಡ್ಡನಗೌಡ ಪಾಟೀಲ್, ಅಶ್ವಿನ್ ಕುಮಾರ್, ಚೌಡರೆಡ್ಡಿ, ಶ್ರೀಕಂಠೇಗೌಡ ಸೇರಿದಂತೆ ಇನ್ನೂ ಅನೇಕ ನಾಯಕರು ಭಾಗಿಯಾಗಿದ್ದರು.

Exit mobile version