ಬೆಂಗಳೂರು: ಈಗ ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಸಿಂಗಾಪುರ ಪ್ರವಾಸ (Singapore tour) ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನ ಇದಾಗಿದೆ ಎಂಬ ಗಂಭೀರ ಆರೋಪ ಈಗ ಕಾಂಗ್ರೆಸ್ ಪಾಳೆಯದಿಂದ ಬಂದಿದೆ. ಅವರ ತಂತ್ರ ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಈಗ, ಶತ್ರುವಿನ ಶತ್ರು ಮಿತ್ರ ಆಗುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲದೆ, ಜೆಡಿಎಸ್- ಬಿಜೆಪಿ ನಾಯಕರ ನಡೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ “ಆಪರೇಷನ್ ಸಿಂಗಾಪುರ” (Operation Singapore) ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಹಾಗೂ ಜೆಡಿಎಸ್ ಸ್ನೇಹಿತರು ಸೇರಿ ಕೆಲವು ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಇಲ್ಲಿ ಅಥವಾ ಡೆಲ್ಲಿಯಲ್ಲಿ ಸಭೆ ನಡೆಸಲು ಆಗಲಿಲ್ಲ. ಹಾಗಾಗಿ ಒಂದಷ್ಟು ವಿಮಾನದ ಟಿಕೆಟ್ ಬುಕ್ ಆಗಿರುವ ಮಾಹಿತಿ ಲಭಿಸಿದೆ. ಶತ್ರುವಿನ ಶತ್ರು ಮಿತ್ರರಾಗುತ್ತಿದ್ದಾರೆ ಎಂದು ಹೇಳುವ ಮೂಲಕ, ಬಿಜೆಪಿ ಹಾಗೂ ಜೆಡಿಎಸ್‌ನವರು ಒಂದಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Rain News : ಮುಂಗಾರಿಗೆ ರಾಜ್ಯದಲ್ಲಿ 27 ಬಲಿ; ಹೈ ಅಲರ್ಟ್ ಇರಲು ಡಿಸಿಗಳಿಗೆ ಸೂಚಿಸಿದ ಕೃಷ್ಣ ಭೈರೇಗೌಡ
ಮೈತ್ರಿ ಮಾಡಿಕೊಳ್ಳುವ ಬಗ್ಗೆ ಈಗ ನಡೆದಿರುವ ಒಪ್ಪಂದದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ. ಜೆಡಿಎಸ್- ಬಿಜೆಪಿ ನಾಯಕರ ನಡೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇಲ್ಲಿ ಸಭೆ ಮಾಡುವವರು ಮಾಡಲಿ, ಹೊರಗೆ ಮಾಡುವವರು ಮಾಡಲಿ. ಎಲ್ಲವೂ ಚರ್ಚೆ ಆಗಬೇಕಲ್ಲ? ಯಾರು ಯಾರು ಎಲ್ಲೆಲ್ಲಿ ಸಭೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಎಲ್ಲವೂ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಡಿಕೆಶಿಯದ್ದು ಸಿಎಂ ಆಗೋ ಡ್ರಾಮಾ; ಅಶ್ವತ್ಥ ನಾರಾಯಣ ತಿರುಗೇಟು
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಹಲವು ದೃಷ್ಟಿಕೋನ ಇದೆ. ಕಾಂಗ್ರೆಸ್‌ನಲ್ಲಿ ಬಹಳ ವ್ಯತ್ಯಾಸಗಳಿವೆ. ಏನೂ ಸರಿಯಿಲ್ಲ ಎಂಬುದು ಗೊತ್ತಾಗುತ್ತಿದೆ. ಒಳಗಿಂದಲೇ ಸಿಎಂ ಕುರ್ಚಿ ಅಲುಗಾಡಿಸುವ ಕೆಲಸಗಳು ಆಗುತ್ತಿವೆ. ಕಾಂಗ್ರೆಸ್‌ನವರ ಸಹಕಾರ ಇಲ್ಲದೇ ಏನೂ ಆಗಲ್ಲ. ಬಹಳ ದೊಡ್ಡವರೇ ಇದಕ್ಕೆ ಸಹಕಾರ ಕೊಟ್ಟಂತೆ ಕಾಣುತ್ತಿದೆ. ನನ್ನನ್ನು ಸಿಎಂ ಮಾಡಲಿಲ್ಲವೆಂದರೆ ಈ ಸರ್ಕಾರವನ್ನು ಉಳಿಸಲ್ಲ ಅಂತ ಡಿಕೆಶಿ ಎಚ್ಚರಿಕೆ ಕೊಟ್ ಹಾಗಿದೆ. ಇದು ಅವರು ಮುಖ್ಯಮಂತ್ರಿಯಾಗಲು ಮಾಡುತ್ತಿರುವ ಡ್ರಾಮಾ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ (Ashwath Narayan) ಕುಟುಕಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ಕುಮಾರಸ್ವಾಮಿ ಅವರು ಯಾವ ರೀತಿ ಸರ್ಕಾರವನ್ನು ಬೀಳಿಸುತ್ತಾರೆ ಎಂಬುದನ್ನೂ ಡಿಕೆಶಿ ಹೇಳಬೇಕಪ್ಪ. ಕಾಂಗ್ರೆಸ್‌ನವರೇ ಈ ಸರ್ಕಾರ ಬಹಳ ದಿನ ಇಲ್ಲವೆಂದು ಹೇಳುತ್ತಿದ್ದಾರೆ. ಯಾಕೋ ಅವರ ಹೇಳಿಕೆ ನಿಜವಾಗುವ ಹಾಗೆ ಕಾಣಿಸುತ್ತಿದೆ. ಸಿಂಗಾಪುರದಲ್ಲಿ ಎಚ್‌ಡಿ ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ. ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ಅಂತ ಸಿದ್ದರಾಮಯ್ಯ ಹೇಳಲಿ. ಅವರದ್ದೇ ಸರ್ಕಾರ ಇದೆ, ಇಂಟಲಿಜೆನ್ಸ್ ಇದೆ. ಬಿ.ಕೆ. ಹರಿಪ್ರಸಾದ್ (BK Hariprasad) ಸಿಎಂ ಇಳಿಸೋದೂ ಗೊತ್ತು, ಕೂರಿಸೋದೂ ಗೊತ್ತು ಎಂದು ಹೇಳುತ್ತಾರೆ. ಇವರೆಲ್ಲರ ಹೇಳಿಕೆಯಿಂದ ಈ ಸರ್ಕಾರಕ್ಕೆ ಇವರ ಒಳಗಿಂದಲೇ ಖೆಡ್ಡಾ ರೆಡಿ ಆಗುತ್ತಿದೆ. ಡಿಕೆಶಿ ಸಿಎಂ ಆಗುವುದನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಇದನ್ನೂ ಓದಿ: BK Hariprasad : ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಬಿ.ಕೆ. ಹರಿಪ್ರಸಾದ್ ಗುಡುಗು
ಜೆಡಿಎಸ್ ಆಪರೇಷನ್ ಮಾಡಿದರೆ ಬಿಜೆಪಿ ಸಹಕಾರ ಇರುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ, ನಮ್ಮ ಪಕ್ಷ ಇಂತಹ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈಗಲೇ ಅದರ ಬಗ್ಗೆ ಮಾತನಾಡೋದು ಅಪಕ್ವ. ನಮ್ಮಿಂದ ಇಂಥ ಯಾವುದೇ ಪ್ರಯತ್ನ ಆಗುತ್ತಿಲ್ಲ. ನಾವು ಇಂಥ ಆಲೋಚನೆಯನ್ನು ಮಾಡುತ್ತಿಲ್ಲ. ನೇರ ನೇರ ಜನರ ಆಶೀರ್ವಾದ ಪಡೆದೇ ನಾವು ಬರುತ್ತೇವೆ ಎಂದು ಅಶ್ವತ್ಥ ನಾರಾಯಣ ಹೇಳಿದರು.