Site icon Vistara News

BJP-JDS Coalition: ಕಮಲ-ದಳ ಮೈತ್ರಿ ಫಿಕ್ಸ್‌: ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಎಚ್‌.ಡಿ. ಕುಮಾರಸ್ವಾಮಿ ನಾಯಕ?

JDS BJP Coalition

ಬೆಂಗಳೂರು: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕದ ಮಟ್ಟಿಗೆ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಯಾಗುವುದು (BJP-JDS Coalition) ಬಹುತೇಕ ಖಚಿತ ಎನ್ನಲಾಗುತ್ತಿದೆ. ಈಗಾಗಲೆ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಲೋಕಸಭೆಯಲ್ಲೂ ಇದೇ ಫಲಿತಾಂಶ ಹೊರಬಂದರೆ ಎಂಬ ಆತಂಕ ಆರಂಭವಾಗಿದೆ.

ಅದಕ್ಕಿಂತಲೂ ಹೆಚ್ಚಾಗಿ ದೇಶದ ವಿವಿಧೆಡೆ ಸಣ್ಣ ಪಕ್ಷಗಳು ಕಾಂಗ್ರೆಸ್‌ ನೇತೃತ್ವದಲ್ಲಿ ಒಗ್ಗೂಡುತ್ತಿವೆ. ಬಿಜೆಪಿಯೂ ಈಶಾನ್ಯ ಭಾರತ ಹಾಗೂ ಉತ್ತರ ಭಾರತದಲ್ಲಿ ಅನೇಕ ಸಣ್ಣಪುಟ್ಟ ಪಕ್ಷಗಳನ್ನು ಎನ್‌ಡಿಎಗೆ ಸೇರಿಸಿಕೊಂಡು ಶಕ್ತಪ್ರದರ್ಶನ ಮಾಡುವ ನಿರ್ಧಾರಕ್ಕೆ ಬಂದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಒಂದಷ್ಟು ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇರುವುದು ಕರ್ನಾಟಕದಲ್ಲೆ. ಇಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ತಮ್ಮ ಜತೆಗೂ ಒಂದಷ್ಟು ಪಕ್ಷಗಳಿವೆ ಎಂದು ತೋರಿಸಬಹುದು. ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷವನ್ನೇ ಬಿಜೆಪಿಗೆ ವಿಲೀನ ಮಾಡಿಕೊಳ್ಳಲೂ ಬಿಜೆಪಿ ನಾಯಕರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ನಿರಾಕರಿಸಿದ ಕುಮಾರಸ್ವಾಮಿ
ಜೆಡಿಎಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಪ್ರಸ್ತಾವನೆಯನ್ನು ಕುಮಾರಸ್ವಾಮಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ವಿಲೀನ ಮಾಡಿದರೆ ತಮ್ಮ ಸ್ವತಂತ್ರ ಅಸ್ತಿತ್ವವೇ ಹೋಗಿಬಿಡುತ್ತದೆ ಎಂದಿದ್ದಾರೆ. ಆದರೆ ಈಗ ಅತ್ಯಂತ ಹೀನಾಯವಾಗಿ ಸೋತಿರುವುದರಿಂದ, ಹೆಚ್ಚು ಸಮಯ ಅಧಿಕಾರದಿಂದ ದೂರವಿರುವುದೂ ಕಷ್ಟದ ಕೆಲಸ. ಹಾಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕೇಂದ್ರದಲ್ಲಿ ಸಚಿವನಾಗುವ ಸಾಧ್ಯತೆಗೆ ಕುಮಾರಸ್ವಾಮಿ ಹೆಚ್ಚು ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ.

ಬಿಜೆಪಿಯೊಂದಿಗೆ ಜೆಡಿಎಸ್‌ ವಿಲೀನ ಮಾಡಿದರೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವುದರ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನವನ್ನೂ ನೀಡುವುದಾಗಿ ಬಿಜೆಪಿ ತಿಳಿಸಿದೆ. ಇದೇ ಕಾರಣಕ್ಕೆ ಇಲ್ಲಿವರೆಗೂ ಬಿಜೆಪಿಗೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡದೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಜುಲೈ 18 ರಂದು ಎನ್‌ಡಿಎ ಸಭೆ ದೆಹಲಿಯಲ್ಲಿ ನಡೆಯಲಿದ್ದು, ಎಚ್‌.ಡಿ. ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಜೆಡಿಎಸ್‌ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಸುಳಿವು ನೀಡಿದ ಬೊಮ್ಮಾಯಿ
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ಈಗಾಗಲೇ ಕುಮಾರಸ್ವಾಮಿಯವರು ಕೆಲವೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ‌. ಮಾತುಕತೆ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದರು. ವಿಪಕ್ಷ ನಾಯಕನ ಸ್ಥಾನ ಜುಲೈ 18ರ ನಂತರ ಘೋಷಣೆ ಆಗಬಹುದು ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿ, ನನಗೆ ಬಂದ ಮಾಹಿತಿ ಪ್ರಕಾರ ದೇವೇಗೌಡರು, ಕುಮಾರಸ್ವಾಮಿ ಅವರು ದೆಹಲಿಗೆ ಹೋಗಬಹುದು. ಇಬ್ಬರಿಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಆಹ್ವಾನ ಕೊಟ್ಟಿರಬಹುದು. ಏನೇ ನಿರ್ಣಯ ಇದ್ದರೂ ನಮ್ಮ ಹೈಕಮಾಂಡ್ ನಾಯಕರು ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: Opposition Meet: ನಾಳೆ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ; ಜೆಡಿಎಸ್‌, ಆಪ್‌ ಭಾಗಿ? ತಿರುಗೇಟಿಗೆ ಬಿಜೆಪಿ ಸಜ್ಜು

2047 ಕ್ಕೆ ಭಾರತವನ್ನು ನಂಬರ್ ಒನ್ ಮಾಡುವುದು ಮೋದಿಯವರ ಉದ್ದೇಶ. ನಂಬರ್ ಒನ್ ಪಾರ್ಟಿ ಮಾಡೋದಲ್ಲ. ವೋಟ್ ಬ್ಯಾಂಕ್ ಮಾಡುವುದು ಮೋದಿ ಉದ್ದೇಶವಲ್ಲ. ಅಭಿವೃದ್ಧಿಯ ದೇಶ ಮಾಡುವುದು ಮೋದಿ ಉದ್ದೇಶ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಮೋದಿಯನ್ನು ದೇಶದ ಜನತೆ ಮತ್ತೊಮ್ಮ ಪ್ರಧಾನಿಯನ್ನಾಗಿ ಮಾಡುವುದು ನಿಶ್ಚಿತ ಎಂದರು.

ಆಯನೂರುಗೆ ಕಿರಿಕಿರಿ
ಜೆಡಿಎಸ್‌ ಜತೆಗೆ ಬಿಜೆಪಿ ಮೈತ್ರಿಯಾಗುವುದಕ್ಕೆ ಮಾಜಿ ಸಂಸದ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. ಜು.18ರ ನಂತರ ರಾಜಕೀಯ ಸ್ಥಿತ್ಯಂತರ ನಡೆಯುವ ಸಾಧ್ಯತೆ ಇದೆ. ಎಚ್‌. ಡಿ. ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಆಗಲೂಬಹುದು. ಬಿಟ್ಟು ಬಂದವರನ್ನೇ ಅಪ್ಪಿಕೊಳ್ಳುವ ಪರಿಸ್ಥಿತಿ ಬರುತ್ತಾ? ನನಗಂತೂ ಕಷ್ಟದ ಕೆಲಸ. ಸಂಪರ್ಕ ಕಳಕೊಂಡವರ ಜೊತೆ ಮತ್ತೆ ಸಂಬಂಧ ಬೆಳೆಸುವ ಸ್ಥಿತಿ ಬಾರದಿರಲಿ. ನಾನಂತೂ ಮತ್ತೆ ಎಂಎಲ್‌ಸಿ ಆಗಬೇಕೆಂದಿದ್ದೇನೆ. ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಮತ್ತೆ ಶಾಸಕರಾಗಲಿ ಎಂದಿದ್ದಾರೆ.

Exit mobile version