ಮೈಸೂರು: ಪಂಚ ರತ್ನ ಯಾತ್ರೆಯ ಮೂಲಕ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಅವರು ನೀಡಿರುವ ಜನಪರ ಯೋಜನೆಗಳು ಇಂದಿಗೂ ಮನೆ ಮಾತಾಗಿದೆ. ಅವರ ಏಕಾಂಗಿ ಹೋರಾಟಕ್ಕೆ ಜನತೆ ಸಾಥ್ ನೀಡಬೇಕು ಎಂದು ಜೆಡಿಎಸ್ (JDS Convention) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಸಮೀಪದ ದಾರಿಪುರದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಮೈಸೂರು ಜಿಲ್ಲೆಯಲ್ಲೂ ನಮ್ಮ ಅಭ್ಯರ್ಥಿಗಳು ಹೆಚ್ಚಾಗಿಯೇ ಗೆಲ್ಲಲಿದ್ದಾರೆ. ಜಿ.ಟಿ.ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. ನೀವೆಲ್ಲ ತೊಡೆ ತಟ್ಟಿ ನಿಂತಿದ್ದೀರಿ. ಐತಿಹಾಸಿಕ ಚುನಾವಣೆಯಲ್ಲಿ ಜಿಟಿಡಿ ಅವರನ್ನು ಗೆಲ್ಲಿಸಿ ಉತ್ತರ ನೀಡಿದ್ದೀರಿ ಎಂದು ಹೇಳಿದರು.
ಈ ಬಾರಿ 40 ರಿಂದ 50 ಸ್ಥಾನಕ್ಕೆ ಜೆಡಿಎಸ್ ಸೀಮಿತವಾಗುವುದಿಲ್ಲ. 123 ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ಒಬ್ಬರೇ ರಾಜ್ಯ ಸುತ್ತುತ್ತಿದ್ದಾರೆ. ಜೆಡಿಎಸ್ಗೆ ಮೈಸೂರು ಭಾಗಕ್ಕೆ ಜಿಟಿಡಿ ಒಂದು ಶಕ್ತಿ ಎಂದು ನನಗೆ ಕುಮಾರಣ್ಣ ಹೇಳಿ ಕಳುಹಿಸಿದ್ದಾರೆ. ಈ ಬೃಹತ್ ಕಾರ್ಯಕ್ರಮವನ್ನು ಎಚ್.ಡಿ.ದೇವೇಗೌಡರು ಲೈವ್ನಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಎಚ್.ಡಿ.ಕೋಟೆಯ ಚಿಕ್ಕಣ್ಣ ಅವರ ಪುತ್ರ ಹಾಗೂ ಪಿರಿಯಾಪಟ್ಟಣದ ಕೆ.ಮಹದೇವ್ ಅವರನ್ನು ಅಭ್ಯರ್ಥಿ ಮಾಡುವ ವಿಷಯಕ್ಕೆ ಕುಮಾರಸ್ವಾಮಿ ಶೀಘ್ರವೇ ತೆರೆ ಎಳೆಯಲಿದ್ದಾರೆ ಎಂದು ತಿಳಿಸಿದರು.
ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ ಇಲ್ಲ. ಟಿಕೆಟ್ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು, ರಾಜ್ಯಾಧ್ಯಕ್ಷರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ. ಎಚ್.ಡಿ.ರೇವಣ್ಣ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರವೂ ನನಗೆ ಗೊತ್ತಿಲ್ಲ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಅಲ್ಲ, ಯುವ ಘಟಕದ ಅಧ್ಯಕ್ಷ. ನನ್ನ ಇತಿಮಿತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು.
ನಿಖಿಲ್ ರಾಮನಗರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಜನರ ಕೂಗಾಗಿತ್ತು. ಅವರ ಕೂಗಿಗೆ ಸ್ಪಂದಿಸಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಹಾಗೂ ಹರೀಶ್ ಗೌಡ ಸಂಬಂಧ ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲೆಯಲ್ಲಿ ಯುವಕರೊಂದಿಗೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ಹರೀಶ್ ಗೌಡ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಾನು ಶಾಸಕನಾದ ಮೇಲೆ ರಸ್ತೆ, ಚರಂಡಿ, ಮೂಲಸೌಕರ್ಯ ಆಗಿದೆ. ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ ಆಗಿದೆ. ಉಂಡವಾಡಿ ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆಗಳು ಆಗಿವೆ. ಚಾಮುಂಡೇಶ್ವರಿ ಜನರ ಪ್ರೀತಿ ಏನು ಎಂಬುದಕ್ಕೆ ಸಮಾವೇಶದಲ್ಲಿ ಸೇರಿರುವ ಜನರೇ ಸಾಕ್ಷಿ ಎಂದರು.
ಕಳೆದ ಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕುಮಾರ ಪರ್ವ ಮಾಡಿದ್ದರು. ರಾಜ್ಯದ ಮುಖ್ಯಮಂತ್ರಿಯಾದರು. ಈಗ ನಿಖಿಲ್ ಕುಮಾರಸ್ವಾಮಿ ಚಾಮುಂಡೇಶ್ವರಿಗೆ ಬಂದಿದ್ದಾರೆ. ಮತ್ತೊಂದು ಪಂಚ ರತ್ನ ಪ್ರಾರಂಭ ಆಗುತ್ತದೆ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿಗೆ ಬರುತ್ತಾರೆ. ಚಾಮುಂಡೇಶ್ವರಿ ಜನ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೀರಿ. ಮೂರನೇ ಬಾರಿಗೂ ಮುಖ್ಯಮಂತ್ರಿ ಮಾಡುತ್ತೀರಿ ಎಂದರು.
ಈ ಹಿಂದೆ ದುಡ್ಡಿನಿಂದ ಚುನಾವಣೆ ಗೆಲ್ಲುತ್ತಿದ್ದರು. ಈಗ ದುಡ್ಡು ಬೇಡ, ಜಿ.ಟಿ.ದೇವೇಗೌಡ ಬೇಕು ಅಂತ ಬಂದಿದ್ದೀರಿ. ದೇವೇಗೌಡರು ಇರುವಾಗಲೇ ಅವರನ್ನು ಸಂತೋಷ ಪಡಿಸಬೇಕು. ಜೆಡಿಎಸ್ ಗುರುತಿಗೆ ನೀವು ಹಾಕುವ ವೋಟು ದೇವೇಗೌಡರಿಗೆ ಹಾಕುವ ವಜ್ರದ ಹಾರ ಎಂದು ಹೇಳಿದರು.
ನಿಖಿಲ್-ಹರೀಶ್ಗೌಡ ಲವ-ಕುಶ ಇದ್ದಂತೆ
ನಿಖಿಲ್ ಕುಮಾರಸ್ವಾಮಿ, ಜಿ.ಡಿ.ಹರೀಶ್ಗೌಡ ಇನ್ನೂ 50 ವರ್ಷ ಜನ ಸೇವೆ ಮಾಡಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು. ನಿಖಿಲ್-ಹರೀಶ್ಗೌಡ ಇಬ್ಬರೂ ಲವ- ಕುಶ ಇದ್ದಂತೆ. ರಾಮ- ಲಕ್ಷ್ಮಣ ಇದ್ದಂತೆ. ಹರೀಶ್ಗೌಡ ಹುಣಸೂರಲ್ಲಿ ಗೆದ್ದೇ ಗೆಲ್ಲುತ್ತಾರೆ. ನಿಖಿಲ್ ರಾಜ್ಯದಲ್ಲೇ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ಇಬ್ಬರೂ ನಿಮ್ಮೊಂದಿಗೆ ಬರುತ್ತಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಹುಣಸೂರು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ತುಂಬಾ ಪವರ್ ಫುಲ್ ಕ್ಷೇತ್ರ. ಇಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾರೆ. ನನ್ನನ್ನು ಕ್ರಿಮಿನಲ್ ಎಂದಿರುವುದನ್ನು ನಾನು ಗಮನಿಸಿದ್ದೇನೆ.
ನನಗೆ ಸರ್ಟಿಫಿಕೇಟ್ ಕೊಡಬೇಕಿರುವುದು ಜನ. ಯಾರು ಒಳ್ಳೆಯವರು, ಕೆಟ್ಟವರು ಎಂಬುದನ್ನು ಜನ ತೀರ್ಮಾನ ಮಾಡಬೇಕು. ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ಇರುತ್ತದೆ. ನಾನು ಏನು ಮಾಡಿದ್ದೇನೆ, ಅವರು ಏನು ಮಾಡಿಸಿಕೊಂಡಿದ್ದಾರೆ ಎಂಬುದು ಇಬ್ಬರ ಆತ್ಮಸಾಕ್ಷಿಗೆ ಗೊತ್ತು ಎಂದು ಮೈಮುಲ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ನೀವೆಲ್ಲ ಹಿಂದೆಯೇ ತಿಳಿಸಿದ್ದೀರಿ. ನಮ್ಮ ಜನ ಅಥವಾ ನಾನು ಯಾರೂ ಮಾತಾಡಿಲ್ಲ. ಟೀಕಿಸಿದವರಿಗೆ ಉತ್ತರ ಕೊಟ್ಟಿದ್ದೀರಿ. ಸುಮಾರು ಒಂದು ಲಕ್ಷ ಜನ ಸೇರಿದ್ದೀರಿ. ನೀವೆಲ್ಲ ಜಿಟಿ ದೇವೇಗೌಡ, ಹರೀಶ್ ಗೌಡ ಬೇಕು ಎಂದು ಬಂದಿದ್ದೀರಿ ವಿನಃ ಹಣಕ್ಕಾಗಿ ಅಲ್ಲ. ಎರಡು ಬಾರಿ ನೀವು ಗೆಲ್ಲಿಸಿದ್ದೀರಿ.
ಮೂರನೇ ಬಾರಿಯು ಜೆಡಿಎಸ್ ಮತ ನೀಡಿ ಗೆಲ್ಲಿಸಿ ಎಂದು ಕೋರಿದರು.
ಯುವ ನಾಯಕರ ಹುಟ್ಟುಹಬ್ಬದ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ನಿಖಿಲ್ ಕುಮಾರಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ಗೌಡ ಹುಟ್ಟಹಬ್ಬದ ನೆಪದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಶಕ್ತಿ ಪ್ರದರ್ಶನ ಮಾಡಲಾಯಿತು. ಸಮಾವೇಶಕ್ಕೂ ಮುನ್ನ ಉಭಯ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಕಾರ್ಯಕರ್ತರು, ಬೃಹತ್ ಗಾತ್ರದ ಮೂಸಂಬಿ ಹಾರ ಹಾಕಿ ಸನ್ಮಾನ ಮಾಡಿದರು. ಕ್ರೇನ್ ಮೂಲಕ ಹಾರ ಹಾಕಿ ಪಟಾಕಿ ಸಿಡಿಸುವ ಮೂಲಕ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ತೆರೆದ ವಾಹನದಲ್ಲಿ ನಾಯಕರ ಮೆರವಣಿಗೆ ನಡೆಯಿತು. ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ದೇವೇಗೌಡ, ಪುತ್ರ ಹರೀಶ್ಗೌಡ, ನಾಯಕ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದರು. ದಾರಿಯುದ್ದಕ್ಕೂ ಜೆಡಿಎಸ್ ಫ್ಲೆಕ್ಸ್, ಬ್ಯಾನರ್ಗಳು ಹಾಗೂ ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು.