ಬೆಂಗಳೂರು: ಎಲ್ಲ ಪಕ್ಷಗಳಿಗಿಂತಲೂ ಮೊದಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಜೆಡಿಎಸ್ ಪಕ್ಷ ಹಾಸನ ಟಿಕೆಟ್ ಕಾರಣಕ್ಕೆ ಎರಡನೇ ಪಟ್ಟಿಯ ಘೋಷಣೆಯನ್ನು ತಡೆ ಹಿಡಿದಿದ್ದು, ಈ ಕುತೂಹಲಕ್ಕೆ ಭಾನುವಾರವೇ ತೆರೆ ಬೀಳಲಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಭೆಯನ್ನು ಆಯೋಜಿಸಿದ್ದು, ಇದರಲ್ಲಿ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.
ತಮಗೇ ಟಿಕೆಟ್ ಸಿಗಬೇಕು ಎಂಬ ಕಾರಣಕ್ಕೆ ಭವಾನಿ ರೇವಣ್ಣ ಅವರು ಪತಿ ಎಚ್.ಡಿ. ರೇವಣ್ಣ ಅವರೊಂದಿಗೆ ವಿವಿಧ ದೇವಸ್ಥಾನಗಳ ಭೇಟಿ ನಡೆಸುತ್ತಿದ್ದಾರೆ. ಶಿವವಾರ ಮೇಲುಕೋಟೆಯಲ್ಲಿ ನಡೆದ ವೈರಮುಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ನಂತರ ಆದಿಚುಂಚನಗಿರಿಯ ಕಾಲಭೈರವೇಶ್ವರ ದರ್ಶನ ಪಡೆದು ಪೂಜೆ ಸಲ್ಲಿಸಿ ತೆರಳಿದ್ದಾರೆ. ರೇವಣ್ಣ ಹಾಗೂ ಭವಾನಿ ರೇವಣ್ಣ ಬೆಂಗಳೂರಿಗೆ ಆಗಮಿಸಿದ್ದು, ದೇವೇಗೌಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸೋಮವಾರ ಎರಡನೇ ಪಟ್ಟಿ ಘೋಷಣೆಯಾಗಲಿದೆ. ಹಾಸನವೂ ಸೇರಿದಂತೆ ಎಲ್ಲವನ್ನೂ ಘೋಷಣೆ ಮಾಡ್ತೀವಿ. ಹಾಸನದ ಗೊಂದಲವೂ ಬಗೆಹರಿಯುತ್ತದೆ. ಇಂದು ದೇವೆಗೌಡ್ರು ಮಾತುಕತೆಗೆ ಕರೆದಿದ್ದಾರೆ, ಅವರ ಜತೆ ಚರ್ಚೆ ಮಾಡ್ತೀವಿ. ನಾನು ಕಾರ್ಯಕರ್ತರ ಪರ ಅನ್ನೋ ನಿಲುವಿನಲ್ಲೆ ಇಂದಿಗೂ ಇದ್ದೇನೆ.
ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಬಾರದು ಎಂದು ಎಂದು ದೇವೆಗೌಡರು ನೊಂದು ಮಾತನಾಡಿದ್ದಾರೆ. ದೇವೆಗೌಡರು ಆರೋಗ್ಯ, ಆಯಸ್ಸು ನನಗೆ ಮುಖ್ಯವಾದುದು. ದೇವೆಗೌಡರಿಗೂ ಮನವರಿಕೆ ಇದೆ. ಜನರ ಅಭಿಪ್ರಾಯ ಅವರು ಸಂಗ್ರಹ ಮಾಡಿದ್ದಾರೆ. ನಾವೆಲ್ಲರೂ ಮೊದಲಿನಿಂದಲೂ ನಮ್ಮ ನಿರ್ಣಯ ಏನೇ ಇದ್ರೂ ದೇವೆಗೌಡರ ನಿರ್ಣಯಕ್ಕೆ ತಲೆಬಾಗಿದ್ದೇವೆ. ದೇವೆಗೌಡರ ಮಧ್ಯಸ್ಥಿಕೆ ಎಲ್ಲದಕ್ಕೂ ತೆರೆ ಎಳೆಯಲಿದೆ. ಇಷ್ಟು ದಿನ ಚರ್ಚೆಯಲ್ಲಿದ್ದ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಗೊಂದಲವಿಲ್ಲದೆ ದೇವೆಗೌಡರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: JDS Politics : ಹಾಸನ ಟಿಕೆಟ್ ಈಗಾಗಲೇ ನಿರ್ಧಾರವಾಗಿದೆ ಎಂದ ದೇವೇಗೌಡ್ರು; ಭವಾನಿ ರೇವಣ್ಣ ಆಸೆಗೆ ಬಿತ್ತಾ ತಣ್ಣೀರು?