ಚಾಮರಾಜನಗರ: ಜೆಡಿಎಸ್‌ದು ಪಂಚರತ್ನ ಅಲ್ಲ, ಅಷ್ಟ ರತ್ನ. ಇಬ್ರಾಹಿಂ ಸೇರಿದರೆ ನವರತ್ನ. ಅವರ ಮನೆಯವರೇ ಅಷ್ಟರತ್ನಗಳು. ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ (HD Devegowda), ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೀಗೆ ಅವರ ಮನೆಯವರೇ ಅಷ್ಟರತ್ನಗಳಾಗಿದ್ದಾರೆ. ಇದರ ಮೇಲೊಬ್ಬ ಸಿಎಂ ಇಬ್ರಾಹಿಂ ಸೇರಿಕೊಂಡಿದ್ದು, ನವರತ್ನ ಆದಂತೆ ಆಗಿದೆ ಎಂದು ಜೆಡಿಎಸ್ ಪಂಚರತ್ನ ಯೋಜನೆ ಬಗ್ಗೆ ಸಂಸದ ವಿ. ಶ್ರೀನಿವಾಸ ಪ್ರಸಾದ್ (Sreenivasa Prasad) ವ್ಯಂಗ್ಯ.ವಾಡಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡರು 91 ವರ್ಷದ ಹಿರಿಯ ರಾಜಕಾರಣಿಯಾಗಿದ್ದಾರೆ. ಮೇಲಾಗಿ ಅವರು ದೇಶದ ಪ್ರಧಾನಿ ಆಗಿದ್ದವರು. ಎಲ್ಲ ಅಧಿಕಾರ ತಮಗೇ ಬೇಕು ಎಂದು ಹೇಳುತ್ತಾರೆ. ಹಾಸನದಲ್ಲಿ ಸೊಸೆಯನ್ನು ತರಲು ಮುಂದಾಗಿದ್ದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಟಿಕೆಟ್ ಬೇಕೆಂದು ಹೇಳುತ್ತಾರೆ ಎಂದು ಲೇವಡಿ ಮಾಡುವ ಮೂಲಕ ಕುಟುಂಬ ರಾಜಕಾರಣವನ್ನು ಪ್ರಸ್ತಾಪಿಸಿದರು.
ಇದೇ ನನ್ನ ಕೊನೆಯ ಚುನಾವಣಾ ಭಾ಼ಷಣ
ಇದೇ ನನ್ನ ಕೊನೆಯ ಚುನಾವಣಾ ಭಾ಼ಷಣವಾಗಿದೆ. ಇನ್ನೆಂದೂ ರಾಜಕೀಯ ಭಾಷಣ ಮಾಡಲ್ಲ. ನಾನು ಮೊದಲ ಚುನಾವಣೆಗೆ ನಿಂತು 50 ವರ್ಷ ಆಯ್ತು. 3 ಬಾರಿ ಸೋತಿದ್ದೇನೆ, 6 ಬಾರಿ ಗೆದ್ದಿದ್ದೇನೆ. ಮುಂದಿನ ವರ್ಷ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಇದನ್ನೂ ಓದಿ: Modi In Karnataka: ನಂಜನಗೂಡು ನಂಜುಂಡೇಶ್ವರ ದೇಗುಲಕ್ಕೆ ಮೋದಿ ಭೇಟಿಗೆ ಕ್ಷಣಗಣನೆ, ದೇವರ ಬಳಿ ಪ್ರಧಾನಿ ಸಂಕಲ್ಪ
ಸಿದ್ದರಾಮಯ್ಯ ಮಜಾರಾಮಯ್ಯ
ಸಿದ್ದರಾಮಯ್ಯ ಒಬ್ಬ ಮಜಾರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಬರೀ ಮಜಾ ಮಾಡೋಕೆ ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದಾರೆ. ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ತತ್ತರಿಸಿ ಹೋಗಿದ್ದರು. ನಾವು ನಿಮ್ಮ ಬೆನ್ನಿಗೆ ನಿಂತು ಕಷ್ಟಪಟ್ಟು ಗೆಲ್ಲಿಸಲಿಲ್ವಾ? ಆದರೆ, ನೀವು ಏನ್ ಮಾಡಿದಿರಿ? ಪುನಾರಚನೆ ನೆಪದಲ್ಲಿ ನನ್ನನ್ನು ತೆಗೆದು ಹಾಕಿದಿರಿ. ನನ್ನ ಮನಸ್ಸಿಗೆ ಗಾಯ ಮಾಡಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದರು.