Site icon Vistara News

JDS Karnataka: ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದ ಪಕ್ಷ ಇದ್ದರೆ ತೋರಿಸಿ: ಬಿಜೆಪಿ ವಿರೋಧಿ ಕೂಟ ಸೇರದ ಬಗ್ಗೆ ಎಚ್‌.ಡಿ. ದೇವೇಗೌಡ ಸುಳಿವು

HD Devegowda

#image_title

ಬೆಂಗಳೂರು: ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಆಗುವ ಸಾಧ್ಯತೆ ಇದೆಯೇ? ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನಮನಸ್ಕ ಪಕ್ಷಗಳು ಒಂದಾದರೆ, ಆ ಒಕ್ಕೂಟದ ನೇತೃತ್ವ ವಹಿಸುವಿರಾ? ಬಿಜೆಪಿ ವಿರುದ್ಧ ಒಕ್ಕೂಟ ರಚನೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಯತ್ನ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಈ ದೇಶದಲ್ಲಿ ಬಿಜೆಪಿ ಜತೆ ಸೇರಿ ರಾಜಕೀಯ ಮಾಡದೆ ಇರುವ ಯವುದರೂ ಪಕ್ಷವನ್ನು ತೋರಿಸಿ. ಮೊದಲು ನನ್ನ ಪ್ರಶ್ನೆಗೆ ಉತ್ತರ ನೀಡಿ. ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದರು. ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಬಿಜೆಪಿ ಪಕ್ಷದ ಜತೆಗೆ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಅನೇಕರು ನಾಯಕರು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಕರ್ನಾಟಕದಲ್ಲಿಯೂ ಅದನ್ನು ಕಾಣಬಹುದು. ಇದರಲ್ಲಿ ಮುಚ್ಚುಮರೆ ಏನಿದೆ? ಎಂದು ಹೇಳಿದರು.

ಪಕ್ಷವನ್ನು ಸಂಘಟಿಸುತ್ತೇವೆ:
ಈ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಅದರಿಂದ ಕುಗ್ಗಬೇಕಿಲ್ಲ. ಅನೇಕ ಚುನಾವಣೆಗಳಲ್ಲಿ ನಾನು ಸೇರಿದಂತೆ ನಾವೆಲ್ಲರೂ ಗೆದಿದ್ದೇವೆ, ಸೋತಿದ್ದೇವೆ. ಆಮೇಲೆ ಫೀನಿಕ್ಸಿನಂತೆ ಮೇಲೆದ್ದು ಬಂದಿದ್ದೇವೆ. ಈಗಲೂ ಅಷ್ಟೇ, ಸೋತಿದ್ದೇವೆ ಎಂದು ಮನೆಯಲ್ಲಿ ಕೂರಲಾರೆ. ಪಕ್ಷಕ್ಕಾಗಿ ಎಷ್ಟು ಕೆಲಸ ಮಾಡಲಿಕ್ಕೂ ನಾನು ತಯಾರಿದ್ದೇನೆ.

ಮುಂದೆ ನಮ್ಮ ಅನೇಕ ಚುನಾವಣೆಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತಾಲೂಕು, ಜಿಲ್ಲಾ ಪಂಚಾಯಿತಿ ಸೇರಿ ಹಲವಾರು ಚುನಾವಣೆಗಳಿವೆ. ಈ ಚುನಾವಣೆಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಆ ಬಗ್ಗೆ ಪಕ್ಷದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಸಂಘಟನೆ ಕಡೆ ಒತ್ತು ನೀಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ, ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: Loksabha 2024: ಎಚ್‌.ಡಿ. ದೇವೇಗೌಡರ ಆಶೀರ್ವಾದ ಪಡೆದ ಪ್ರತಾಪ್‌ ಸಿಂಹ; ಲೋಕಸಭೆ ಚುನಾವಣಾ ಲೆಕ್ಕಾಚಾರವೆಂದ ನೆಟ್ಟಿಗರು!

Exit mobile version