ಮಂಗಳೂರು: ಮಕ್ಕಳನ್ನು ಕಳೆದುಕೊಂಡು ಸಂಕಟದಲ್ಲಿರುವ ಆ ಮೂರು ಮನೆಗಳಿಗೆ ಹೋದರೆ ಕಣ್ಣಲ್ಲಿ ನೀರು ಬರಲ್ಲ, ರಕ್ತವೇ ಬರುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಇತ್ತೀಚೆಗೆ ಕೊಲೆಯಾದ ಕಳಂಜದ ಮಸೂದ್, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್‌ನ ಮೊಹಮ್ಮದ್ ಫಾಝಿಲ್ ಅವರ ಮನೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಮಾನವೀಯತೆಯೂ ಇಲ್ಲವಲ್ಲ
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಸೂದ್ ಮತ್ತು ಫಾಝಿಲ್ ಅವರ ಕುಟುಂಬಕ್ಕೆ ಸಾಂತ್ವನ ಹೇಳದೆ ಇರುವುದನ್ನು ಆಕ್ಷೇಪಿಸಿದ ಇಬ್ರಾಹಿಂ ಅವರು, ʻʻಎಸ್.ಆರ್. ಬೊಮ್ಮಾಯಿ ಅವರ ಮಗನಾಗಿರುವ ಬಸವರಾಜ ಬೊಮ್ಮಾಯಿ ಅವರು ಕನಿಷ್ಟ ಪಕ್ಷ ಮಾನವೀಯತೆಗೂ ಉಳಿದ ಇಬ್ಬರ ಮನೆಗೆ ಹೋಗಲಿಲ್ಲ. ಮುಸಲ್ಮಾನ ಸೈನಿಕ ಸತ್ತಾಗಲೂ ಬೊಮ್ಮಾಯಿ ಅವರ ಮನೆಗೆ ಹೋಗಿಲ್ಲʼʼ ಎಂದರು.
ʻʻಮಾತನಾಡಿದ್ರೆ ಜಾತಿ ಜಾತಿ ಅಂತಾರೆ, ಹಿಂದುತ್ವ ಅಂತಾರೆ. ನಾನು ಅರ್ಜಿ ಹಾಕಿ ಮುಸ್ಲಿಂ ಆಗಿ ಹುಟ್ಟಿದ್ನಾ ಸ್ವಾಮಿʼʼ ಎಂದು ಪ್ರಶ್ನಿಸಿದ ಅವರು, ಪ್ರವೀಣ್ ಮನೆಗೆ ಹೋಗಿ ಅವರ ಪತ್ನಿಯ ಸಂಕಟ ನೋಡಿ ನಾನು ಅತ್ತು ಬಿಟ್ಟೆ. ಫಾಝಿಲ್ ತಂದೆಯ ಅಳು ನೋಡಲು ಆಗಲಿಲ್ಲ ನನಗೆ ಎಂದರು.
ಎನ್‌ಐಎಯಿಂದ ಏನೂ ಆಗಲ್ಲ
ಪ್ರವೀಣ್ ಸಾವಿನ ತನಿಖೆಯನ್ನು ಎನ್‌ಐಎಗೆ ವಹಿಸಿರುವ ಕ್ರಮವನ್ನು ಆಕ್ಷೇಪಿಸಿದ ಅವರು, ನಮ್ಮ ಪೊಲೀಸರಿಗೆ ಫ್ರೀ ಪವರ್ ಕೊಡಿ, ಅವರು ನಿಶ್ಯಕ್ತರಲ್ಲ. ಭಟ್ಕಳದಲ್ಲಿ ಬಿಜೆಪಿ ಮುಖಂಡ ಸತ್ತಾಗ ಎನ್ ಐಎ ಕೊಟ್ಟರು, ಆದರೆ ತನಿಖೆ ಆಗಲಿಲ್ಲ. ಈಗ ಪೊಲೀಸ್ ತನಿಖೆಯೂ ಆಗಲ್ಲ. ಎನ್‌ಐಎ ತನಿಖೆಯೂ ಆಗಲ್ಲʼʼ ಎಂದು ಹೇಳಿದರು.
ಈ ಕೊಲೆಗಳಿಗೆ ಸಂಬಂಧಿಸಿ ಅಗಸ್ಟ್ 5ರ ಎಲ್ಲ ಆರೋಪಿಗಳನ್ನು ಬಂಧಿಸದೆ ಇದ್ದರೆ ಜೆಡಿಎಸ್ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಹೇಳಿದರು ಇಬ್ರಾಹಿಂ.
ಇದನ್ನೂ ಓದಿ| ಹತ್ಯೆಗೊಳಗಾದ ಮೂವರ ಮನೆಗೂ ಎಚ್‌ಡಿಕೆ ಭೇಟಿ, ತಲಾ 5 ಲಕ್ಷ ರೂ. ಪರಿಹಾರ, ಕುಟುಂಬಗಳಿಗೆ ಸಾಂತ್ವನ