Site icon Vistara News

Mysore-Bangalore Highway | ದಶಪಥ ಹೆದ್ದಾರಿಗೆ ದೇವೇಗೌಡರ ಹೆಸರಿಡಿ: ಗಡ್ಕರಿಗೆ ಜೆಡಿಎಸ್‌ ನಾಯಕ ಶರವಣ ಮನವಿ

hd devegowda birthday

hd devegowda birthday

ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಕರ್ನಾಟಕದ ಸಾಕ್ಷಿ ಪ್ರಜ್ಞೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೆಸರು ಇಡಬೇಕು ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಮನವಿ ಮಾಡಿದ್ದಾರೆ.

ಹೆದ್ದಾರಿ ಕಾಮಗಾರಿ ವೀಕ್ಷಣೆ ಮತ್ತು ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಲ್ಲಿ ಶರವಣ ಅವರು ಈ ಮನವಿ ಮಾಡಿಕೊಂಡಿದ್ದು, ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದೇ ಆದರೆ, ಈ ಮಹಾರಸ್ತೆಗೆ ಮಾಜಿ ಪ್ರಧಾನಿಗಳ ಹೆಸರಿಡಲು ಸೂಚಿಸಬೇಕು ಎಂದಿದ್ದಾರೆ.

ಯಾಕೆ ದೇವೇಗೌಡರ ಹೆಸರು?
ಈ ರಸ್ತೆಗೆ ಮಾಜಿ ಪ್ರಧಾನಿಗಳ ಹೆಸರು ಯಾಕಿಡಬೇಕು ಎನ್ನುವುದಕ್ಕೆ ಶರವಣ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ.

೧. ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ. ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ . ಇದನ್ನು ಮನಗಂಡು ಈ ದಿಗ್ಗಜ ನಾಯಕರ ಹೆಸರಿಗೆ ಗೌರವಿಸುವ ದೃಷ್ಟಿಯಿಂದ ಈ ದಶ ಪಥ ರಸ್ತೆಗೆ ಅವರ ಹೆಸರಿಡುವುದು ಸೂಕ್ತ.

೨. ಕನ್ನಡ ನಾಡಿನ ನೆಲ ಜಲಕ್ಕೆ, ಇಲ್ಲಿಯ ಹಕ್ಕುಗಳಿಗೆ, ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ ಅಭೂತಪೂರ್ವ. ನಾಡಿನ ಜೀವ ನದಿಗಳಾದ ಕಾವೇರಿ ಹೋರಾಟದಿಂದ ಹಿಡಿದು, ಕೃಷ್ಣೆಯ ವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

೩. ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆ ಅವರದು. ದಶ ಪಥ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ.

೪. ರಾಜ್ಯದ ಬಿಜೆಪಿ ಸರಕಾರ ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಬೆಂಗಳೂರು ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು.

ಇದನ್ನೂ ಓದಿ | 2024 ಜನವರಿ ಹೊತ್ತಿಗೆ Bengaluru-Chennai Expressway ಲೋಕಾರ್ಪಣೆ: ಗಡ್ಕರಿ ಭರವಸೆ

Exit mobile version