ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ (Congress Government) ರಾಜ್ಯದಲ್ಲಿ ಈಗನಿಂದಲೇ ಭಾರಿ ರಣತಂತ್ರವನ್ನು ಹೆಣೆಯುತ್ತಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ತನ್ನ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಶತಾಯಗತಾಯ 20 ಸೀಟನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್ ಈಗ ಆಪರೇಷನ್ ಹಸ್ತ (Operation Hasta) ಕಾರ್ಯಾಚರಣೆಗೂ ಕೈಹಾಕಿದೆ. ಜತೆಗೆ ಪ್ರಮುಖ ಜಾತಿಗಳ ಶಾಸಕರನ್ನು ಸೆಳೆದರೆ ಆ ಸಮುದಾಯಗಳ ಮತಗಳು ಕ್ರೋಢೀಕರಣವಾಗುತ್ತದೆ ಎಂಬ ನಿಟ್ಟಿನಲ್ಲಿಯೂ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಮೇಲೆ ಕಣ್ಣಿಟ್ಟಿದ್ದು, ಇದರ ಪ್ರಕಾರವಾಗಿ ಕೆಲವರ ಜತೆ ಮಾತುಕತೆ ಸಹ ನಡೆದಿದೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗೆ ಪುಷ್ಟಿ ನೀಡುವಂತೆ ಈಗ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ (JDS MLA Samriddhi Manjunath) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಆಪರೇಷನ್ ಹಸ್ತದ ಭಾಗವಾಗಿ ತಮಗೆ ದೆಹಲಿಗೆ ಬರುವಂತೆ ಕಾಂಗ್ರೆಸ್ ನಾಯಕರು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಅವರು ಪಕ್ಷ ಸಂಘಟನೆ ದೃಷ್ಟಿಯಿಂದ ಬಹಳ ವೇಗವಾಗಿ ಹೆಜ್ಜೆ ಇಡುತ್ತಿದ್ದಾರೆ. ಎಲ್ಲದಕ್ಕೂ ಸೈ ಎನ್ನುವ ಮನಃಸ್ಥಿತಿಯಲ್ಲಿ ಅವರು ಮುನ್ನುಗ್ಗುತ್ತಿರುವಂತೆ ಕಂಡುಬರುತ್ತಿದೆ. ಈ ನಡುವೆ ಕಳೆದ ಬಾರಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ, ಆ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದವರನ್ನೇ ಮೊದಲ ಟಾರ್ಗೆಟ್ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, “ಘರ್ ವಾಪ್ಸಿ” (Ghar Wapsi) ಹೆಸರಿನಲ್ಲಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ ಎಂದೂ ಹೇಳಲಾಗುತ್ತಿದೆ. ಇದರ ಭಾಗವಾಗಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಎಸ್‌ಟಿಎಸ್ ಸಹ ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದಾರೆಂದೇ ಹೇಳಲಾಗುತ್ತಿದೆ. ಜತೆಗೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಸಹ ಕಾಂಗ್ರೆಸ್ ಸೇರ್ಪಡೆ ಬಗ್ಗೆ ದಟ್ಟ ವದಂತಿ ಹಬ್ಬಿದೆ. ಇವರೂ ಸೇರಿ ಇನ್ನೂ ಹಲವು ಬಿಜೆಪಿ ಶಾಸಕರು, ಮಾಜಿ ಶಾಸಕರ ಹೆಸರು ಕೇಳಿಬರುತ್ತಿದೆ. ಈ ನಡುವೆ ಕೋಲಾರ ಜಿಲ್ಲೆಯ ಮುಳಬಾಗಿಲು ಶಾಸಕ, ದಲಿತ ಮುಖಂಡ ಸಮೃದ್ಧಿ ಮಂಜುನಾಥ್ ಅವರನ್ನೂ ಸಹ ಸೆಳೆಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿತ್ತು. ಈ ನಿಟ್ಟಿನಲ್ಲಿ ಅವರನ್ನು ಸಂಪರ್ಕ ಮಾಡಿತ್ತು ಎಂಬ ವಿಚಾರ ಈಗ ಬಯಲಾಗಿದೆ.
ಸಮೃದ್ಧಿ ಮಂಜುನಾಥ್ ಆರೋಪ ಏನು?
ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ. ಕಾಂಗ್ರೆಸ್‌ನವರು ನಮ್ಮ ಪಕ್ಷದ (ಜೆಡಿಎಸ್) ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಈ ಸಂಬಂಧ ಮಾತನಾಡಲು ದೆಹಲಿಗೆ ಬರುವಂತೆ ಒತ್ತಡ ತಂದಿದ್ದರು. ಆದರೆ, ನಾನು ಅವರ ಒತ್ತಡಕ್ಕೆ ಮಣಿಯಲಿಲ್ಲ. ಜತೆಗೆ ದೆಹಲಿಗೂ ಹೋಗಲಿಲ್ಲ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ನನ್ನನ್ನು ಸಂಪರ್ಕ ಮಾಡಿದ್ದರು ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಶಾಸಕರಾಗಿರುವುದರಿಂದ ಅನುದಾನಕ್ಕಾಗಿ ಸಿಎಂ ಇಲ್ಲವೇ ಡಿಸಿಎಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದು ಸಾಮಾನ್ಯ ಆದರೆ, ಇದುವರೆಗೂ ಜೆಡಿಎಸ್ ಶಾಸಕರು ಸೌಜನ್ಯಕ್ಕೂ ಅನುದಾನವನ್ನು ಕೇಳಲು ಸಿಎಂ ಸಿದ್ದರಾಮಯ್ಯ ಅವರ ಬಳಿಗಾಗಲೀ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಗಾಗಲೀ ಹೋಗಿಲ್ಲ. ಒಂದು ವೇಳೆ ಭೇಟಿ ಮಾಡಿದರೆ ಪಕ್ಷ ಬಿಡುತ್ತಾರೆ ಎಂದೆಲ್ಲ ಸುದ್ದಿ ಹಬ್ಬಿಸಿ ಬಿಡುತ್ತಾರೆ. ಆ ಭಯಕ್ಕೇ ಇದುವರೆಗೂ ನಾವ್ಯಾರೂ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿಲ್ಲ ಎಂದು ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.
ನಾನೆಂದೂ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ನಾನು ದಳ ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದ 19 ಶಾಸಕರು, ಮಾಜಿ ಶಾಸಕರು ಶೀಘ್ರದಲ್ಲಿ ಒಂದು ಸಮಾರಂಭದ ಮೂಲಕ ಸೇರುತ್ತೇವೆ. ನಾವು ಯಾರೂ ಸಹ ಪಕ್ಷವನ್ನು ತೊರೆಯುವುದಿಲ್ಲ. ಕಾಂಗ್ರೆಸ್‌ನವರ ಆಪರೇಷನ್ ನಮ್ಮ ಮುಂದೆ ನಡೆಯುವುದಿಲ್ಲ. ಈಗ ಹಬ್ಬಿರುವ ಆಪರೇಷನ್ ಹಸ್ತ ಅವರ ಗಿಮಿಕ್ ಅಷ್ಟೇ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ 20 ಲೋಕಸಭಾ ಸ್ಥಾನ ಗೆಲ್ಲಲು ಟಾರ್ಗೆಟ್ ನೀಡಿದೆ. ಹಾಗಾಗಿ ಈಗ ಆಪರೇಷನ್ ಹಸ್ತದ ನಾಟಕ ಎಂದು ಸಮೃದ್ಧಿ ಮಂಜುನಾಥ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ ಇಂದು ಚಿಟಪಟ ಮಳೆಗೆ ಗುಡುಗು, ಮಿಂಚು ಸಾಥ್
ಸರ್ಕಾರ ಇರೋದೇ ಡೌಟು
ಕಾಂಗ್ರೆಸ್‌ನಲ್ಲಿಯೇ ರಿವರ್ಸ್ ಆಪರೇಷನ್ ನಡೆಯುತ್ತಿದೆ. ಈ ಸರ್ಕಾರ ಇರುವುದೇ ಅನುಮಾನವಾಗಿದೆ. ರಾಜಕಾರಣವು ಐಪಿಎಲ್ ಮ್ಯಾಚ್ ಇದ್ದ ಹಾಗೆ. ಯಾರು ಯಾವ ಟೀಂ ಟೀಶರ್ಟ್ ಹಾಕಿಕೊಂಡು ಫೀಲ್ಡಿಗೆ ಬರುತ್ತಾರೆ ಎಂಬುದು ಲೋಕಸಭಾ ಚುನಾವಣೆ ಆದ ಮೇಲೆ ಸ್ಪಷ್ಟವಾಗಲಿದೆ. ಕಾಂಗ್ರೆಸ್ ಪಕ್ಷ ಈಗ ವರ್ಗಾವಣೆ ದಂಧೆ ಹಿಂದೆ ಬಿದ್ದಿದೆ. ಸದ್ಯದಲ್ಲೇ ಎಲ್ಲವೂ ಬಹಿರಂಗ ಆಗಲಿದೆ ಎಂದು ಸಮೃದ್ಧಿ ಮಂಜುನಾಥ್ ಹೊಸ ಆಪರೇಷನ್ ಬಾಂಬ್ ಹಾಕಿದ್ದಾರೆ.