ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ (JDS Pancharatna yatre) ಸಮಾರೋಪ ಸಮಾರಂಭ ಭಾನುವಾರ ಸಂಜೆ (ಮಾರ್ಚ್ 26) ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ರಾಜವೈಭವದಿಂದ ನಡೆಯಿತು. ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಕ್ಷಾಂತರ ಜನರು ನೆರೆದು ಪಕ್ಷಕ್ಕೆ, ನಾಯಕರಿಗೆ ಜಯಘೋಷ ಮಾಡಿದರು.
ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ರಾಜ್ಯದ ಉದ್ದಗಲಕ್ಕೂ ನಡೆದು ಎಲ್ಲ ಕಡೆ ಉತ್ತಮ ಬೆಂಬಲ ಸಿಕ್ಕಿದೆ. ಇದೀಗ ಸಮಾರೋಪ ಸಮಾರಂಭವೂ ಅಷ್ಟೇ ವೈಭವದಿಂದ ಜರುಗಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲರ ಮನಸೂರೆಗೊಂಡರು. ಗೌಡರ ಇಡೀ ಕುಟುಂಬ ಈ ವೇದಿಕೆಯಲ್ಲಿ ಒಂದಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹಳೆ ಮೈಸೂರು ಭಾಗದ ಬಹುತೇಕ ಎಲ್ಲ ತಾಲೂಕುಗಳಿಂದ ಭಾರಿ ಸಂಖ್ಯೆಯಲ್ಲಿ ಜೆಡಿಎಸ್ ಅಭಿಮಾನಿಗಳು ಆಗಮಿಸಿದ್ದರು.
ಈ ಹಿಂದೆ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ದೊಡ್ಡ ರೋಡ್ ಶೋ ನಡೆಸುವ ಪ್ಲ್ಯಾನ್ ಇತ್ತಾದರೂ ದೇವೇಗೌಡರ ವೈದ್ಯರ ಸಲಹೆ ಮೇರೆಗೆ ಅದನ್ನು ರದ್ದುಪಡಿಸಲಾಯಿತು.
ದೇವೇಗೌಡರನ್ನು ಟ್ರಾಲಿಯಲ್ಲಿ ಕುಳ್ಳಿರಿಸಿ ವೇದಿಕೆಯ ಮುಂಭಾಗದಲ್ಲಿ ಉದ್ದಕ್ಕೂ ಕರೆದೊಯ್ಯಲಾಯಿತು. ಆ ಮೂಲಕ ಎಲ್ಲರಿಗೂ ದೇವೇಗೌಡರ ದರ್ಶನವಾದರೆ ದೇವೇಗೌಡರು ಕೂಡಾ ಎಲ್ಲರಿಗೆ ಕೈಬೀಸಿ, ಕೈಮುಗಿದು ಸಂಭ್ರಮಿಸಿದರು.
ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶ ಆಗಿರುವ ಈ ಜೆಡಿಎಸ್ ಹಬ್ಬದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸಂಘಟಕರು ಹೇಳಿದ್ದರು. ದೊಡ್ಡಮಟ್ಟದಲ್ಲಿ ಜನರ ಸೇರಿದ್ದು ನಿಜವಾಗಿತ್ತು. ಅದರ ಜತೆಗೆ ಬಂದವರೆಲ್ಲರರಿಗೂ ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ವೇದಿಕೆ ಮೇಲೆ ಮುಖಂಡರ ದಂಡು
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅನ್ನಧಾನಿ, ರವೀಂದ್ರ ಶ್ರೀಕಂಠಯ್ಯ, ಸಿ.ಎನ್.ಮಂಜೇಗೌಡ, ಕೆ.ಮಹದೇವು, ಅಶ್ವಿನ್ ಕುಮಾರ್, ಶ್ರೀನಿವಾಸ್ ಸೇರಿದಂತೆ ನೂರಾರು ಮುಖಂಡರು ಭಾಗಿಯಾಗಿದ್ದಾರೆ.
ಜೆಡಿಎಸ್ ಶಕ್ತಿ ಪ್ರದರ್ಶನ ಯಶಸ್ವಿ
ಬೃಹತ್ ಸಮಾವೇಶಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದಾರೆ. ಬಹುತೇಕ ಕುರ್ಚಿಗಳು ಭರ್ತಿಯಾಗಿದ್ದು, ರಿಂಗ್ ರಸ್ತೆಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಇತ್ತು. ನೂರಾರು ಬಸ್‌ಗಳು ಏಕಕಾಲಕ್ಕೆ ಜನ ಸೇರಿದ ಪರಿಣಾಮ ರಿಂಗ್ ರಸ್ತೆಯ 8 ಪಥದ ರಸ್ತೆಯಲ್ಲೂ ವಾಹನ ದಟ್ಟಣೆ ಉಂಟಾಗಿತ್ತು.
110 ದಿನಗಳ ಯಾತ್ರೆ 88 ಕ್ಷೇತ್ರ ಸುತ್ತಾಟ
ಕರ್ನಾಟಕದ ಪೂರ್ವದ ಬಾಗಿಲು ಮುಳಬಾಗಿಲಿನಿಂದ ಆರಂಭಗೊಂಡ ಈ ಯಾತ್ರೆ 110 ದಿನಗಳ ಕಾಲ ಸಂಚರಿಸಿದ್ದು, 88 ಕ್ಷೇತ್ರ ಸುತ್ತಿದೆ. ಕುಮಾರಸ್ವಾಮಿ ಅವರು 5500 ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
55 ಲಕ್ಷ ಜನರನ್ನು ಭೇಟಿ ಮಾಡಿದ್ದಾರೆ. 3 ಕೋಟಿ ಜನ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ ಎಂದು ಜಿ.ಡಿ. ದೇವೇಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ Pancharatna: ನಮ್ಮ ದುಡಿಮೆಯನ್ನು ನಂಬಿ ಸೇವೆಗೆ ಅವಕಾಶ ನೀಡಿ: ಪಂಚರತ್ನ ಸಮಾರೋಪದಲ್ಲಿ ದೇವೇಗೌಡರ ಭಾವನಾತ್ಮಕ ನುಡಿ