Site icon Vistara News

JDS Pancharatna | ನನ್ನ ಹೋರಾಟಕ್ಕೆ ಕನ್ನಡ ನಾಡಿನ ಕೋಟ್ಯಂತರ ಜನರ ಬೆಂಬಲವಿದೆ: ಎಚ್‌.ಡಿ. ಕುಮಾರಸ್ವಾಮಿ

JDS Pancharatna

ತುಮಕೂರು: ತುರುವೇಕರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ನನ್ನ ಬಗ್ಗೆ ಮಾತನಾಡುತ್ತಾ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ ಎಂದಿದ್ದಾರೆ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿರಬಹುದು. ಆದರೆ, ನನ್ನ ಹೋರಾಟಕ್ಕೆ ಕನ್ನಡ ನಾಡಿನ ಕೋಟ್ಯಂತರ ಜನರ ಬೆಂಬಲವಿದೆ. ಇದು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿರುವ ಯಾತ್ರೆಯಲ್ಲ (JDS Pancharatna) ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತುರುವೇಕೆರೆ ಪಟ್ಟಣದಲ್ಲಿ ನಡೆದ ಪಂಚರತ್ನ ಯಾತ್ರೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ರೈತರು ಬಹಳ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ 50 ಎಕರೆ ಜಮೀನು ಇದ್ದರೂ ಅವರು ಶ್ರೀಮಂತರಲ್ಲ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಕೊಬ್ಬರಿ ಬೆಲೆಯೂ ಕುಸಿದಿದೆ. ಯಾವುದೋ ಒಂದು ವರ್ಷ ಬಂಪರ್ ಫಸಲು ಬರುತ್ತದೆ. ಮತ್ತೆ ನಷ್ಟವಾಗುತ್ತದೆ ಎಂದ ಅವರು, ಕೋವಿಡ್ ಬಂದ ನಂತರ ಹಲವು ಕಡೆ ಬಸ್ ಸೌಕರ್ಯ ನಿಂತಿದೆ. ನನ್ನ ಅವಧಿಯಲ್ಲಿ ಪ್ರೌಢಶಾಲೆಗಳಲ್ಲಿ ಸೈಕಲ್ ವಿತರಣೆ ಆರಂಭಿಸಿದೆ. ಆದರೆ, ಈಗ ನಿಲ್ಲಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆಯೂ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮಸಾಲೆ ಮಾರೋರಿಗೆ ರೈತರ ಮಕ್ಕಳ ಕಷ್ಟ ಅರ್ಥವಾಗಲ್ಲ
ಕೊಬ್ಬರಿ ಬೆಲೆ ಕುಸಿತದ ಸಮಸ್ಯೆ ಹೇಳಿಕೊಂಡ ರೈತನಿಗೆ ಎಚ್‌ಡಿಕೆ ಪ್ರತಿಕ್ರಿಯಿಸಿ, ನಿಮ್ಮ ಬಿಜೆಪಿ ಶಾಸಕ ಮಸಾಲೆ ಮಾರಿಕೊಂಡು ಆರಾಮಾವಾಗಿದ್ದಾರೆ. ಅವರಿಗೆ ನಮ್ಮ ರೈತರ ಮಕ್ಕಳ ಕಷ್ಟ ಅರ್ಥವಾಗಲ್ಲ. ಆದರೆ, ಮಾಜಿ ಶಾಸಕ ಕೃಷ್ಣಪ್ಪಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ. ಅವರು 2006ರಲ್ಲಿಯೇ ಏತ ನೀರಾವರಿಗಾಗಿ ಪಾದಯಾತ್ರೆ ಮಾಡಿದ್ದರು. ಅಂತಹವರನ್ನು ಬಿಟ್ಟು ಮಸಾಲೆ ಮಾರುವವರಿಗೆ ಮತ ಹಾಕಿದರೆ ಅವರಿಗೆ ನಿಮ್ಮ ಕಷ್ಟ ಅರ್ಥವಾಗಲ್ಲ ಎಂದು ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಂ ವಿರುದ್ಧ ಕಿಡಿಕಾರಿದರು.

ತುರುವೇಕೆರೆಯಲ್ಲಿ ಅದ್ಧೂರಿ ಸ್ವಾಗತ
ತುರುವೇಕೆರೆ ತಾಲೂಕಿನ ಟಿ.ಬಿ.ಕ್ರಾಸ್ ಬಳಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಗಾತ್ರದ ಸೇಬಿನ ಹಾರ, ಹೊಂಬಾಳೆ ಹಾರ ಹಾಕುವ ಮೂಲಕ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಟಿ.ಬಿ. ಕ್ರಾಸ್‌ನಿಂದ ತುರುವೇಕೆರೆ ಪಟ್ಟಣಕ್ಕೆ ತೆರಳಿದಾಗ ಬೃಹತ್ ಗಾತ್ರದ ರಾಗಿ ತೆನೆ, ಎಳನೀರಿನ ಹಾರ, ಕುಂಬಳಕಾಯಿ ಹಾರ ಹಾಕಿ ಸ್ವಾಗತಿಸಿದರು. ಅದೇ ರೀತಿ ತುರುವೇಕೆರೆ ಸಂಗಾಲಪುರ ಬಳಿ 101 ತೆಂಗಿನಕಾಯಿ ಒಡೆದು ಅಭಿಮಾನಿಗಳು ಸ್ವಾಗತ ಕೋರಿದರು.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ರೈತರಿಗೆ ಮಾರಕ
ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರೈತರಿಗೆ ಮಾರಕವಾಗಿವೆ. ಹೀಗಾಗಿ ಜನರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಒತ್ತು ನೀಡಬೇಕು. ಜನರ ನೋವಿಗೆ ಸ್ಪಂದಿಸುವ ಪಕ್ಷವೆಂದರೆ ಅದು ಜೆಡಿಎಸ್ (JDS Pancharatna) ಮಾತ್ರ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಮರಳಿಗ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಮೇಲೆ ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಇಂದಿಗೂ ಕಡಿಮೆಯಾಗಿಲ್ಲ. ಬದಲಿಗೆ ಮೊದಲಿಗಿಂತಲೂ ದುಪ್ಪಟ್ಟಾಗಿದೆ. ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | ರಾಜ್ಯದ 35 ಸಾವಿರ ಮುಜರಾಯಿ ದೇವಸ್ಥಾನಗಳ ಸಮಗ್ರ ಸಮೀಕ್ಷೆ: ಧಾರ್ಮಿಕ ಪರಿಷತ್ತಿನ ಮಹತ್ವದ ನಿರ್ಧಾರ

Exit mobile version