Site icon Vistara News

JDS Pancharatna | ಪಂಚರತ್ನ ಯೋಜನೆಯಿಂದ ಪರ್ಸೆಂಟೇಜ್ ನಿಲ್ಲಿಸುವ ಕೆಲಸ: ಎಚ್.ಡಿ. ಕುಮಾರಸ್ವಾಮಿ

JDS Pancharatna

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ (JDS Pancharatna) ಜಾರಿ ಮಾಡುತ್ತೇವೆ. ಈ ಯೋಜನೆಗಳಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಪರ್ಸೆಂಟೇಜ್ ಇರುವುದಿಲ್ಲ. ರೈತಪರ ಕಾರ್ಯಕ್ರಮಗಳ ಮೂಲಕ ಇಲಾಖೆಗಳಲ್ಲಿ ಪರ್ಸೆಂಟೇಜ್ ನಿಲ್ಲಿಸುವ ಕೆಲಸವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಡದಿಯ ತೋಟದ ಮನೆಯಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಲ್ಲವೂ ಪಾರದರ್ಶಕವಾಗಿ ಇರಬೇಕೆಂದು ಪಂಚರತ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಹಣ ಯಾವುದೇ ರೀತಿ ದುರ್ಬಳಕೆ ಆಗಬಾರದು ಎಂಬುವುದು ನಮ್ಮ ಉದ್ದೇಶವಾಗಿದೆ ಎಂದರು.

ಪಂಚರತ್ನ ಯೋಜನೆಗಳ ಜಾರಿಗಾಗಿ ಪಂಚಾಯಿತಿಯಲ್ಲೇ ಮೇಲ್ವಿಚಾರಣೆ ಸಮಿತಿ ರಚನೆ ಮಾಡಲಾಗುವುದು. ಹಣದ ದುರ್ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ರಾಜ್ಯದ ಜನತೆಯ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ನವರು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ, ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ನಾನು ಅದರ ಬಗ್ಗೆ ಮಾತನಾಡಲ್ಲ, ದುಡಿಯುವವರ ಕೈ ಬಲಪಡಿಸುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.

ಚುನಾವಣೆ ಬಂದರೆ ಸೀರೆ, ಕುಕ್ಕರ್ ಹಂಚುತ್ತಾರೆ. ಆದರೆ, ನಾಡಿನ ಜನರು ಯಾರಿಂದ ಏನೂ ಬೇಡಬಾರದು. ಆ ನಿಟ್ಟಿನಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮ ಮುಂದಿನ 5 ವರ್ಷ ಪ್ರಗತಿಯಲ್ಲಿರುತ್ತವೆ. ರೈತರ ಆತ್ಮಹತ್ಯೆಗಳನ್ನು ನೋಡಿ ಸಾಲ ಮನ್ನಾ ಕಾರ್ಯಕ್ರಮ ಮಾಡಿದೆ. ನಾನು ಕೈಗೊಂಡಿರುವ ಕಾರ್ಯಕ್ರಮಗಳಿಗೆ ಸುಮಾರು 2.5 ಲಕ್ಷ ಕೋಟಿ ರೂಪಾಯಿ ಹಣ ಬೇಕು. ನಮ್ಮ ರಾಜ್ಯ ಸಂಪತ್ಭರಿತವಾಗಿದ್ದು, ಅಗತ್ಯ ಹಣವನ್ನು ಕ್ರೋಡೀಕರಿಸುವ ಕೆಲಸವನ್ನು ಮಾಡುತ್ತೇನೆ ಎಂದರು.

ಇದನ್ನೂ ಓದಿ | Vijaya Sankalpa Abhiyana | ಜ.21ರಿಂದ ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನ ಆರಂಭ: ಅಶ್ವತ್ಥನಾರಾಯಣ

ರೈತರ ಸಾಲಮನ್ನಾ ಮಾಡಿದ ಹಾಗೆ ನಮ್ಮ ಸಾಲ ಕೂಡ ಮನ್ನಾ ಮಾಡಿ ಎಂದು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮನವಿ ಮಾಡಿವೆ. ಅದರ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಎಚ್‌ಡಿಕೆ ಆರೋಪದ ಕುರಿತು ಪಿಂಪ್‌ಗಳಿಂದ ಹಣ ಪಡೆಯುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಲಂಚ, ವರ್ಗಾವಣೆಯಂತಹ ಕೆಲಸಗಳನ್ನು ಸ್ಯಾಂಟ್ರೋ ರವಿ ಮಾಡಿದ್ದಾನೆ. 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ಬಳಿ ದುಡ್ಡು ಕಿತ್ತಿದ್ದಾನೆ. ಸ್ಯಾಂಟ್ರೋ ರವಿ ಏನೆಲ್ಲ ಮಾಡಿದ್ದಾನೆ ಎಂಬುವುದು ಅವರಿಗೆ ಗೊತ್ತಿಲ್ಲವೇ? ಅವರಿಗೆ ಗೊತ್ತಿಲ್ಲದೇ ಅವರ ಆಫೀಸ್‌ನಲ್ಲಿ ಓಡಾಡಿದ್ದಾನಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | ನಾ ನಾಯಕಿ | ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ನಿಂದ ಬಂಪರ್‌ ಘೋಷಣೆ; ಪ್ರತಿ ತಿಂಗಳು ₹2,000 ರೂ.

Exit mobile version