Site icon Vistara News

JDS Pancharatna: ಕ್ಯಾನ್ಸರ್‌ ಪೀಡಿತ ಪತಿಗೆ ನೆರವಾಗುವಂತೆ ಅಂಗಲಾಚಿದ ಮಹಿಳೆ; ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ಎಚ್‌ಡಿಕೆ

JDS Pancharatna

#image_title

ಬಳ್ಳಾರಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಪತಿಯನ್ನು ಬದುಕಿಸಿಕೊಡುವಂತೆ ಮಹಿಳೆಯೊಬ್ಬರು ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಅಂಗಲಾಚಿ, ಕಣ್ಣೀರಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರದ ಹೊಸ ದರೋಜಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜೆಡಿಎಸ್‌ ಪಂಚರತ್ನ ಯಾತ್ರೆ (JDS Pancharatna) ವೇಳೆ ನಡೆಯಿತು. ಈ ವೇಳೆ ಮಹಿಳೆಯ ಕಷ್ಟ ಕಂಡು ವಿಚಲಿತರಾದ ಮಾಜಿ ಸಿಎಂ, ಬೆಂಗಳೂರಿಗೆ ನಿಮ್ಮ ಪತಿಯನ್ನು ಕರೆದುಕೊಂಡು ಬನ್ನಿ, ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಹನುಮಂತಮ್ಮ ಎಂಬುವವರು ಗಂಡ ಕ್ಯಾನ್ಸರ್‌ ಪೀಡಿತರಾಗಿದ್ದು, ನೆರವಾಗುವಂತೆ ಕಣ್ಣೀರಿಡುತ್ತ ಮನವಿ ಮಾಡಿದರು. ಈ ವೇಳೆ ಚಿಕಿತ್ಸೆ ಕೊಡಿಸುವ ಭರವಸೆ ನೀಡುವ ಜತೆಗೆ ಮಹಿಳೆಗೆ ಪತಿಯೊಂದಿಗೆ ಬೆಂಗಳೂರಿಗೆ ಬರಲು ಖರ್ಚಿಗಾಗಿ ಹಣದ ನೆರವು ನೀಡಿ, ಬೆಂಗಳೂರಿಗೆ ತೆರಳಲು ವ್ಯವಸ್ಥೆ ಮಾಡಲು ಸಂಡೂರು ಕ್ಷೇತ್ರದ ಅಭ್ಯರ್ಥಿ ಸೋಮಪ್ಪ ಅವರಿಗೆ ಸೂಚಿಸಿದರು.

ಭೂಮಿ ಕಳೆದುಕೊಂಡ ರೈತರಿಗೆ ನೆರವಿನ ಅಭಯ

ಬಳಿಕ ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡು ನ್ಯಾಯಕ್ಕಾಗಿ ಸಂಡೂರು ಕ್ಷೇತ್ರದ ಕುಡುತಿನಿ‌ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾದರು. ಈ ವೇಳೇ ಮಾತನಾಡಿದ ಅವರು, ಕೈಗಾರಿಕೆ ಮಾಡುತ್ತೇವೆ ಎಂದು ನಂಬಿಸಿ ಕೆಲ ಪಟ್ಟಭದ್ರರು ಭೂಮಿ ಸ್ವಾಧೀನ ಮಾಡಿ ರೈತರಿಗೆ ಮೋಸ ಮಾಡಿದ್ದಾರೆ. ಭೂಸ್ವಾಧೀನ ಆಗಿ 11 ವರ್ಷಗಳೇ ಕಳೆದರೂ ಇನ್ನೂ ಕೈಗಾರಿಕೆ ಸ್ಥಾಪನೆ ಆಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದ ಕೂಡಲೇ ಈ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೂಲಸೌಕರ್ಯ ಇಲ್ಲದೆ ಕೆಟ್ಟ ಸ್ಥಿತಿಯಲ್ಲಿ ಜನರಿದ್ದಾರೆ

ಕೃಷ್ಣ ದೇವರಾಯ ಆಳ್ವಿಕೆ ನಡೆಸಿದ ಜಿಲ್ಲೆಯ ಹಳ್ಳಿಗಳಲ್ಲಿ ಮೂಲಸೌಕರ್ಯ ಇಲ್ಲದೆ ಜನರು ಅತ್ಯಂತ ‌ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಕೆಲವರು ಮಣ್ಣು ‌ಮಾರಾಟ ಮಾಡಿ ಆಳ್ವಿಕೆ ‌ನಡೆಸಿದ್ದಾರೆ. ಜನರ ಈ ರೀತಿಯ ಬದುಕಿಗೆ ಕಾರಣವಾದವರ ಬಗ್ಗೆ ಮಾತನಾಡಲು ಇಲ್ಲಿ‌ನ ಸಚಿವರಿಗೆ ಧೈರ್ಯ ಇಲ್ಲ. ಈ ಬಗ್ಗೆ ಚುನಾವಣಾ ‌ಮತ ಪಡೆಯಲು ಬರುವ ರಾಷ್ಟ್ರೀಯ ‌ಪಕ್ಷಗಳ‌ ಶಾಸಕರನ್ನು ಜನತೆ ಪ್ರಶ್ನಿಸಬೇಕು ಎಂದು ಹೇಳಿದರು.

ಬಳ್ಳಾರಿಯ ಶಾಸಕರ ಮನೆಗಳ ಕಾಂಪೌಂಡ್ ಒಳಗಡೆ ಹೋಗಲು ಬಡವರಿಗೆ ಸಾಧ್ಯವಿಲ್ಲ. ವಿಜಯನಗರ ಆನಂದ್‌ ಸಿಂಗ್ ಮನೆ‌ ನೋಡಿದರೆ ಭಯ ಆಗುತ್ತದೆ. ಬಳ್ಳಾರಿಯ ನಿಮ್ಮ ಪ್ರೀತಿಯ ಅಣ್ಣ ಶ್ರೀರಾಮುಲು ಬಡವರಿಗೆ ಏನು ‌ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಸಾಲಮನ್ನಾಗೆ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಎರಡು ಲಕ್ಷ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನಾ ಸೌಕರ್ಯಗಳನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.

ರಸ್ತೆಬದಿಯ ಪುಟ್ಟ ಹೋಟೆಲ್‌ನಲ್ಲಿ ಮಂಡಕ್ಕಿ, ಚಹಾ ಸೇವಿಸಿದ ಕುಮಾರಸ್ವಾಮಿ

ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರದ ರಸ್ತೆಬದಿಯ ಪುಟ್ಟ ಹೋಟೆಲಿನಲ್ಲಿ ಕುಮಾರಸ್ವಾಮಿ ಅವರು ಮಂಡಕ್ಕಿ ಹಾಗೂ ಚಹಾ ಸೇವಿಸಿದರು. ಬಳಿಕ ಹೊಟೇಲ್ ಮಾಲೀಕ ನಾಗಪ್ಪ ಕುಟುಂಬದ ಕುಶಲೋಪರಿ ವಿಚಾರಿಸಿದರು.

Exit mobile version