Site icon Vistara News

JDS Pancharatna : ಪಂಚರತ್ನ ಯಾತ್ರೆ ಸಮಾರೋಪದಲ್ಲಿ ದೇವೇಗೌಡರ ರೋಡ್‌ ಶೋ ರದ್ದು, ನೇರ ವೇದಿಕೆಗೆ

Devegowda Kumaraswamy

#image_title

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಯೋಜನೆಯಾಗಿರುವ ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ (JDS Pancharatna) ಸಮಾರೋಪ ಸಮಾರಭಕ್ಕೆ ಪೂರ್ವದಲ್ಲಿ ನಡೆಯಬೇಕಾಗಿದ್ದ ರೋಡ್‌ ಶೋವನ್ನು ರದ್ದು ಮಾಡಲಾಗಿದೆ

ಮೈಸೂರಿನ ಶ್ರೀರಾಂಪುರದಿಂದ ಉತ್ತನಹಳ್ಳಿವರೆಗೆ ರೋಡ್ ಶೋ ನಿಗದಿಯಾಗಿತ್ತು‌. ರಿಂಗ್ ರಸ್ತೆಯಲ್ಲಿ ಸುಮಾರು 3 ಕಿ.ಮೀ. ತೆರೆದ ವಾಹನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಾಗುವರೆಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಹಿಂದಿನ ವೇಳಾಪಟ್ಟಿ ಪ್ರಕಾರ ಮೂರು ಗಂಟೆಗೆ ರೋಡ್‌ ಶೋ ನಡೆದು ಬಳಿಕ ನಾಲ್ಕು ಗಂಟೆಗೆ ಸಭಾ ಕಾರ್ಯಕ್ರಮ ನಿಗದಿಯಾಗಿದೆ. ಈಗ ನೇರ ಸಭಾ ಕಾರ್ಯಕ್ರಮವೇ ನಡೆಯಲಿದೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಈ ರೀತಿ ತೆರೆದ ವಾಹನದಲ್ಲಿ ಸಂಚರಿಸುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ರೋಡ್‌ ಶೋ ಕ್ಯಾನ್ಸಲ್‌ ಮಾಡಲಾಗಿದೆ. ಹೀಗಾಗಿ ಅವರು ನೇರವಾಗಿ ವೇದಿಕೆಗೆ ಆಗಮಿಸಲಿದ್ದಾರೆ. ನೇರವಾಗಿ ವೇದಿಕೆಗೆ ಬಂದು ಕುರ್ಚಿಯಲ್ಲಿ ಕುಳಿತು ಸಾರ್ವಜನಿಕರ ಜತೆ ಸಂವಾದ ನಡೆಸುವರು. ಈ ವಿಷಯವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ದೇವರ ದರ್ಶನ ಮಾಡಿದ ಎಚ್‌.ಡಿ. ಕುಮಾರಸ್ವಾಮಿ

ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿರುವ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಮುನ್ನ ದೇವರ ದರ್ಶನ ಮಾಡಿದರು. ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿ ದರ್ಶನ ಪಡೆದ ಎಚ್ಡಿಕೆ ಬಳಿಕ ಉತ್ತನಹಳ್ಳಿ ಮಾರಮ್ಮ ದೇವಾಲಯ ಹಾಗೂ ಶ್ರೀ ತ್ರಿಪುರ ಸುಂದರಿ ಜ್ವಾಲಾಮುಖಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಪ್ರಮುಖರು ಸಾಥ್‌ ನೀಡಿದರು.

ಭಾರಿ ಜನಸಾಗರ ನಿರೀಕ್ಷೆ

ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಉದ್ದಗಲಕ್ಕೂ ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ನಡೆದಿತ್ತು. ಇದೀಗ ಹಳೆ ಮೈಸೂರು ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ.

ಹಾಸನ ನಗರದಲ್ಲಿ ಟಿಕೆಟ್‌ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಮತ್ತು ಸ್ವರೂಪ್‌ ಅವರ ಕಡೆಯಿಂದ ಜನರನ್ನು ಕರೆದುಕೊಂಡು ಹೋಗುವ ಪೈಪೋಟಿಯೂ ಜೋರಾಗಿದೆ. ಅದೇ ರೀತಿ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಿದ್ದಾರೆ.

ದೇವೇಗೌಡರಿಗೆ ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಕಿರೀಟ

ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸಮರ್ಪಿಸಲು ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿಯನ್ನು ತಯಾರಿಸಲಾಗಿದೆ. ಅಖಂಡ ಭಾರತವನ್ನು ಆಳ್ವಿಕೆ ಮಾಡಿದ ಕರ್ನಾಟಕದ ಮಣ್ಣಿನ ಮಕ್ಕಳೆಂದರೆ ಅದು ಇಮ್ಮಡಿ ಪುಲಕೇಶಿ ಹಾಗೂ ಎಚ್‌.ಡಿ. ದೇವೇಗೌಡರವರು. ಇವರಿಬ್ಬರಿಗೂ ಸಾಮ್ಯತೆ ಇರುವುದರಿಂದ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ವ್‌ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಅವರ ಪರಿಕಲ್ಪನೆಯೊಂದಿಗೆ ಕಲಾವಿದ ನಂದನ್‌ ಅವರ ಕಸೂತಿಯಲ್ಲಿ ಈ ಕಿರೀಟ ಸಿದ್ಧಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ರೈತರ ಮೂಲ ನೇಗಿಲ ಪ್ರತಿಮೆಯನ್ನು ರೈತ ನಾಯಕ ಎನಿಸಿರುವ ದೇವೇಗೌಡರಿಗೆ ಸಮರ್ಪಿಸಲಾಗುತ್ತಿದೆ.

ಇದನ್ನೂ ಓದಿ : Reservation : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೊಸ ಮೀಸಲಾತಿ ನೀತಿ ರದ್ದು, ಮುಸ್ಲಿಮರಿಗೆ ನ್ಯಾಯ; ಡಿಕೆಶಿ ಘೋಷಣೆ


Exit mobile version