ವಿಧಾನ ಪರಿಷತ್: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸುತ್ತಿರುವ ಪಂಚರತ್ನ ಯಾತ್ರೆಯು ಹೊಸ ದಾಖಲೆ ಬರೆದಿದೆ. ಎಲ್ಲ ಕಡೆಯಲ್ಲಿಯೂ ಕುಮಾರಸ್ವಾಮಿಯವರಿಗೆ ಕಾರ್ಯಕರ್ತರು ಅರ್ಪಿಸುತ್ತಿರುವ ಬೃಹತ್ ಹಾರಗಳು ಇದೇಇಗ ಎಲ್ಲರ ಗಮನ ಸೆಳೆಯುತ್ತಿವೆ.
ಹಣ್ಣು, ತರಕಾರಿಗಳಿಂದ ಕೊಬ್ಬರಿ, ಹೂವಿನವರೆಗೆ ಅನೇಕ ವಿಧದ ಬೃಹತ್ ಹಾರಗಳನ್ನು ಕ್ರೇನ್‌ನಲ್ಲಿ ಸಲ್ಲಿಸುವುದು ವಾಡಿಕೆಯಾಗಿದೆ. ಈ ಹಾರಗಳು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೂ ಸೇರ್ಪಡೆಯಾಗಿವೆ. ಆದರೆ ಬೃಹತ್ ಹಾರಕ್ಕೆ ಜೆಡಿಎಸ್ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಹೆಸರೇಳದೆ ಟೀಕಿಸಿದರು.
ಮನರಂಜನೆ, ಪ್ರತಿಷ್ಠೆಗಾಗಿ ಜೆಸಿಬಿ, ಕ್ರೇನ್ ಮೂಲಕ ದೊಡ್ಡ ದೊಡ್ಡ ಹಾರ ಹಾಕುತ್ತಿದ್ದಾರೆ. ಕ್ಯಾಪ್ಸಿಕಂ, ಟೊಮೆಟೋ, ಕಾರ್ನ್, ರೇಷ್ಮೆಗೂಡುಗಳ ಹಾರಗಳನ್ನು ಹಾಕಲಾಗುತ್ತಿದೆ. ಸರ್ಕಾರ ಕೂಡಲೇ ಜೆಸಿಬಿ, ಕ್ರೇನ್ ನಿಂದ ಹಾರ ಹಾಕಿಸೋದನ್ನ ರದ್ದು ಮಾಡಬೇಕು. ಮೋಟಾರು ಕಾಯ್ದೆ ಸೆಕ್ಷನ್ ೨೦೦ ಅಡಿ ಜೆಸಿಬಿಗಳನ್ನು ಸಾರ್ವಜನಿಕ ಜನ ದಟ್ಟಣೆ ಇರುವ ಕಡೆ ನಿರ್ಬಂಧಿಸಬೇಕು ಎಂದರು. ಗೃಹ ಸಚಿವರಿಂದ ಉತ್ತರ ಒದಗಿಸಲಾಗುವುದು ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದರು.
ಜೆಡಿಎಸ್‌ನಿಂದ ಆಯ್ಕೆಯಾಗಿದ್ದರೂ ಪಕ್ಷದ ವರಿಷ್ಠರ ಜತೆಗೆ ಮುನಿಸಿಕೊಂಡಿರುವ ಮರಿತಿಬ್ಬೇಗೌಡ ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ ತೊರೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಸೇರ್ಪಡೆ ಆಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಇದನ್ನೂ ಓದಿ: JDS Pancharatna | ಸಕ್ಕರೆ ನಾಡಿನಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ವಿಭಿನ್ನ ಬೃಹತ್ ಹಾರಗಳಿಂದ ಅದ್ಧೂರಿ ಸ್ವಾಗತ