ಬೆಂಗಳೂರು: ಎಲ್ಲ ಪಕ್ಷಗಳಿಗೂ ಮುನ್ನವೇ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್ ಪಕ್ಷಕ್ಕೆ ಎರಡನೇ ಪಟ್ಟಿ ಬಿಡುಗಡೆಗೆ ಅತ್ಯಂತ ದೊಡ್ಡ ಅಡ್ಡಿಯಾಗಿರುವ ಹಾಸನ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ ಸಭೆ ನಡೆಸಿದರೂ ಟಿಕೆಟ್ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಅನೇಕ ತಿಂಗಳು ಮೊದಲೇ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ ಹಾಸನದಲ್ಲಿ ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್ ಹಾಗೂ ಎಚ್.ಡಿ. ರೇವಣ್ಣ ಪತ್ನಿ ಭವಾನಿ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇದೊಂದೇ ಕಾರಣಕ್ಕೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗದೆ, ಕುಟುಂಬದೊಳಗೂ ವೈಮನಸ್ಯ ತಲೆದೋರಿದೆ.
ಇದೆಲ್ಲಕ್ಕೂ ಅಂತ್ಯ ಹಾಡಬೇಕು ಎಂದು ಪದ್ಮನಾಭನಗರದ ನಿವಾಸದಲ್ಲಿ ಸೋಮವಾರ ಸಭೆಯನ್ನು ಎಚ್.ಡಿ. ದೇವೇಗೌಡರು ನಡೆಸಿದರು. ಹಾಸನದ ವಿವಿಧ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಆದರೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಮಂಗಳವಾರ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಇಬ್ಬರೂ ದೇವೇಗೌಡರನ್ನು ಭೇಟಿ ಮಾಡಿದ್ದಾರೆ.
ಭವಾನಿ ಪರ ರೇವಣ್ಣ ಒತ್ತಾಯ ಮಾಡಿದರೆ ಸ್ವರೂಪ್ ಪರ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ದೇವೇಗೌಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ ನಾನೇ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Karnataka Election 2023: ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರ ನಿರ್ಧಾರವೇ ಫೈನಲ್: ಎಚ್.ಡಿ.ರೇವಣ್ಣ