ಹಾಸನ: ಕರ್ನಾಟಕ ರಾಜಕಾರಣದಲ್ಲಿ ಜ್ಯೋತಿಷವನ್ನು ಅನೇಕ ರಾಜಕಾರಣಿಗಳು ನಂಬುತ್ತಾರೆ. ಆದರೆ ಅದಕ್ಕೆ ಯಾವುದೇ ಅಂಜಿಕೆ ಇಲ್ಲದೆ ಬಹಿರಂಗವಾಗಿ ಹೇಳುವವರು ಜೆಡಿಎಸ್ ನಾಯಕ (JDS Politics) ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ. ಕಾರ್ಯಕ್ರಮಗಳಿಗೆ ನಿಂಬೆ ಹಣ್ಣು ಹಿಡಿದು ಬರುವ ರೇವಣ್ಣ, ಯಾವುದೇ ಕೆಲಸ ಮಾಡುವ ಮುನ್ನ ಜ್ಯೋತಿಷಕ್ಕೆ ಅನುಗುಣವಾಗಿಯೇ ಆಲೋಚಿಸುತ್ತಾರೆ. ಇದೀಗ ರೇವಣ್ಣ ಅವರ ಇಬ್ಬರು ಪುತ್ರರೂ ಜ್ಯೋತಿಷ ಹೇಳುತ್ತಿದ್ದಾರೆ.
ಹಾಸನ ಜಿಲ್ಲೆಯ ನಗರ್ತಿ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಜತೆಗೆ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಅಲ್ಲಿ ಒಬ್ಬರು ಈಶ್ವರನ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಇವತ್ತು ಒಂದು ಕೆಂಪು ಗುಲಾಬಿ ಹೂವು ಈಶ್ವರನ ತಲೆ ಮೇಲಿಂದ ಬಿತ್ತು. ನಾನು ಅದನ್ನು ನೋಡಿದೆ. ಇದು ಕೇವಲ ನಗರ್ತಿ ಜನರ ಆಶೀರ್ವಾದ ಮಾತ್ರವಲ್ಲ, ಭೈರವನ ಆಶೀರ್ವಾದದಿಂದ ಕುಮಾರಣ್ಣ ಸಿಎಂ ಆಗುತ್ತಾರೆ ಎನ್ನುವುದರ ಸಂದೇಶ ಇದು ಎಂದರು.
ನಾವೆಲ್ಲರೂ ಒಂದು ಮನಸ್ಸಿನಲ್ಲಿ ಆಶೀರ್ವಾದ ಮಾಡಿದ್ದೇವೆ. ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕುಮಾರಣ್ಣ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಹಾಸನದ ಏಳಕ್ಕೆ ಏಳೂ ಕ್ಷೇತ್ರಗಳನ್ನು ಕುಮಾರಣ್ಣ ಅವರಿಗೆ ನೀಡಿ ಶಕ್ತಿ ತುಂಬೋಣ ಎಂದು ಹೇಳಿದರು.
ನಂತರ ಮಾತನಾಡಿದ ಎಚ್.ಡಿ. ರೇವಣ್ಣ, ಇವತ್ತು ನಮ್ಮ ಎಚ್.ಡಿ. ದೇವೇಗೌಡರನ್ನು ಈ ಮಟ್ಟಕ್ಕೆ ಕೊಂಡೊಯ್ಯಲು ಈಶ್ವರ ಕಾರಣ ಎಂದರು.
ಇದನ್ನೂ ಓದಿ: Brahmin CM: ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಎಚ್.ಡಿ ರೇವಣ್ಣ; ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನ?
ಆನಂತರ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿಯೇ ನಿಂತಿದ್ದ ಸೂರಜ್ ರೇವಣ್ಣ, ಕುಮಾರಸ್ವಾಮಿ ಕಿವಿಯಲ್ಲಿ ಏನನ್ನೋ ಹೇಳಿದರು. ಅನ್ನು ಕುಮಾರಸ್ವಾಮಿ ಭಾಷಣದಲ್ಲಿ ಉಲ್ಲೇಖಿಸಿದರು. ನಮ್ಮ ಸೂರಜ್ ರೇವಣ್ಣ ಸ್ವಲ್ಪ ಭವಿಷ್ಯ ಹೇಳುತ್ತಾರೆ. ಅರಕಲಗೂಡಿನಲ್ಲಿ ಯಾವಾಗೆಲ್ಲ ಜೆಡಿಎಸ್ ಗೆದ್ದಿದೆಯೋ ಆಗೆಲ್ಲ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮ ನಡೆಯುತ್ತಿರುವುದು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ. ನಾನು ಪ್ರತಿ ಕ್ಷೇತ್ರವನ್ನೂ ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು.