ಬೆಂಗಳೂರು: ರಾಜ್ಯದಲ್ಲಿ ಸ್ವತಂತ್ರವಾಗಿ ಜೆಡಿಎಸ್ ಸರ್ಕಾರವನ್ನು ಆಡಳಿತಕ್ಕೆ ತರುತ್ತೇನೆ ಎಂದು ಆಸ್ಪತ್ರೆಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮಾತು ಕೊಟ್ಟು ಬಂದಿದ್ದೇನೆ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಂಡ್ಯದ ಏಳಕ್ಕೆ ಏಳೂ ಕ್ಷೇತ್ರವನ್ನು ಜಯಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ ಎಂದಿದ್ದಾರೆ.
ನಾಗಮಂಗಲ ಚುನಾವಣೆಗೆ ಬೆಂಗಳೂರಿನಲ್ಲಿ ಅಖಾಡ ಸಜ್ಜುಗೊಳಿಸುವ ಸಲುವಾಗಿ, ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ಮತದಾರರ ಪ್ರತಿಜ್ಞಾ ಸಮಾವೇಶದಲ್ಲಿ ಮಾತನಾಡಿದರು.
ಪ್ರಾರಂಭದಲ್ಲಿ ಮಾತನಾಡಿದ ನಾಗಮಂಗಲ ಶಾಸಕ ಸುರೇಶ್ ಗೌಡ, ಕಳೆದ ಬಾರಿ ನಲವತ್ತೇಳು ಸಾವಿರ ಮತಗಳ ಅಂತರದಿಂದ ನನ್ನ ಗೆಲ್ಲಿಸಿದ್ರಿ. 1,700 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ರು. ನಂತರ ನಮ್ಮ ಮೈತ್ರಿ ಸರ್ಕಾರ ಹೋಯಿತು. ನಮ್ಮ ವಿಪಕ್ಷಗಳು ಅನುದಾನವನ್ನು ತಡೆಹಿಡಿಯುವ ಕೆಲಸ ಮಾಡಿದ್ರು. ಆದ್ರೂ ಸಹ ಕುಮಾರಸ್ವಾಮಿ ಅವರ ಆಶೀರ್ವಾದ ದಿಂದ ಕೆಲಸಗಳು ಆಗಿವೆ.
ಪ್ರತಿ ಗ್ರಾಮಕ್ಕೆ ಕೂಡಾ ಕಾಂಕ್ರೀಟ್ ರಸ್ತೆ ಗಳು ಆಗಿವೆ. ಬೆಂಗಳೂರಿನಿಂದ ಬಂದ ಒಬ್ಬ ಮತದಾರನಿಗೆ ಕನಿಷ್ಠ ಹತ್ತು ಮತಗಳನ್ನು ನಮ್ಮ ಪರವಾಗಿ ಪರಿವರ್ತನೆ ಮಾಡುವ ಶಕ್ತಿ ಇದೆ. ನೀವೆಲ್ಲಾ ನಮ್ಮ ಪರವಾಗಿ ಮತ ಹಾಕಿಸುವ ಕೆಲಸ ಮಾಡಬೇಕು. ಜೆಡಿಎಸ್ ಗೆ ಮತ ಹಾಕಿಸುವ ಮೂಲಕ ಕುಮಾರಸ್ವಾಮಿ ಸಿಎಂ ಆಗಲು ಸಹಕಾರ ಕೊಡಬೇಕು. ತಮ್ಮನ್ನು ಮಾರಿಕೊಂಡವರಿಗೆ ಬುದ್ದಿ ಕಲಿಸಬೇಕು. ಕಳೆದ ಬಾರಿಗಿಂತ ಒಂದು ಮತವೂ ಕಡಿಮೆ ಆಗಬಾರದು. ಕಳೆದ ಬಾರಿಗಿಂತ ಹೆಚ್ಚು ಮತಗಳು ಜೆಡಿಎಸ್ ಗೆ ಬರಬೇಕು ಎಂದರು.
ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಅನೇಕರು ಜೀವನೋಪಾಯಕ್ಕಾಗಿ ನಾಗಮಂಗಲದಿಂದ ಕೆಲಸಕ್ಕೆ ಇಲ್ಲಿಗೆ ಬಂದಿದ್ದೀರ. ದೇವೇಗೌಡರಿಗೆ ರಾಜಕೀಯ ಜೀವನ ಕೊಟ್ಟಿದ್ದು ನಾಗಮಂಗಲ. ಇವತ್ತಿನ ರಾಜಕಾರಣ ನೋಡ್ತಾ ಇದ್ದೀರ, ಮೈಸೂರು ರಸ್ತೆಯಲ್ಲಿ ಇನ್ನೊಂದು ಕಾರ್ಯಕ್ರಮ ಇದೆ. ಇಬ್ಬರೂ ಒಟ್ಟಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಅತ್ತ ನಂದಿ ಲಿಂಕ್ ರಸ್ತೆಯಲ್ಲಿ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದರು.
ನಾಗಮಂಗಲದ ಜನ ಯಾರ ಮೇಲೆ ಎಷ್ಟು ವಿಶ್ವಾಸ ಇದೆ ಅನ್ನೋದು ಈ ಕಾರ್ಯಕ್ರಮದ ಮೂಲಕ ಗೊತ್ತಾಗ್ತಾ ಇದೆ. ಅಪ್ಪಾಜಿಗೌಡ್ರು ಕಳೆದ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅವರಿಗೆ ಬೇಸರವಿದೆ. ಅದು ಸೋಲುವ ಕ್ಷೇತ್ರವಲ್ಲ. ನಮ್ಮ ಪಕ್ಷದ ಒಳಗಿನ ಕೆಲವು ಲೋಪ ದೋಷಗಳಿಂದ ಸೋಲಾಗಿದೆ. ಅಪ್ಪಾಜಿಗೌಡ್ರರನ್ನು ನಾನು ಅವರ ಕಾರ್ಯಕ್ಕೆ ಅಭಿನಂದಿಸುತ್ತೇನೆ ಮತ್ತು ಗೌರವಿಸುತ್ತೇನೆ. ಎರಡು ಬಾರಿ ಸಿಎಂ ಆದ ಸಂದರ್ಭಗಳು ಬಂದಿದ್ದರಿಂದ ನಿಮ್ಮೆಲ್ಲರಿಗೂ ವಿಶ್ವಾಸವಿದೆ.
ನಾನು ಸಿಎಂ ಆದಾಗ ತೆಗೆದಕೊಂಡ ನಿರ್ಣಯಗಳಿಂದ ನೀವು ನಿಮ್ಮ ಹೃದಯದಲ್ಲಿ ಸ್ಥಾನ ಕೊಡಲು ಸಾಧ್ಯ. ನಾನು ಎರಡು ಬಾರಿ ಸಿಎಂ ಆದಾಗಲೂ ಒಳ್ಳೆಯ ಕೆಲಸ ಮಾಡಿದ್ದೇನೆ. ನಾನು ಎರಡನೇ ಬಾರಿಗೆ ಸಿಎಂ ಆದಾಗ ನನ್ನ ಮತ್ತು ಜನರ ನಡುವೆ ಹುಳಿ ಹಿಂಡುವ ಕೆಲಸ ಅನೇಕರು ಮಾಡಿದರು. ಒಂದು 15 ದಿನ ನೋಡ್ತಾ ಇರಿ ನಮ್ಮ ಪಕ್ಷಕ್ಕೆ ಟೋಪಿ ಹಾಕಿದವರು ಕಾಂಗ್ರೆಸ್ ಸೇರೊದನ್ನ ನೋಡ್ತೀರಿ ಎನ್ನುತ್ತ ಸಚಿವ ನಾರಾಯಣಗೌಡ ಕುರಿತು ಪ್ರಸ್ತಾಪಿಸಿದರು.
ನಾನು ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಯಾವುದೋ ಒತ್ತಡದ ಸನ್ನಿವೇಶದಿಂದ ರಾಜಕೀಯಕ್ಕೆ ಬಂದಿದ್ದು. ಆದರೆ ನಾನು ಎಲ್ಲ ವ್ಯವಹಾರ ಬದಿಗೊತ್ತಿ, ಜನರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ದೆ ಎಂದು ಪ್ರತಿನಿತ್ಯ ಟೀಕೆ ಮಾಡಿದ್ರು. ಆದರೆ ನನಗೆ ಒಂದು ಸರ್ಕಾರಿ ಬಂಗಲೆ ಇರಲಿಲ್ಲ.
ಜಾರ್ಜ್ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಇದ್ರು. ಆದರೆ ಇದನ್ನೇ ಏನೋ ನಾನು ದೊಡ್ಡ ತಪ್ಪು ಮಾಡ್ದೆ ಅಂತಾರೆ. ಕಾಂಗ್ರೆಸ್ ನವರು ನಮ್ಮದೆ ಅಂತಿಮ ನಿರ್ಣಯ, ನನ್ನ ಇಲಾಖೆಗೆ ಕೈ ಹಾಕಬೇಡಿ ಎಂದು ಹೇಳ್ತಿದ್ರು. ಸಾಲ ಮನ್ನಾ ಮಾಡೋಕೆ ಹೋದಾಗ ದುಡ್ಡು ಇಲ್ಲ ಬೇಡ ಅಂದಿದ್ರು. ಸಿದ್ದರಾಮಯ್ಯನ ಮುಖಕ್ಕೆ ಹೋಗಿ ಹಿಡಿದೆ, ನಿನ್ನ ಶಾಸಕರಿಗೆ ಇಷ್ಟು ದುಡ್ಡು ಕೊಡ್ತೀನಿ ಅಂತಾ, ಆಮೇಲೆ ಅಲ್ಲಿ ಎಲ್ಲೋ ಸಿದ್ದವನಕ್ಕೆ ಹೋಗಿ, ಸರ್ಕಾರ ಬೀಳಿಸೋಕೆ ಮದ್ದು ಅರೆದಿದ್ದರು.
ಆ ಮೇಲೆ ನಾನು ಹೋಗಿ ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕ್ದೆ. ಇಲ್ಲಿ ಎಲ್ಲೋ ಕೆಲವರು ಭಾಷಣ ಮಾಡ್ತಾರೆ. ಕುಮಾರಸ್ವಾಮಿ ಸರಿಯಾಗಿ ಆಡಳಿತ ಕೊಟ್ಟಿಲ್ಲ, ಸರ್ಕಾರ ಹೊರಟೋಯ್ತು ಅಂತಾ ಹೇಳುತ್ತಾರೆ. ಅಮೆರಿಕಾಕ್ಕೆ ಹೋದ್ರೆ ಸರ್ಕಾರ ತೆಗೀತ್ತಾರೆ ಅಂತಾ ಕೆಲವರು ನನಗೆ ಹೇಳಿದ್ರು. ಸರ್ಕಾರ ಹೋಗುತ್ತದೆ ಎಂದು ನನಗೂ ಮೊದಲೇ ಗೊತ್ತಿತ್ತು. ಮೂರೂವರೆ ವರ್ಷ ಬಿಜೆಪಿ ಆಡಳಿತ ನೋಡಿದ್ದೀರಿ. ಈಗ ಅಮಿತ್ ಶಾ ಬಂದು ಮಂಡ್ಯ ಜಿಲ್ಲೆಯಲ್ಲಿ ಡೈನಮೈಟ್ ಇಟ್ಟು ಒಡೆಯಲು ಬಂದಿದ್ದಾರೆ. ಪಾಪ ಅವರಿಗೆ ಗೊತ್ತಿಲ್ಲ, ನಿಮ್ಮಂತಹ ಲಕ್ಷಾಂತರ ಜನ ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಯಾವ ಡೈನಮೈಟ್ ನಿಂದಲೂ ಒಡೆಯಲು ಸಾದ್ಯವಿಲ್ಲ..
ನಾಗಮಂಗಲದಲ್ಲಿ ನಮ್ಮ ಸುರೇಶ್ ಗೌಡ್ರು ಸೋಲಿಸೋಕೆ ಸ್ನೇಹಿತರು ಒಬ್ಬರು ಓಡಾಡ್ತಿದ್ದಾರೆ. ಸೋಲಿಸಿ ಏನು ಮಾಡ್ತಾರೆ? ಸುರೇಶ್ ಗೌಡ್ರರನ್ನ ಸೋಲಿಸಿ ಜಿಲ್ಲೆಗೆ ಕೊಡೋದಕ್ಕೆ ಏನಿದೆ? ಕಳೆದ ಮೂರು ತಿಂಗಳಿಂದ ಇಷ್ಟೆಲ್ಲಾ ಪ್ರವಾಸ ಮಾಡ್ತಿರೋದು ನನ್ನ ಸ್ವಾರ್ಥಕಲ್ಲ. ನನಗೆ ಎರಡು ಬಾರಿ ಹಾರ್ಟ್ ಸರ್ಜರಿಯಾಗಿದೆ. ಇಷ್ಟಾದರೂ ಕಷ್ಟ ಪಡುತ್ತಿದ್ದೇನೆ. ಆದ್ರೆ ಈ ಹೋರಾಟವನ್ನು ಹಿಂಪಡೆಯಲ್ಲ. ನಾನು ದೇವೆಗೌಡರ ಕುಟುಂಬದವನು,ಪಲಾಯನವಾದ ಮಾಡಲ್ಲ. ಹೇಡಿ ಅಲ್ಲ ನಾನು. ನಾನು ಏಕಾಂಗಿ ಹೋರಾಟ ಮಾಡ್ತಿದ್ದೇನೆ. ದೇವೆಗೌಡರ ಪರ ನಿಂತಿರುವ ರೈತ ಕುಟುಂಬ ನನ್ನ ಜೊತೆ ನಿಂತಿದೆ ಎಂದರು.
ಆ ಚಾಮುಂಡೇಶ್ವರಿ ತಾಯಿ ನನ್ನ ಪ್ರಾಣ ಉಳಿಸಿದವಳು. ಅವಳ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ನಿಖಿಲ್ ಗೆ ನಿಲ್ಲಬೇಡ ಅಂತಾ ನಾನು ಹೇಳಿದ್ದೆ. ಆದರೆ ಕೆಲವರ ಒತ್ತಡದಿಂದ ಚುನಾವಣೆಗೆ ಸ್ಪರ್ಧಿಸುವ ಅನಿವಾರ್ಯತೆ ಬಂತು. ಆದರೆ ನಿಖಿಲ್ ಕುಮಾರಸ್ವಾಮಿ ಅವತ್ತು ಸೋತಿಲ್ಲ, ಗೆದ್ದಿದ್ದಾನೆ. ಅವನು ಅವನ ಹಿನ್ನಡೆಗೆ ಕಾರಣ ಎಲ್ಲರು ಒಂದಾಗಿದ್ದು. ಅದೇನೋ ಸ್ವಾಭಿಮಾನ ಅಂತೆ. ಸ್ವಾಭಿಮಾನ ನೋಡ್ತೀರಿ ಮುಂದೆ, ಬಿಜೆಪಿ ಹಾಗೂ ಅಮಿತ್ ಶಾ ಕಾಲು ಕೆಳಗೆ ಹೋಗುತ್ತೆ ಎಂದು ಸುಮಲತಾ ಕುರಿತು ಮಾತನಾಡಿದರು.
ಇದನ್ನೂ ಓದಿ: HD Kumaraswamy : ಪ್ರಜಾಧ್ವನಿ ಎಂದರೆ 500 ರೂ. ಕೊಟ್ಟು ಜನ ಸೇರ್ಸೋದಲ್ಲ, ಹಳ್ಳಿಗಳಿಗೆ ಹೋಗಿ ಎಂದ ಎಚ್‌ಡಿ ಕುಮಾರಸ್ವಾಮಿ
ನಾನು ಅವರ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ನಿಖಿಲ್ ಕಾನೂನಾತ್ಮಕ ವಾಗಿ ಸೋತಿರಬಹುದು. ಆದರೆ ಇವತ್ತು ಮಂಡ್ಯ ಜನರ ಹೃದಯದಲ್ಲಿ ನಿಖಿಲ್ ಇದ್ದಾನೆ. ನಾನು ದೇವೇಗೌಡರ ಭೇಟಿ ಮಾಡಿ ಬಂದೆ. ಆಸ್ಪತ್ರೆ ಯಲ್ಲಿ ದೇವೇಗೌಡರಿಗೆ ಮಾತು ಕೊಟ್ಟು ಬಂದಿದೀನಿ. ನೀವು ಏನು ಕನಸು ಕಂಡಿದ್ದಿರಿ, ಅದನ್ನು ನಾನು ಈಡೇರಿಸುತ್ತೇನೆ. ನೀವು ನೊಂದುಕೊಳ್ಳಬೇಡಿ. ಭಗವಂತ ನಿಮ್ಮನ್ನು ಬೇಗ ಕರೆದು ಕೊಳ್ಳಲ್ಲ. ನಿಮ್ಮ ಕನಸು ನನಸು ಮಾಡ್ತೀನಿ ಅಂತಾ ಮಾತು ಕೊಟ್ಟು ಬಂದಿದೀನಿ.
ನನ್ನ ಹೋರಾಟಕ್ಕೆ ರಕ್ಷಣೆ ಕೊಡಬೇಕಾದವ್ರು ನೀವು. ನನ್ನ ಜೀವನಕ್ಕೆ ಬಿಡದಿಯ 45 ಎಕರೆ ಸಾಕು. ಚುನಾವಣೆ ನಡೆಸೋಕೆ ನನ್ನ ಬಳಿ ೫ ರೂಪಾಯಿ ದುಡ್ಡು ಇಲ್ಲ. ಸಾಬೂನೂ ಕಾರ್ಖಾನೆ ಚೇರ್ ಮೆನ್ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಅಶೋಕ್, ಅಶ್ವಥ್ ನಾರಾಯಣ ಅವ್ರೆ ನಿನ್ನೆ ರಾಮನಗರಕ್ಕೆ ಬಂದು ನನ್ನ ಕೆಣಕಿದ್ದೀರಿ. ಆದರೆ ನಿಮಗೆ ಗೊತ್ತಿಲ್ಲ ರಾಮನಗರ ಜನರಿಗೂ ನನಗೂ ತಾಯಿ ಮಗನ ಸಂಬಂಧ ಇದೆ ಅಂತ. 2023ಕ್ಕೆ ನೀವು ಮನೆಗೆ ಹೋಗಲು ತಯಾರಾಗಿರಿ. ಕುಮಾರಸ್ವಾಮಿ ಯಿಂದ ಜೀವ ಪಡೆದ್ರಿ, ಕುಮಾರಸ್ವಾಮಿ ಯಿಂದಲೇ ಹತ ಆಗ್ತೀರಿ ಹುಷಾರು ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ನಗರ, ದಾಸರಹಳ್ಳಿ, ರಾಜಾಜಿನಗರ, ಪದ್ಮನಾಭ ನಗರವನ್ನು ನಾವು ಗೆಲ್ಲಬಹುದು. ಇನ್ನೆರಡು ತಿಂಗಳು ನೀವು ಶ್ರಮವಹಿಸಿದ್ರೆ ಈ ಎಲ್ಲ ಕ್ಷೇತ್ರ ಗೆಲ್ಲಬಹುದು. ನೀವು ಒಂದು ಬಾರಿ 5 ವರ್ಷ ಸ್ವತಂತ್ರ ಅವಕಾಶ ನೀಡಿ. ಈ ಜೀವ ಭೂಮಿಗೆ ಹೋಗುವ ಮೊದಲು ನಿಮ್ಮ ಭವಿಷ್ಯ ಸರಿಪಡಿಸುತ್ತೇನೆ. ಇದೇ ಮಾರ್ಚ್ 26 ನೇ ತಾರಿಖು ದೇವೆಗೌಡರು ಕಾರ್ಯಕ್ರಮಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತಿದೇನೆ.
ರಾಮನಗರದಿಂದ ದೇವೆಗೌಡರನ್ನ ಮೆರವಣಿಗೆ ಮೂಲಕ ಕಳೆದುಕೊಂಡು ಹೋಗ್ತಿನಿ. ಚಾಮುಂಡೇಶ್ವರಿಯ ತಪ್ಪಲಿನಲ್ಲಿ 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡ್ತೀವಿ. ಮಂಡ್ಯದಲ್ಲಿ 7 ಕ್ಕೆ 7 ಕ್ಷೇತ್ರ ಗೆಲ್ಲಲು ಎಲ್ಲ ಶ್ರಮ ಹಾಕ್ತೀವಿ. ಅದಕ್ಕಿಂತ ನಿಮ್ಮ ಶ್ರಮ ಹೆಚ್ಚಿರಬೇಕು.
ಇನ್ನು ಮೂರೆ ತಿಂಗಳು ಮಂಡ್ಯ ಜಿಲ್ಲೆಯನ್ನ ಮಾದರಿ ಜಿಲ್ಲೆಯನ್ನಾಗಿ ಮಾಡ್ತೀನಿ. ಮಂಡ್ಯ ಕಬ್ಬಿಗೆ ಟನ್ ಗೆ 6000 ದೊರಕುವಂತ ಯೋಜನೆ ಸಿದ್ದಮಾಡಿದ್ದೇವೆ. ಸದ್ಯದಲ್ಲೆ ಅದನ್ನ ತಿಳಿಸುತ್ತೇವೆ. ಕೊಬ್ಬರಿಗೆ ಬೆಂಬಲ ಬೆಲೆ ಕೊಡ್ತಿವಿ ಎಂದರು.