Site icon Vistara News

JDS Politics : ನಿಖಿಲ್‌ ಜತೆ ಶರಣಗೌಡ ಕುಂದಕೂರು ಮಾತುಕತೆ; ಎಂಟ್ರಿಯಾಗಲಿದ್ದಾರೆ ಎಚ್‌.ಡಿ. ಕುಮಾರಸ್ವಾಮಿ

Nikhil Kumaraswamy and Sharangowda Kundakur talk

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಅನ್ನು ಗ್ಯಾರಂಟಿ ಯೋಜನೆಗಳ (Congress Guarantee Scheme) ಅಬ್ಬರದ ನಡುವೆ ಕಟ್ಟಿಹಾಕುವ ಸಂಬಂಧ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿದೆ. ಇದು ಜೆಡಿಎಸ್‌ ಪಕ್ಷದೊಳಗೆ (JDS Politics) ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಈ ಮೈತ್ರಿಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದಿರುವ ಗುರುಮಿಠಕಲ್‌ ಕ್ಷೇತ್ರದ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು (JDS MLA Sharanagouda Kandakur) ಅತೃಪ್ತಿ ಶಮನಕ್ಕೆ ಜೆಡಿಎಸ್‌ ಮುಂದಾಗಿದೆ. ಈ ಸಂಬಂಧ ಶರಣಗೌಡ ಜತೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (JDS youth wing state president Nikhil Kumaraswamy) ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಶರಣಗೌಡ ಕಂದಕೂರು ನನ್ನ ಆತ್ಮೀಯರು. ರಾಜಕೀಯ ಒಂದು ಭಾಗವಷ್ಟೇ. ಅವರು ನಮ್ಮ ಪಕ್ಷದ ಶಾಸಕರು ಮತ್ತು ನನ್ನ ಸಹೋದರರಾಗಿದ್ದಾರೆ. ಶರಣಗೌಡರು ಬಹಳ ನೇರವಾದಿ. ಮನಸ್ಸಿನಲ್ಲಿರುವುದನ್ನು ಬಹಳ ಮುಕ್ತವಾಗಿ ಹೇಳಿದ್ದಾರೆ. ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಅವರು ಬುಧವಾರ ಮಾಧ್ಯಮಗಳಲ್ಲಿ ಮಾತನಾಡಿರುವುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪಕ್ಷದ ಮೇಲೆ, ನಾಯಕರ ಮೇಲೆ ಆಗಲಿ ಅತ್ಯಂತ ಗೌರವವನ್ನು ಇಟ್ಟುಕೊಂಡಿರುವ ವ್ಯಕ್ತಿ ಇವರಾಗಿದ್ದಾರೆ. ಅವರನ್ನು ನಾನು ಉಪಾಹಾರಕ್ಕೆ ಕರೆದಿದ್ದೆ. ಇಲ್ಲಿ ಪಕ್ಷದ ವಿಚಾರವನ್ನು ಚರ್ಚೆ ಮಾಡಿದ್ದೇನೆ. ಕೆಲವು ಸಲಹೆಗಳನ್ನು ಅವರು ಕೊಟ್ಟಿದ್ದಾರೆ. ಅದನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka Bandh : ನಾಳೆ ಪ್ರತಿಭಟನೆಗೆ ಅಡ್ಡಿಯಿಲ್ಲ, ಬಂದ್‌ಗೆ ಮಾಡೋ ಹಾಗಿಲ್ಲ; ಡಿ.ಕೆ. ಶಿವಕುಮಾರ್ ವಾರ್ನಿಂಗ್

ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಕೆಲವೊಂದು ಮಾಜಿ ಶಾಸಕರು, ಪಕ್ಷದ ಮುಖಂಡರಿಗೆ ಏನಾದರೂ ಅಸಮಾಧಾನ ಇದ್ದರೆ ಇದರ ಬಗ್ಗೆ ಬಗೆಹರಿಸಲು ಚರ್ಚೆ ಮಾಡುತ್ತೇವೆ. ಕೆಲವೊಂದು ವಿಚಾರಗಳನ್ನು ನಾಯಕರ ಜತೆ ಮಾತನಾಡಬೇಕಾಗುತ್ತದೆ. ಯಾರಿಗಾದರೂ ಅಭದ್ರತೆ ಇದ್ದರೆ ವಿಶ್ವಾಸ ಮೂಡಿಸುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂದು ನಿಖಿಲ್ ಹೇಳಿದರು.

ಈಗ ತಾನೇ ತಂದೆಯವರಾದ ಎಚ್.ಡಿ. ಕುಮಾರಸ್ವಾಮಿ ಅವರು ಫೋನ್ ಮಾಡಿದ್ದರು. ಶರಣಗೌಡ ಮನೆ ಮಗನಿದ್ದಂತೆ. ಅವರ ಜತೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಯುವ ನಾಯಕರು, ಸಾಕಷ್ಟು ಹೋರಾಟ ಮಾಡಿ ಜಯ ಸಾಧಿಸಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಪಕ್ಷ ಕಟ್ಟುವ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತೇವೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಎಲ್ಲವನ್ನೂ ಕುಮಾರಸ್ವಾಮಿ ಸರಿ ಮಾಡಲಿದ್ದಾರೆ: ಶರಣಗೌಡ ಕುಂದಕೂರು

ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಮೈತ್ರಿ ಬೇಡ ಎಂಬುದು ನನ್ನ ಅಭಿಪ್ರಾಯವಷ್ಟೇ. ಅಸಮಾಧಾನ, ಅಪಸ್ವರ ಎಂದು ಹೇಳುವುದಲ್ಲ. ಹಾಲಿ, ಮಾಜಿ ಶಾಸಕರ ಅಭಿಪ್ರಾಯದ ಬಗ್ಗೆ ಇಂದು ನಿಖಿಲ್‌ ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಿದ್ದೇನೆ. ನಿಖಿಲ್ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕುಮಾರಣ್ಣನಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಈಗಾಗಲೇ ಹಾಲಿ, ಮಾಜಿ ಶಾಸಕರನ್ನು ಕರೆದು ಮಾತನಾಡುವ ಕೆಲಸವನ್ನು ಎಚ್.ಡಿ. ಕುಮಾರಸ್ವಾಮಿ ಅವರು ಆರಂಭ ಮಾಡಿದ್ದಾರೆ. ಎಲ್ಲರಿಗೂ ಕಾಡುತ್ತಿರುವ ಅಭದ್ರತೆಯನ್ನು ಸರಿ ಮಾಡುವ ಕೆಲಸವನ್ನು ಮಾಡುತ್ತಾ ಇದ್ದಾರೆ. ಇನ್ನು ಎರಡು ದಿನದಲ್ಲಿ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಕುಮಾರಣ್ಣ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಎಲ್ಲವನ್ನೂ ಹೇಳಿದ್ದೇನೆ: ನಿಖಿಲ್‌ ಕುಮಾರಸ್ವಾಮಿ

ನಾನು ಎಲ್ಲವನ್ನೂ ಯುವ ನಾಯಕರ ಬಳಿ ಹೇಳಿದ್ದೇನೆ. ಯಾರು? ಏನು? ಎಂಬುದನ್ನು ತಿಳಿಸಿದ್ದೇನೆ. ಕುಮಾರಸ್ವಾಮಿ ಅವರಿಗೆ ಎಲ್ಲವನ್ನೂ ತಿಳಿಸಲಾಗಿದೆ. ಆಂತರಿಕ ವಿಚಾರವನ್ನು ತಿಳಿಸಿದ್ದೇನೆ. ಬೆಳಗ್ಗೆಯಿಂದ ಸಭೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಯಾರೆಲ್ಲ ಅಸಮಾಧಾನಿತರು ಇದ್ದಾರೋ ಅವರನ್ನು ಮಾತನಾಡಿಸುವ ಕೆಲಸ ಆಗುತ್ತಲಿದೆ ಎಂದು ಶರಣಗೌಡ ಹೇಳಿದರು.

ಇದನ್ನೂ ಓದಿ: Congress Politics : ರಾಷ್ಟ್ರ ರಾಜಕಾರಣದತ್ತ ಬಿ.ಕೆ. ಹರಿಪ್ರಸಾದ್! ಮುನಿಸು ಮರೆತು ಡಿಕೆಶಿ ಭೇಟಿ ಮಾಡಿದ್ದರ ಕಾರಣವೇನು?

ನಿಮ್ಮ ಮಾತಿಗೆ ಬೆಲೆ ಸಿಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶರಣಗೌಡ ಕಂದಕೂರು, ನನ್ನ ವಿಚಾರಗಳನ್ನು ಯುವ ನಾಯಕರ ಮುಂದೆ ಹೇಳಿದ್ದೇನೆ. ನನ್ನ ವಿಚಾರವಲ್ಲದೆ, ಮುಂದಿನ ರಾಜಕೀಯ ಭವಿಷ್ಯದ ಹಾಗೂ ಜೆಡಿಎಸ್ ಪಕ್ಷದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಅವರು ಇದನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ನನ್ನ ಅಭಿಪ್ರಾಯ ಪರಿಗಣಿಸಿ ಇಲ್ಲಿಗೆ ಮಾತುಕತೆಗೆ ಕರೆದಿದ್ದಾರೆ. ಈ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಸುಖಾಂತ್ಯ ಆಗುತ್ತದೆ ಎಂಬ ವಿಶ್ವಾಸ ಇದೆ ಎಂಬುದಾಗಿ ತಿಳಿಸಿದರು.

Exit mobile version