ಬೆಂಗಳೂರು: ರಾಜ್ಯದ ಜೆಡಿಎಸ್‌ನಲ್ಲಿ ಹುಟ್ಟಿಕೊಂಡಿರುವ ಬಿಕ್ಕಟ್ಟು (JDS Politics) ಮೇಲ್ನೋಟಕ್ಕೆ ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರ ನಡುವಿನ ಫೈಟ್‌ನಂತೆ ಕಾಣಿಸುತ್ತಿದೆಯಾದರೂ ಆಂತರ್ಯದಲ್ಲಿ ಇರುವ ಅಕ್ಕ-ತಂಗಿಯರ ನಡುವಿನ ಪ್ರತಿಷ್ಠಾ ಸಮರ ಎನ್ನುವುದು ನಿಧಾನಕ್ಕೆ ಬಯಲಾಗುತ್ತಿದೆ.
ಹಾಸನದಲ್ಲಿ ಜೆಡಿಎಸ್ ಟಿಕೆಟ್‌ನ್ನು ಭವಾನಿ ರೇವಣ್ಣ ಅವರಿಗೇ ಕೊಡಬೇಕು ಎಂಬ ಎಚ್.ಡಿ. ರೇವಣ್ಣ ಪಟ್ಟು ಮತ್ತು ಬೇಡ, ಕಾರ್ಯಕರ್ತರಿಗೆ ಕೊಡೋಣ ಎಂಬ ಎಚ್.ಡಿ ಕುಮಾರಸ್ವಾಮಿ ಅವರ ಹಠದ ಹಿಂದಿರುವುದು ಅವರಿಬ್ಬರು ಅಲ್ಲವೇ ಅಲ್ಲ. ಬದಲಾಗಿ ಭವಾನಿ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ!
ಹೌದು, ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ ರೇವಣ್ಣ ಅವರ ನಡುವೆ ವಿವಾದ ಬಗೆಹರಿಯದೆ ಇದ್ದಾಗ, ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಯ ವಿಷಯವಾದಾಗ ಅದು ಎಚ್.ಡಿ. ದೇವೇಗೌಡರ ಮನೆಯಂಗಳ ತಲುಪಿತ್ತು. ಭಾನುವಾರ ರಾತ್ರಿ ದೇವೇಗೌಡರು ಇಬ್ಬರೂ ನಾಯಕರು ಮತ್ತು ಭವಾನಿ ರೇವಣ್ಣ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದರೂ ಅದು ಫಲ ನೀಡಿಲ್ಲ. ಹಾಸನ ಟಿಕೆಟ್ ತನಗೆ ಬೇಕೇ ಬೇಕು ಎಂದು ಹಠ ಹಿಡಿದಿರುವ ಭವಾನಿ ರೇವಣ್ಣ ಅವರು ಸಂಧಾನ ಸಭೆಯ ಮಧ್ಯದಿಂದಲೇ ಎದ್ದು ಹೋಗಿದ್ದು ಅವರಿಗೆ ಆಗಿರುವ ಅಸಮಾಧಾನದ ಪರಾಕಾಷ್ಠೆಯನ್ನು ತೋರಿಸುತ್ತಿದೆ. ಇತ್ತ ಎಚ್.ಡಿ. ರೇವಣ್ಣ ಅವರು ʻಅಪ್ಪ ಹೇಳಿದಂತೆ ಟಿಕೆಟ್ ಫೈನಲ್, ನಾನು ಅಣ್ಣ ಹೇಳಿದಂತೆʼ ಎಂದು ಹೇಳುತ್ತಿರುವುದೆಲ್ಲ ಬಾಯುಪಚಾರ ಎನ್ನುವುದು ಸ್ಪಷ್ಟವಾಗುತ್ತಿದೆ.
ಹಾಗಿದ್ದರೆ ನಿಜಕ್ಕೂ ಆಗುತ್ತಿರುವುದೇನು?
ನಿಜವೆಂದರೆ, ದೇವೇಗೌಡರ ಮನೆ ಸೊಸೆಯರ ನಡುವೆ ರಾಜಕೀಯ ಪೈಪೋಟಿಯೂ ಜೋರಾಗಿಯೇ ಇದೆ. ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗುತ್ತಿದ್ದಂತೆಯೇ ಅನಿತಾ ಕುಮಾರಸ್ವಾಮಿ ಅವರು ಶಾಸಕರಾರುವ ಮೂಲಕ ಸಡ್ಡು ಹೊಡೆದರು.
ಆದರೆ, ಈ ಬಾರಿ ಭವಾನಿ ರೇವಣ್ಣ ಅವರು ತಾನೇ ಶಾಸಕಿಯಾಗಲು ಮುಂದಾದಾಗ ಅನಿತಾ ಕುಮಾರಸ್ವಾಮಿ ಅವರು ಇನ್ನೊಂದು ದಾಳ ಉರುಳಿಸಿ ತಾನೇ ಸ್ಪರ್ಧೆಯಿಂದ ಹಿಂದೆ ಸರಿದರು. ಇದಕ್ಕೆ ಒಂದೇ ಕುಟುಂಬದ ಹಲವರು, ಅದರಲ್ಲೂ ಸೊಸೆಯಂದಿರು ಕೂಡಾ ರಾಜಕೀಯ ಮಾಡುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುವುದು ಬೇಡ ಎಂಬ ವಾದವನ್ನು ಸೃಷ್ಟಿಸಲಾಯಿತು. ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ಹಿಂದೆ ಪಕ್ಷದ ಪ್ರತಿಷ್ಠೆಯನ್ನು ಉಳಿಸುವುದಕ್ಕಾಗಿ ತಾತ್ಕಾಲಿಕ ನೆಲೆಯಲ್ಲಷ್ಟೇ ಅನಿತಾ ಕುಮಾರಸ್ವಾಮಿ ಅವರನ್ನು ಮೊದಲು ಮಧುಗಿರಿಯಲ್ಲಿ ನಂತರ ರಾಮನಗರದಲ್ಲಿ ಕಣಕ್ಕಿಳಿಸಲಾಗಿದೆ. ಈ ಬಾರಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರವನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಡಲಿದ್ದಾರೆ ಎಂದು ಪ್ರಕಟಿಸಿದರು.
ಈಗ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಎಚ್.ಡಿ ಕುಮಾರಸ್ವಾಮಿ ಅವರ ಮನೆಯಲ್ಲಿ ಇಬ್ಬರು ಶಾಸಕರಾಗುತ್ತಾರೆ. ಅದೇ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ ಈಗಾಗಲೇ ಇಬ್ಬರು ಶಾಸಕರು (ರೇವಣ್ಣ ಮತ್ತು ಸೂರಜ್) ಮತ್ತು ಒಬ್ಬರು ಸಂಸದರು (ಪ್ರಜ್ವಲ್ ರೇವಣ್ಣ) ಇದ್ದಾರೆ. ಒಂದೊಮ್ಮೆ ಭವಾನಿ ರೇವಣ್ಣ ಅವರು ಕೂಡಾ ಸ್ಪರ್ಧಿಸಿ ಗೆದ್ದರೆ ನಾಲ್ಕು ಮಂದಿಯಾಗಿ ಅವರ ಕುಟುಂಬದ ಪ್ರಾಬಲ್ಯ ಹೆಚ್ಚಾಗುತ್ತದೆ ಎನ್ನುವುದು ಅನಿತಾ ಕುಮಾರಸ್ವಾಮಿ ಅವರಿಗೆ ಇರುವ ಆತಂಕ ಎನ್ನಲಾಗುತ್ತಿದೆ.
ಹೀಗಾಗಿ, ಅನಿತಾ ಕುಮಾರಸ್ವಾಮಿ ಅವರು ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇದರಿಂದ ಭವಾನಿ ರೇವಣ್ಣ ಅವರು ಛಲವನ್ನು ಬಿಡುತ್ತಿಲ್ಲ!ಪುತ್ರನಾಗಿ ಕ್ಷೇತ್ರ ತ್ಯಾಗ ಮಾಡಿರುವ ಅನಿತಾ ಕುಮಾರಸ್ವಾಮಿ ಅವರು ಗೌಡರ ಕುಟುಂಬದಲ್ಲಿ ಮಹಿಳೆಯರಿಗೆ ಟಿಕೆಟ್ ಬೇಡ ಎಂಬ ವಾದವನ್ನು ಎಚ್.ಡಿ. ಕುಮಾರಸ್ವಾಮಿ ಮೂಲಕ ಮುಂದಿಡುತ್ತಿದ್ದಾರೆ. ಹಾಸನದಲ್ಲಿ ಗೌಡರ ಮನೆಯ ಹೆಂಗಸರನ್ನು ಕಣಕ್ಕಿಳಿಸಿ ಗೆಲ್ಲಬೇಕಾದ ಅನಿವಾರ್ಯತೆ ಇಲ್ಲ. ಸಾಮಾನ್ಯ ಕಾರ್ಯಕರ್ತನ ಮೂಲಕವೂ ಗೆಲ್ಲಬಹುದು ಎಂದು ವಾದಿಸುತ್ತಿದ್ದಾರೆ ಎಚ್.ಡಿಕೆ.
ಹಾಸನದಲ್ಲಿ ಪ್ರೀತಂ ಗೌಡ ಅವರನ್ನು ಸೋಲಿಸುವುದು ಬೇರೆಯವರಿಗೆ ಸುಲಭವಲ್ಲ. ನಾನೇ ಸೋಲಿಸಲು ಶಕ್ತಳು. ನನಗೇ ಟಿಕೆಟ್ ಬೇಕು ಎನ್ನುತ್ತಿರುವ ಭವಾನಿ ಅವರ ಹಿಂದೆ ರೇವಣ್ಣ, ಪ್ರಜ್ವಲ್, ಸ್ವರೂಪ್ ರೇವಣ್ಣ ಅವರ ಬಲವಿದೆ.
ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡುವ ವಿಚಾರಕ್ಕೆ ರಾಮನಗರದ ವೇದಿಕೆ ಮೇಲೆಯೇ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ. ಈ ನಡುವೆ ಹಾಸನ ಜಿಲ್ಲೆಯ ಸೋಷಿಯಲ್ ಮೀಡಿಯಾದಲ್ಲಿ ʻಪಶ್ಚಿಮ ಬಂಗಾಳಕ್ಕೆ ದೀದಿ ಹಾಸನಕ್ಕೆ ಭವಾನಿʼ ಎಂಬ ಫೋಟೊ ವೈರಲ್ ಆಗುತ್ತಿದ್ದು, ಇದು ತಕ್ಷಣಕ್ಕೆ ತಣ್ಣಗಾಗುವ ವಿವಾದ ಅಲ್ಲ ಎನ್ನುವುದರ ಸಂದೇಶವಾಗಿದೆ.
ಇದೆಲ್ಲದರ ನಡುವೆ ಇಕ್ಕಟ್ಟಿಗೆ ಸಿಲುಕಿರುವುದು ಎಚ್.ಡಿ. ಕುಮಾರಸ್ವಾಮಿ, ಎಚ್. ರೇವಣ್ಣ ಮತ್ತು ಇಡೀ ಕುಟುಂಬವನ್ನು ತಾನಿರುವ ವರೆಗೂ ಜತೆಯಾಗಿ ಇಟ್ಟುಕೊಳ್ಳಬೇಕು ಎನ್ನುವ ಕಷ್ಟದಲ್ಲಿರುವ ಎಚ್.ಡಿ ದೇವೇಗೌಡರು. ಇಂದೇ ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆಯಾಗುವುದು ಖಚಿತವಾಗಿದ್ದು, ಅದರಲ್ಲಿ ಹಾಸನದ ಹೆಸರು ಇರುತ್ತದಾ? ಅದು ಭವಾನಿ ರೇವಣ್ಣ ಅವರದ್ದಾಗಿರುತ್ತದಾ? ಅಲ್ಲದೆ ಹೋದರೆ ಮುಂದೇನಾಗುತ್ತದೆ ಎನ್ನುವುದೇ ಸದ್ಯದ ಕದನ ಕುತೂಹಲ.
ಇದನ್ನೂ ಓದಿ : Karnataka Election: ಹಾಸನ ಟಿಕೆಟ್ ಸಂಧಾನ ಸಭೆ; ಎಚ್‌ಡಿಕೆ ಪರ ಬ್ಯಾಟ್ ಬೀಸಿದ ದೇವೇಗೌಡ, ಬೇಸತ್ತು ಹೊರನಡೆದ ಭವಾನಿ