ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಜೆಡಿಎಸ್ (JDS politics) ಮತ್ತು ದೇವೇ ಗೌಡರ ಕುಟುಂಬದಲ್ಲಿ ಎದ್ದಿರುವ ಬಿರುಗಾಳಿ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸಿವೆ. ಭವಾನಿ ರೇವಣ್ಣ(bhavani revanna) ಅವರಿಗೇ ಟಿಕೆಟ್ ನೀಡಬೇಕು ಎಂಬ ವಿಷಯದಲ್ಲಿ ಎಚ್.ಡಿ. ರೇವಣ್ಣ ಅವರ ಟೀಮ್ ನಡೆಸುತ್ತಿರುವ ಬಗೆಬಗೆಯ ಒತ್ತಡ ತಂತ್ರಗಳಿಗೆ ಮಣಿಯುವ ಯಾವುದೇ ಲಕ್ಷಣವನ್ನು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ತೋರಿಸುತ್ತಿಲ್ಲ. ಇದಕ್ಕೆ ಬದಲಾಗಿ ಅವರು ಇನ್ನಷ್ಟು ಕಠಿಣವಾಗಿಯೇ ಮಾತನಾಡುತ್ತಿದ್ದಾರೆ. ʻಯಾವ ಬಂಡಾಯಕ್ಕೂ ಸೊಪ್ಪು ಹಾಕುವುದಿಲ್ಲ. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯಕ್ಕೇ ಮನ್ನಣೆ ನೀಡುತ್ತೇನೆʼ ಎಂದು ಅವರು ಸ್ಪಷ್ಟವಾಗಿ ಹೇಳುವ ಮೂಲಕ ರೇವಣ್ಣ ಪತ್ನಿಗೆ ಟಿಕೆಟಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜತೆಗೆ ಸೋಮವಾರ (ಏಪ್ರಿಲ್ 2) ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಭವಾನಿ ಬಂಡಾಯ ಹೇಳಿಕೆಗೆ ತಿರುಗೇಟು
ನೆಲಮಂಗಲದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಹಾಸನ ನಾಯಕರು ಭೇಟಿ ಮಾಡಿ ನನ್ನ ಜತೆ ಚರ್ಚೆ ಮಾಡಿದ್ದಾರೆ. ಹಾಸನದಲ್ಲಿ ಯಾವ ಬಂಡಾಯವಿದ್ದರೂ ಅದಕ್ಕೆ ಸೊಪ್ಪು ಹಾಕಲ್ಲ. ನಾನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಸ್ಪಂದಿಸುತ್ತೇವೆ. ಯಾವ ಒತ್ತಡ ಹಾಕಿದ್ರೂ ಇಲ್ಲ. ಕಾರ್ಯಕರ್ತರೇ ಅಂತಿಮ. ಕಾರ್ಯಕರ್ತರ ಭಾವನೆಗೆ ಸ್ಪಂದಿಸುತ್ತೇವೆʼʼ ಎಂದು ಹೇಳಿದರು.
ಈ ಮೂಲಕ ಟಿಕೆಟ್ ನೀಡದಿದ್ದರೆ ಬಂಡಾಯವೇಳುವ, ಪಕ್ಷೇತರರಾಗಿ ಕಣಕ್ಕೆ ಇಳಿಯುವ ಭವಾನಿ ರೇವಣ್ಣ ಬಣದ ಕೂಗಿಗೆ ಖಡಕ್ ಸಂದೇಶ ರವಾನಿಸಿದರು.
ಹಾಸನದಲ್ಲಿ ಟಿಕೆಟ್ ನೀಡದಿದ್ದರೆ ಬಂಡಾಯವಾಗಿ, ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಭವಾನಿ ರೇವಣ್ಣ ಅವರು ದೇವೇಗೌಡರ ಮುಂದೆ ಹೇಳಿದ್ದಾರೆ ಎಂದು ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ಈಗ ಅದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಬಂಡಾಯಕ್ಕೆ ಸೊಪ್ಪು ಹಾಕಲ್ಲ ಎಂದಿದ್ದಾರೆ.
ನಿನ್ನೆ ಎಚ್‌ಡಿಕೆ ಸಭೆ, ಇಂದು ದೇವೇಗೌಡರ ಸಭೆ
ಶುಕ್ರವಾರ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದ ನಾಯಕರು ಮತ್ತು ಮುಖಂಡರ ಸಭೆ ನಡೆಸಿದ್ದರು. ಟಿಕೆಟ್ ವಿಚಾರವಾಗಿ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. ಯಾರಿಗೆ ಟಿಕೆಟ್ ನೀಡಿದರೆ ಮುಖಂಡರ ನಿಲುವೇನಾಗಿರುತ್ತದೆ ಎಂದು ಮಾಹಿತಿ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೆ ದೇವೇಗೌಡರು ಹಾಸನ ಜಿಲ್ಲೆಯ ಜೆಡಿಎಸ್ ನಾಯಕರ ಸಭೆಯನ್ನು ಕರೆದಿದ್ದಾರೆ. ಇದರಲ್ಲಿ ಭವಾನಿ ರೇವಣ್ಣ ಅವರ ಬಂಡಾಯವೂ ಸೇರಿದಂತೆ ಎಲ್ಲ ವಿಚಾರಗಳ ಚರ್ಚೆ ನಡೆಯುವ ನಿರೀಕ್ಷೆ ಇದೆ. ಜತೆಗೆ ಎಚ್.ಪಿ. ಸ್ವರೂಪ್‌ಗೇ ಟಿಕೆಟ್ ನೀಡಬೇಕು ಎಂಬ ಎಚ್ಡಿಕೆ ಹಠದ ಬಗ್ಗೆಯೂ ಪ್ರಸ್ತಾಪವಾಗುವ ನಿರೀಕ್ಷೆ ಇದೆ.
ದೇವೇಗೌಡರು ನಡೆಸುವ ಸಭೆಯಲ್ಲಿ ಹಾಸನ ಜಿಲ್ಲೆಯ ನಾನಾ ಕ್ಷೇತ್ರಗಳ ಶಾಸಕರು, ಅಭ್ಯರ್ಥಿ ಆಕಾಂಕ್ಷಿಗಳು ಭಾಗಿಯಾಗುವ ಸಾಧ್ಯತೆ ಇದೆ. ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕೂಡ ಭಾಗಿಯಾಗಲಿದ್ದಾರೆ.
ಸೋಮವಾರ ಬೆಳಗ್ಗೆ ಎರಡನೇ ಪಟ್ಟಿ
ಡಿಸೆಂಬರ್‌ನಲ್ಲೇ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಸೋಮವಾರ ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ. ಇದನ್ನು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದರಲ್ಲಿ ಹಾಸನದ ಟಿಕೆಟ್ ಕೂಡಾ ಇರುತ್ತದೆ ಎಂದಿದ್ದಾರೆ ಕುಮಾರಸ್ವಾಮಿ.
ಇದನ್ನೂ ಓದಿ : JDS Karnataka: ಜೆಡಿಎಸ್ ವಿಶ್ವಾಸಕ್ಕೆ ಪಡೆಯಲು ಬಿಜೆಪಿ-ಕಾಂಗ್ರೆಸ್ ಕಾಂಪಿಟ್ ಮಾಡ್ತಿದ್ದಾರೆ: ಎಚ್.ಡಿ. ಕುಮಾರಸ್ವಾಮಿ