Site icon Vistara News

JDS Politics : ಹಾಸನ ಜೆಡಿಎಸ್‌ ತಿಕ್ಕಾಟಕ್ಕೆ ರಾಜೀ ಸೂತ್ರ; ಭವಾನಿ ರೇವಣ್ಣಗೆ ಚಾಮರಾಜ ಕ್ಷೇತ್ರದ ಟಿಕೆಟ್‌?

HDD Bhavani Revanna Kumarsswamy

#image_title

ಹಾಸನ: ಜಾತ್ಯತೀತ ಜನತಾದಳದ ಕೌಟುಂಬಿಕ ಸಾಮರಸ್ಯವನ್ನೂ ಕದಡಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿವಾದವನ್ನು ರಾಜಿಯಲ್ಲಿ ಬಗೆಹರಿಸುವ ಸಂಧಾನ ಸೂತ್ರವೊಂದನ್ನು ಹೆಣೆಯಲಾಗಿದೆ ಎಂದು ಹೇಳಲಾಗಿದೆ. ಅದರ ಪ್ರಕಾರ ನಡೆದರೆ ಭವಾನಿ ರೇವಣ್ಣ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿದೆ. ಆದರೆ, ಅವರು ಈಗ ಬಯಸಿರುವ ಹಾಸನ ಕ್ಷೇತ್ರದಲ್ಲಿ ಅಲ್ಲ. ಬದಲಾಗಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ!

ಸ್ಪರ್ಧೆಗೆ ಅವಕಾಶ ಕೊಡಲೇಬೇಕು ಎಂದು ಹಠ ಹಿಡಿದಿರುವ ಭವಾನಿ ರೇವಣ್ಣ ಮತ್ತು ಎಚ್‌.ಡಿ ರೇವಣ್ಣ ಅವರನ್ನು ಸಮಾಧಾನಪಡಿಸಲು ಜೆಡಿಎಸ್‌ ವರಿಷ್ಠರು ಹೊಸ ಸೂತ್ರವನ್ನು ಹೆಣೆದಿದ್ದಾರೆ ಎಂದು ಹೇಳಲಾಗಿದೆ. ಇದರ ಪ್ರಕಾರ ಭವಾನಿ ರೇವಣ್ಣ ಅವರಿಗೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಲಾಗುತ್ತದೆ.

ಇದು ಜೆಡಿಎಸ್‌ನ ವರಿಷ್ಠ ನೇತಾರರಾಗಿರುವ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಈ ಸೂತ್ರವನ್ನು ರೂಪಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಮುಂದಿನ ಸಭೆಯಲ್ಲಿ ಭವಾನಿ ಮತ್ತು ರೇವಣ್ಣ ಅವರ ಮುಂದೆ ಇಡಲಾಗುತ್ತಿದ್ದು, ಅದಕ್ಕೆ ಯಾವ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.

ಕಳೆದ ಒಂದು ವರ್ಷದಿಂದಲೇ ಹಾಸನ ಟಿಕೆಟ್‌ ನೀಡಬೇಕು ಎಂದು ಭವಾನಿ ರೇವಣ್ಣ ಅವರು ಮನವಿ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರಾಗಿರುವ ಪ್ರೀತಂ ಗೌಡ ಅವರು ಒಡ್ಡಿದ ಒಂದು ಸವಾಲನ್ನು ಸ್ವೀಕರಿಸಲು ಭವಾನಿ ಈ ಹಠ ತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರೆ, ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಎರಡು ಕಾರಣಕ್ಕಾಗಿ ಇಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಲು ಮನಸ್ಸಿಲ್ಲ ಎನ್ನಲಾಗಿದೆ.

ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಿ ಅವರು ಗೆದ್ದರೆ ರೇವಣ್ಣ ಅವರ ಕುಟುಂಬದಲ್ಲಿ ನಾಲ್ವರು ಶಾಸಕರು ಮತ್ತು ಸಂಸದರಾಗುತ್ತಾರೆ. ಅದೇ ಕುಮಾರಸ್ವಾಮಿ ಕುಟುಂಬದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಗೆದ್ದರೂ ಇಬ್ಬರೇ ಆಗುವುದು. ಹೀಗಾಗಿ, ಕೌಟುಂಬಿಕ ಹಿನ್ನಡೆಯನ್ನು ತಪ್ಪಿಸಲು ರೇವಣ್ಣ ಕುಟುಂಬಕ್ಕೆ ಇನ್ನೊಂದು ಟಿಕೆಟ್‌ ನೀಡಲು ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಗೌಡರ ಕುಟುಂಬದ ಹೆಣ್ಮಕ್ಕಳು ರಾಜಕೀಯದಲ್ಲಿ ಇರುವುದು ಬೇಕಾಗಿಲ್ಲ ಎಂಬ ಸಂದೇಶ ರವಾನಿಸಲು ಅನಿತಾ ಕುಮಾರಸ್ವಾಮಿ ಅವರೂ ಕ್ಷೇತ್ರ ತ್ಯಾಗ ಮಾಡಿದ್ದಾರೆ ಎನ್ನಲಾಗಿದೆ.

ಭವಾನಿ ಅವರಿಗೆ ಟಿಕೆಟ್‌ ನೀಡುವುದು ಬೇಕಾಗಿಲ್ಲ ಎನ್ನುವುದನ್ನು ಸಮರ್ಥಿಸಲು ಕುಮಾರಸ್ವಾಮಿ ಅವರು ನೀಡುತ್ತಿರುವ ಮತ್ತೊಂದು ಕಾರಣ, ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸುವ ತಾಕತ್ತು ಪಕ್ಷಕ್ಕಿದೆ ಎನ್ನುವುದು.

ಆದರೆ, ಭವಾನಿ ರೇವಣ್ಣ ಮತ್ತು ರೇವಣ್ಣ ಅವರು ಈ ಯಾವ ಮಾತನ್ನೂ ಕೇಳಲು ಸಿದ್ಧರಿಲ್ಲ ಎನ್ನಲಾಗುತ್ತಿದೆ. ರೇವಣ್ಣ ಅವರು ಪದೇಪದೆ ದೇವೇಗೌಡರು ಹೇಳಿದ ಹಾಗೆ ಕೇಳುತ್ತೇವೆ ಎಂದು ಹೇಳುತ್ತಿರುವುದರಿಂದ ದೇವೇಗೌಡರ ಮೂಲಕ ಈ ಸಂಧಾನ ಸೂತ್ರ ಮುಂದೆ ಇಡುವ ಸಾಧ್ಯತೆ ಇದೆ. ಅದಕ್ಕೆ ಭವಾನಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕುತೂಹಲಕಾರಿ.

ಹೇಗಿದೆ ಚಾಮರಾಜ ಕ್ಷೇತ್ರ?

ನಿಜವೆಂದರೆ, ಚಾಮರಾಜ ಕ್ಷೇತ್ರ ಜೆಡಿಎಸ್‌ಗೆ ಅಷ್ಟೊಂದು ಬಲ ತಂದುಕೊಟ್ಟ ಕ್ಷೇತ್ರವಲ್ಲ. ಇಲ್ಲಿ ಒಕ್ಕಲಿಗರ ಮತಗಳು ಜಾಸ್ತಿ ಇವೆಯಾದರೂ 1986ಕ್ಕೆ ಪೂರ್ವದಲ್ಲಿ ಜನತಾಪಕ್ಷ ಗೆದ್ದಿದ್ದು ಬಿಟ್ಟರೆ ಇಲ್ಲಿ ಗೆಲ್ಲುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಮಾತ್ರ. 2018ರಲ್ಲಿ ಇಲ್ಲಿ ಬಿಜೆಪಿಯ ಎಲ್‌ ನಾಗೇಂದ್ರ ಗೆದ್ದಿದ್ದರು. ಅದಕ್ಕೆ ಮೊದಲು 2013ರಲ್ಲಿ ಕಾಂಗ್ರೆಸ್‌ನ ವಾಸು ಜಯ ಸಾಧಿಸಿದ್ದರು. ಕಳೆದ ಎರಡೂ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಸಿಕ್ಕಿದ್ದು ಮೂರನೇ ಸ್ಥಾನವಷ್ಟೆ. 1994ರಿಂದ 2013ರವರೆಗೆ ಇಲ್ಲಿ ಬಿಜೆಪಿಯ ಶಂಕರಲಿಂಗೇ ಗೌಡ ಅವರು ನಾಲ್ಕು ಬಾರಿ ಶಾಸಕರಾಗಿದ್ದರು.

ಇದನ್ನೂ ಓದಿ : JDS Karnataka: ಜೆಡಿಎಸ್‌ಗೆ ಮರಳಲು ವೈಎಸ್‌ವಿ ದತ್ತ ಪ್ರಯತ್ನ: ದೇವೇಗೌಡರಿಂದಲೂ ಸಿಗಲಿಲ್ಲ ಭರವಸೆ

Exit mobile version