ಬೆಂಗಳೂರು: ಜೆಡಿಎಸ್-ಬಿಜೆಪಿ ಮೈತ್ರಿ ವಿರೋಧಿಸಿದ್ದ ರಾಜ್ಯ ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿರುವ ಎಚ್.ಡಿ.ದೇವೇಗೌಡ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಸಂವಿಧಾನ ಹಾಗೂ ನಿಯಮಗಳ ಅಡಿಯಲ್ಲಿ ಶಿಸ್ತು ಉಲ್ಲಂಘನೆ ಮಾಡಿದ ಕಾರಣದಿಂದ ಇಬ್ರಾಹಿಂ ಅವರನ್ನು ಸಸ್ಪಂಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಬ್ರಾಹಿಂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಸಂಪೂರ್ಣ ನಿಷ್ಕ್ರಿಯರಾಗಿದ್ದರು. ಸಂಘಟನೆಗೆ ಬಲವರ್ಧನೆಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರುವುದಿಲ್ಲ, ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿರುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಪಕ್ಷದ ನಿರ್ಣಯವನ್ನು ಅವರು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Zameer Ahmed : ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ; ಉಲ್ಟಾ ಹೊಡೆದ ಜಮೀರ್!
ಅಮಾನತು ಹಿನ್ನೆಲೆ
ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸರ್ವಾನುಮತದ ಅಧಿಕಾರ ನೀಡಲಾಗಿದೆ ಹಾಗೂ ಮೈತ್ರಿಯ ಬಗ್ಗೆ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲು ರಾಷ್ಟ್ರೀಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಪೂರ್ಣ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ನಡೆದ ಎಲ್ಲಾ ಸಭೆಗಳಲ್ಲಿ ಇಬ್ರಾಹಿಂ ಅವರು ಹಾಜರಿದ್ದರು. ಆದರೂ ಅವರು ಪಕ್ಷಕ್ಕೆ ಹಾನಿ ಉಂಟು ಮಾಡುವ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳದ ರಾಜ್ಯಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪಕ್ಷದ ಸಂವಿಧಾನದ ಆರ್ಟಿಕಲ್ 10ರ ಅನ್ವಯ ಕಳೆದ ಅಕ್ಟೋಬರ್ 19ರಂದು ವಿಸರ್ಜನೆ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಆದೇಶ ಹೊರಡಿಸಿದ್ದರು.
ತದ ನಂತರ ಇಬ್ರಾಹಿಂ ಅವರು ನವೆಂಬರ್ 7ರಂದು ʼಚಿಂತನ ಮಂಥನʼ ಎನ್ನುವ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಮಾನಾಂತರ ಸಭೆ ಕರೆದು ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಸುಳ್ಳು ಆರೋಪಗಳನ್ನು ಮಾಡಿದ್ದರು.
ನವೆಂಬರ್ 7ರಂದು ತಾವಿನ್ನೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದೇನೆ ಎಂದು ತಿಳಿಸಿ, ಬಿಜೆಪಿ ಜತೆ ಮೈತ್ರಿಗೆ ಒಲವು ಇರುವವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿರುತ್ತಾರೆ.
ಇದನ್ನೂ ಓದಿ | Opposition Leader : ವಿಪಕ್ಷ ನಾಯಕನ ಆಯ್ಕೆ ಮುನ್ನವೇ ಅಸಮಾಧಾನ; ಯತ್ನಾಳ್, ಜಾರಕಿಹೊಳಿ ವಾಕೌಟ್!
ನವೆಂಬರ್ 15ರಂದು ಕೇರಳದ ತಿರುವನಂತಪುರದಲ್ಲಿ ಸಿ.ಕೆ.ನಾಣು ಅವರ ನೇತೃತ್ವದಲ್ಲಿ ಪಕ್ಷ ವಿರೋಧಿ ಸಭೆಯನ್ನು ನಡೆಸಿ, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವೆಲ್ಲಾ ನಡವಳಿಕೆ, ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಪಕ್ಷದ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ