Site icon Vistara News

Karnataka Election 2023: ಜೀವರಾಜ್‌ಗೆ ಪಕ್ಷೇತರ ಬಿಸಿ; ಅಭ್ಯರ್ಥಿ ಕಣಕ್ಕಿಳಿಸಲು ಹಿಂದು ಬ್ರಿಗೇಡ್‌ ಸಜ್ಜು

Jeevaraj gets independent fear and Hindu brigade to contest elections Karnataka Election 2023 updates

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯ (Karnataka Election 2023) ಹೊತ್ತಿನಲ್ಲಿ ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟತೊಡಗಿದೆ. ಪ್ರತಿ ಚುನಾವಣೆ ವೇಳೆಯೂ ಇಂಥದ್ದೊಂದು ಬಂಡಾಯದ ಕೂಗು ಇದ್ದೇ ಇರುತ್ತದೆ. ಕೆಲವು ಕಡೆ ಹಾಲಿ ಶಾಸಕರಿಗೆ ಈ ಬಿಸಿ ತಟ್ಟುತ್ತಲಿರುತ್ತದೆ. ಇನ್ನು ಕೆಲವು ಕಡೆ ಟಿಕೆಟ್‌ ಆಕಾಂಕ್ಷಿಗಳಿಗೆ ಸ್ವಪಕ್ಷೀಯರಿಂದಲೇ ವಿರೋಧ ಇರುತ್ತದೆ. ಈಗ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿದೆ.

ಸಂಘ, ಪರಿವಾರ, ಹಿಂದುತ್ವ ಸಿದ್ಧಾಂತ ಇಲ್ಲದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್‌ ವಿರುದ್ಧ ಹಿಂದು ಬ್ರಿಗೇಡ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ. ಪಕ್ಷೇತರ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಸಜ್ಜಾಗಿರುವ ಬ್ರಿಗೇಡ್, ಈ ಬಗ್ಗೆ ಎನ್ಆರ್‌ ಪುರ ತಾಲೂಕಿನ ಖಾಂಡ್ಯದಲ್ಲಿ ಗೌಪ್ಯ ಸಭೆಯೊಂದನ್ನು ನಡೆಸಿದೆ.

ಸಭೆಯಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ರಾಜ್ಯ ಬಿಜೆಪಿಗೆ ಹಿಂದು ಯುವ ಬ್ರಿಗೇಡ್ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದೆ. ಬಿಜೆಪಿ ಅಭ್ಯರ್ಥಿಯನ್ನು ಯಾವ ಮಾನದಂಡದಲ್ಲಿ ಆಯ್ಕೆ ಮಾಡಿದ್ದೀರಾ? ಸಂಘ, ಪರಿವಾರ, ಹಿಂದುತ್ವ ಸಿದ್ಧಾಂತ ಇಲ್ಲದವರಿಗೆ ಬಿಜೆಪಿ ಟಿಕೆಟ್ ನೀಡುತ್ತೀರೇ? ಜನಸಾಮಾನ್ಯರಿಂದ ದೂರವಾದ ವ್ಯಕ್ತಿಗೆ ಏಕೆ ಬಿಜೆಪಿ ಟಿಕೆಟ್ ನೀಡಬೇಕು? ಹಿಂದುತ್ವ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಆಕ್ರೋಶವನ್ನು ಹೊರಹಾಕಲಾಗಿದೆ.

ಇದನ್ನೂ ಓದಿ: PM Modi status : ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೊ ಹಾಕಿದ್ದ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ

ಅಲ್ಲದೆ, ನಮ್ಮ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತಹ ವ್ಯಕ್ತಿಗಳು ಬೇಕು ಎಂದು ಆಗ್ರಹಿಸಿದ್ದಾರೆ. 2018ರ ಚುನಾವಣೆಯಲ್ಲಿಯೂ ಜೀವರಾಜ್ ಸೋಲಿಗೆ ಇದೇ ಕಾರಣವಾಗಿತ್ತು. ಈಗ ಅವರನ್ನು ಮತ್ತೊಮ್ಮೆ ಮಣಿಸಲು ಮುಂದಾಗಿರುವ ವಿರೋಧಿಗಳ ಗುಂಪು, ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಜ್ಜಾಗಿದೆ.

ಶಾಸಕ ಹರತಾಳು ಹಾಲಪ್ಪಗೆ ಬಿಜೆಪಿಯಲ್ಲಿ ಬಂಡಾಯ ಬಿಸಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿರುದ್ಧ ಭಿನ್ನಮತ ಭುಗಿಲೆದ್ದಿದೆ. ಯಾವುದೇ ಕಾರಣಕ್ಕೂ ಅವರಿಗೆ ಟಿಕೆಟ್‌ ನೀಡಬಾರದು ಎಂದು ಒಂದು ಬಣ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿ ಪಟ್ಟುಹಿಡಿದಿದೆ.

ಸಾಗರ ಬಿಜೆಪಿಯ ಕೆಲವು ಕಾರ್ಯಕರ್ತರಿಂದ ಈ ಬಗ್ಗೆ ಸಭೆ ನಡೆದಿದ್ದು, ಈ ವೇಳೆ ಶಾಸಕ ಹಾಲಪ್ಪ, ಆರ್‌ಎಸ್‌ಎಸ್‌ ನಡೆ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಪದ್ಮನಾಭ ಭಟ್, ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿ ಎಂದರೆ ದೇಶ, ಧರ್ಮ ಹಾಗೂ ಸನಾತನ ಹಿಂದು ಧರ್ಮದ ಸಿದ್ಧಾಂತವನ್ನು ಇಟ್ಟುಕೊಂಡು ಬಂದಿರುವ ಪಕ್ಷ. ಅದೇ ಸಿದ್ಧಾಂತವನ್ನು ನಂಬಿ ನಾವು ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸವನ್ನು ಮಾಡುತ್ತಾ ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿದಿದ್ದೇವೆ. ಅಲ್ಲದೆ, ಕಳೆದ ಬಾರಿ ಇದೇ ಶಾಸಕ ಹಾಲಪ್ಪ ಅವರನ್ನು ನಾವು ಒಗ್ಗಟ್ಟಾಗಿ ಗೆಲ್ಲಿಸಿದ್ದೇವೆ. ಆದರೆ ನಮ್ಮನ್ನು ಶಾಸಕರು ರೌಡಿಗಳ ಮೂಲಕ, ತಮ್ಮ ಬೆಂಬಲಿಗರ ಮೂಲಕ ಹೀನಾಯವಾಗಿ ನಡೆಸಿಕೊಡರು. ನಾವು ಪಕ್ಷವನ್ನು ಬಿಟ್ಟು ಹೋಗುವ ರೀತಿಯಲ್ಲಿ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಈಗಿರುವ ಶಾಸಕರಿಗೆ ಯಾವ ಬಿಜೆಪಿಯ ಸಿದ್ಧಾಂತವೂ ಇಲ್ಲವಾಗಿದೆ. ಹಿಂದುತ್ವ ಹಾಗೂ ಧರ್ಮದ ಬಗ್ಗೆ ಅಭಿಮಾನವೇ ಇಲ್ಲವಾಗಿದೆ. ಅಧಿಕಾರದ ಮದದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Aishwaryaa Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ

ಎಲ್ಲವನ್ನೂ ಹಣದಲ್ಲಿ ಕೊಂಡುಕೊಳ್ಳಬಹುದು ಎನ್ನುವ ಧೈರ್ಯದಲ್ಲಿ ನಮ್ಮನ್ನು ತುಳಿಯುತ್ತಿದ್ದಾರೆ, ಸಂಘಪರಿವಾರವಾದ ವಿಶ್ವ ಹಿಂದು ಪರಿಷತ್, ಬಜರಂಗದಳದ ಅಂಗ ಸಂಸ್ಥೆಯ ಕಾರ್ಯಕರ್ತರನ್ನು ಕಡೆಗಣಿಸಿ ಮನಸೋ ಇಚ್ಛೆ ಅಧಿಕಾರದ ದರ್ಪದಲ್ಲಿ ಮೆರೆದಿದ್ದಾರೆ. ಶಾಸಕರ ವಿರುದ್ಧ ಮಾತನಾಡುವವರ ಮನೆ ಮೇಲೆ ಕಲ್ಲು ಹೊಡೆಸುವುದು, ರೌಡಿಗಳು, ತಮ್ಮ ಬೆಂಬಲಿಗರಿಂದ ದೂರವಾಣಿಯಲ್ಲಿ ಬೆದರಿಕೆ ಹಾಕಿಸುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಎಸ್‌ವೈ ಭೇಟಿಯಾದ ನಿಯೋಗ

ಹಾಲಪ್ಪನವರಿಗೆ ಟಿಕೆಟ್ ನೀಡಬೇಡಿ ಎಂದು ಹೇಳಿದರೆ ಕೇಳುವುದಿಲ್ಲ. ಶಾಸಕ ಹರತಾಳು ಹಾಲಪ್ಪ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಪಟ್ಟು ಹಿಡಿಯಲಾಗಿದೆ. ಟಿಕೆಟ್ ನೀಡದಂತೆ ಪಟ್ಟು ಹಿಡಿದ ಬಿಜೆಪಿ ಮುಖಂಡರು ಹಾಗೂ ಕೆಲವು ಸಂಘ ಪರಿವಾರದ ಮುಖಂಡರು ಸೇರಿ 2 ದಿನಗಳ ಹಿಂದೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಹಾಲಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಲಾಗಿದೆ.

ಸಾಗರದ ಆಶ್ರಯ ಸಮಿತಿ ಅಧ್ಯಕ್ಷ ಯು.ಎಚ್. ರಾಮಪ್ಪ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಶ್ರೀಧರ್, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ವೀರಶೈವ ಮುಖಂಡರಾದ ಜಗದೀಶ್ ಗೌಡ, ಕುಮಾರ್, ವಸಂತ್, ಬಿಜೆಪಿ ಮುಖಂಡರಾದ ಸತೀಶ್ ಹಕ್ಕರೆ, ರಾಘವೇಂದ್ರ ಶೇಟ್, ಕೃಷ್ಣಮೂರ್ತಿ ಮಂಕಳಲೆ ಹಲವರನ್ನೊಳಗೊಂಡ ನಿಯೋಗವು ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ.

ಇದನ್ನೂ ಓದಿ: Karnataka Election: ಬಸವರಾಜ ಬೊಮ್ಮಾಯಿ ಅವರಷ್ಟು ಸಿಂಪಲ್‌ ಸಿಎಂ ನಾನು ನೋಡಿಯೇ ಇಲ್ಲ: ಸಚಿವ ಆರ್‌. ಅಶೋಕ್‌ ಬಣ್ಣನೆ

ಗೂಂಡಾಗಿರಿ ಆರೋಪ

ಈ ಸಂಬಂಧ ಸಾಗರದಲ್ಲಿ ಭಾನುವಾರ (ಮಾ. 19) ಸಭೆ ನಡೆಸಿದ ಬಿಜೆಪಿ ಮುಖಂಡರು, ಹರತಾಳು ಹಾಲಪ್ಪ ಸಾಗರದಲ್ಲಿ ಶಾಸಕರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ. ಶಾಸಕರ ಬೆಂಬಲಿಗರ ಗೂಂಡಾಗಿರಿ ಮಿತಿಮೀರಿದೆ. ಬಿಜೆಪಿ ಮುಖಂಡರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ. ಜತೆಗೆ ಸಂಘ ಪರಿವಾರದ ಮುಖಂಡರಿಗೆ ಧಮ್ಕಿ ಹಾಕಲಾಗುತ್ತಿದೆ. ಹಾಲಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯಿಂದ ದೂರ ಉಳಿಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಹಾಲಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಲು ಮುಖಂಡರು ತೀರ್ಮಾನ ಕೈಗೊಂಡಿದ್ದು, ಇನ್ನೊಂದು ವಾರದೊಳಗೆ ಪತ್ರ ಬರೆಯಲು ತಯಾರಿ ಮಾಡಿಕೊಳ್ಳಲಾಗಿದೆ. ಹಾಲಪ್ಪ ಹೊರತುಪಡಿಸಿ ಪಕ್ಷದ ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ನೀಡಿದಲ್ಲಿ ಅನಿವಾರ್ಯವಾಗಿ ಸೋಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ: Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಈಗಾಗಲೇ ಎಂಡಿಎಫ್ ಕಾಲೇಜು ಗಲಾಟೆಯಲ್ಲಿ ಬ್ರಾಹ್ಮಣ, ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಹಾಲಪ್ಪ, ಇದೀಗ ಬಿಜೆಪಿ ಪಕ್ಷದ ಮುಖಂಡರ ವಿರೋಧವನ್ನೂ ಎದುರಿಸುತ್ತಿದ್ದಾರೆ.

Exit mobile version