Site icon Vistara News

Jet lag Party Case : ನಿಯಮ ಮೀರಿ ಪಾರ್ಟಿ : ನಟ ದರ್ಶನ್‌ ಸಹಿತ ಹಲವು ಸೆಲೆಬ್ರಿಟಿಗಳಿಗೆ ಸಂಕಷ್ಟ

Jet lag pub

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಜೆಟ್‌ ಲ್ಯಾಗ್‌ ಪಬ್‌ (Jet lag Party Case) ಎಂಬ ಬಾರ್‌ ಎಂಡ್‌ ರೆಸ್ಟೋರೆಂಟ್‌ನಲ್ಲಿ ಸಮಯ ಮೀರಿ ಪಾರ್ಟಿ ಮಾಡಿದ್ದ ಪ್ರಕರಣ ಇದೀಗ ಸಿನಿಮಾ ನಟರಿಗೆ (Film Actors) ದುಬಾರಿಯಾಗಿ ಪರಿಣಮಿಸಿದೆ. ಪೊಲೀಸ್ ಹಾಗೂ ಅಬಕಾರಿ ನಿಯಮಗಳನ್ನು (Excise Rules) ಗಾಳಿಗೆ ತೂರಿ ಮುಂಜಾನೆವರೆಗೂ ಪಾರ್ಟಿ ಮಾಡಿದ ಆರೋಪದಲ್ಲಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳಿಗೆ ನೋಟಿಸ್‌ (Notice to Celebrities) ಜಾರಿ ಮಾಡಲಾಗಿದೆ.

ಕಾಟೇರ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಖ್ಯಾತ ನಟ ದರ್ಶನ್ (Actor Darshan), ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್‌, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಈಗ ಸುಬ್ರಮಣ್ಯ ನಗರ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ನೊಟೀಸ್ ನೀಡಿ ಹೇಳಿಕೆ ಪಡೆಯುವಂತೆ ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್‌ ಅವರು ನೀಡಿದ ಸೂಚನೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜನವರಿ 3ರಂದು ರಾತ್ರಿ ಸೌಂದರ್ಯ ಜಗದೀಶ್‌ ಒಡೆತನದ ಜೆಟ್‌ ಲ್ಯಾಗ್‌ ಪಬ್‌ನಲ್ಲಿ ಕನ್ನಡ ಸಿನಿಮಾ ಒಂದರ ಸಕ್ಸಸ್ ಪಾರ್ಟಿ ನಡೆದಿತ್ತು. ಖ್ಯಾತ ನಟ-ನಟಿಯರು, ನಿರ್ಮಾಪಕರು ಸೇರಿದಂತೆ ಹಲವಾರು ಸಿನಿಮಾ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ರಾತ್ರಿ 10 ಗಂಟೆ ಬಳಿಕ ಆರಂಭವಾಗಿದ್ದ ಪಾರ್ಟಿ ನಿಯಮ ಪ್ರಕಾರ ಪ್ರಕಾರ ರಾತ್ರಿ 1 ಗಂಟೆಗೆ ಮುಗಿಯಬೇಕಾಗಿತ್ತು. ಆದರೆ, ಪೊಲೀಸರನ್ನು ಕೇರ್ ಮಾಡದ ಪಬ್ ಮಾಲೀಕರು ಹಾಗೂ ಅಲ್ಲಿನ ಸಿಬ್ಬಂದಿ ಸೆಲೆಬ್ರಿಟಿಗಳಿಗೆ ಮುಂಜಾನೆವರೆಗೂ ಪಾರ್ಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸೆಲೆಬ್ರಿಟಿಗಳಿಗೆ ನೋಟಿಸ್‌ ಜಾರಿ ಮಾಡಲು ಸೂಚನೆ

ನಿಜವೆಂದರೆ, ರಾತ್ರಿ ಒಂದು ಗಂಟೆ ಬಳಿಕವೂ ಪಾರ್ಟಿ ಮುಂದುವರಿಸಿದ್ದನ್ನು ಆವತ್ತೇ ಪೊಲೀಸರು ಪ್ರಶ್ನೆ ಮಾಡಿದ್ದರು. ಸ್ಥಳಕ್ಕೆ ಹೋಗಿದ್ದ ಪೊಲೀಸರು ಪಬ್‌ ಕ್ಲೋಸ್‌ ಮಾಡುವಂತೆ ಸೂಚಿಸಿದ್ದರು. ಆದರೆ, ಅದಕ್ಕೆ ಕೇರ್ ಮಾಡದ ಪಬ್ ಮಾಲೀಕರು ಸೆಲೆಬ್ರೆಟಿಗಳಿಗೆ ತುಂಡು ಗುಂಡು ಸಪ್ಲೈ ಮಾಡಿ ಮೋಜು ಮಸ್ತಿ ಮಾಡಲು ಅವಕಾಶ ನೀಡಿದ್ದರು. ಬಳಿಕ ಮುಂಜಾನೆ ಐದು ಗಂಟೆ ಸುಮಾರಿಗೆ ದಾಳಿ‌ ಮಾಡಿದ ಪೊಲೀಸರು ಪಬ್ ಮಾಲೀಕ‌ರಾದ ಶಶಿರೇಖಾ ಜಗದೀಶ್ ಹಾಗೂ ಪಬ್ ಕ್ಯಾಶಿಯರ್ ಪ್ರಕಾಶ್ ವಿರುದ್ಧ ಕೆಪಿ. ಆಕ್ಟ್ ಹಾಗೂ ಅಬಕಾರಿ ಕಾಯಿದೆಯಡಿ ಕೇಸು ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಪಬ್ ನಲ್ಲಿರುವ ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಪಬ್ ಮಾಲೀಕ ಹಾಗೂ ಕ್ಯಾಶಿಯರ್‌ಗೆ ಸುಬ್ರಮಣ್ಯ ನಗರ ಪೊಲೀಸರು ನೋಟಿಸ್‌ ನೀಡಿದ್ದರು. ಅವರು ನೀಡಿದ ದಾಖಲೆಗಳ ಆಧಾರದಲ್ಲಿ ಈಗ ಪ್ರಮುಖ ಸೆಲೆಬ್ರಿಟಿಗಳಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ.

ರಾತ್ರಿ ಒಂದು ಗಂಟೆಯ ಬಳಿಕ ಯಾರ್ಯಾರು ಇದ್ದರು ಎನ್ನುವ ಆಧಾರದಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ, ಜತೆಗೆ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದು ಯಾರು ಎಂಬುದನ್ನು ಆಧರಿಸಿ ನೋಟಿಸ್‌ ನೀಡಲಾಗಿದೆ ಎನ್ನಲಾಗಿದೆ.

ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್‌, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಪ್ರಧಾನವಾಗಿ ನೋಟಿಸ್‌ ಜಾರಿ ಮಾಡಲಾಗಿದೆ.

Exit mobile version