ವಿಜಯಪುರ: ಭಕ್ತರ ಪಾಲಿಗೆ ನಡೆದಾಡುವ ದೇವರು, ನಡೆದಾಡುವ ವಿಶ್ವಕೋಶ, ಜ್ಞಾನದ ನಿಧಿ, ಎರಡನೇ ವಿವೇಕಾನಂದ ಆಗಿದ್ದ ಪ್ರಖ್ಯಾತ ವಾಗ್ಮಿ, ಧಾರ್ಮಿಕ ಚಿಂತಕ, ಲೇಖಕ, ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) (Siddheshwar Swamiji) ಅವರ ಅಂತಿಮ ವಿಧಿವಿಧಾನ ಪ್ರಕ್ರಿಯೆಗಳು ಆರಂಭವಾಗಿವೆ. ಇದಕ್ಕೂ ಮೊದಲು ವಿಜಯಪುರದ ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಸಕಲ ಗೌರವಗಳ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತಿದೆ.
ಸೀದಾಸಾದಾ, ಸರಳ, ಸುಂದರ ಅಧ್ಯಾತ್ಮಿಕ ಜೀವನದ ಮೂಲಕ ಜನಮನದ ಮೇಲೆ ಗಾಢ ಪ್ರಭಾವ ಬೀರಿದ ಅವರು ಉಪನ್ಯಾಸ, ಅಂಕಣ ಮತ್ತು ಕೃತಿಗಳ ಮೂಲಕ ಅಸಂಖ್ಯಾತ ಜನರ ಮನಸ್ಸಿಗೆ ಸಾಂತ್ವನ ನೀಡಿದ ಮಹಾ ಗುರು. ಗದುಗಿನ ಶಿವಾನಂದ ಶ್ರೀಗಳ ಪರಂಪರೆಗೆ ಸೇರಿದ ವಿಜಯಪುರದ ಜ್ಞಾನಯೋಗಾಶ್ರಮ ಅಧ್ಯಕ್ಷರಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ಸಂಚರಿಸಿ ಜ್ಞಾನದಾಸೋಹ ನೀಡಿದವರು. ಶ್ರೀಗಳ ದೇಹಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಪ್ರಕೃತಿಯಲ್ಲಿ ಲೀನವಾಗುವುದು ಶ್ರೀಗಳ ಸಂಕಲ್ಪ
ಸಿದ್ದೇಶ್ವರ ಶ್ರೀಗಳ ಸಂಕಲ್ಪದಂತೆ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡುವುದಿಲ್ಲ. ಪ್ರಕೃತಿಯಲ್ಲಿ ಲೀನವಾಗುವ ಕುರಿತು 2014ರಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಸಿದ್ದೇಶ್ವರ ಶ್ರೀಗಳು. ಅದರಂತೆ, ಅವರ ಪಾರ್ಥಿವ ಶರೀರ ಅಗ್ನಿಗೆ ಅರ್ಪಿತ.
ಸಮಾಧಿ, ಗುಡಿ ಕಟ್ಟದಿರಲು ತೀರ್ಮಾನ
ಸ್ವಾಮೀಜಿಗಳ ಇಚ್ಛೆಯಂತೆ ಸಮಾಧಿ ಮತ್ತು ಗುಡಿಯನ್ನು ಕಟ್ಟದಿರಲು ಸರ್ವಾನುಮತದ ನಿರ್ಧಾರ ಎಂದು ಆಶ್ರಮದಿಂದ ಮಾಹಿತಿ.
ಸಿದ್ದೇಶ್ವರಶ್ರೀಗಳು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕಕೋತ್ತರ ಪದವಿ ಪಡೆದುಕೊಂಡಿದ್ದರು. ಐದು ಭಾಷೆಗಳಲ್ಲಿ ನಿರ್ಗಳವಾಗಿ ಮಾತನಾಡುತ್ತಿದ್ದರು.
ಹೀಗಿದೆ ಅಂತಿಮ ದರ್ಶನಕ್ಕೆ ಅವಕಾಶದ ಸಮಯ
ಬೆಳಗ್ಗೆ 4 ಗಂಟೆಯತನಕ ಆಶ್ರಮದ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ. ಇದಾದ ಬಳಿಕ ಮಂಗಳವಾರ ಸಂಜೆಯವರೆಗೆ ಸೈನಿಕ ಶಾಲೆಯ ಬಳಿ ಅಂತಿಮ ದರ್ಶನಕ್ಕೆ ಏರ್ಪಾಡು.
ಜ್ಞಾನ ಯೋಗಾಶ್ರಮಕ್ಕೆ ಸುತ್ತೂರು ಶ್ರೀಗಳ ಭೇಟಿ
ಜ್ಞಾನ ಯೋಗಾಶ್ರಮಕ್ಕೆ ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ. ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯದಿಂದ ಅಪಾರ ದುಃಖವಾಗಿದೆ ಎಂದು ಹೇಳಿಕೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅನುಯಾಯಿಗಳಿಗೆ ಮನವಿ