ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯಿಂದ (Karnataka Rakshana Vedike) ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 1ರಂದು ಬೃಹತ್ ಧರಣಿ ಸತ್ಯಾಗ್ರಹ (KaRaVe Protest) ನಡೆಸಲಿದ್ದು, ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (Bengaluru News) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತೀವ್ರ ಸ್ವರೂಪ ಪಡೆದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಮಹಾನಗರಗಳು ವಲಸಿಗರ ಹಾವಳಿಯಿಂದ ಸಂಪೂರ್ಣ ಬದಲಾಗುತ್ತಿವೆ. ಕನ್ನಡಿಗರ ಉದ್ಯೋಗಗಳನ್ನು ಹೊರರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಲು ಆಗ್ರಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಹಕ್ಕೊತ್ತಾಯಗಳು
ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100 ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು.
ಎಲ್ಲ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಹದಿನೈದು ವರ್ಷ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.
ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ, ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು.
ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಹೊರತಾದ ಉಳಿದೆಲ್ಲ ಹುದ್ದೆಗಳಲ್ಲೂ ಶೇ. 90ರಷ್ಟು ಮೀಸಲಾತಿ ನೀಡಬೇಕು.
ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು.
ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ