Site icon Vistara News

Vijay Sankalp Yatre: ಬಿಜೆಪಿಗಾಗಿ ಅಲ್ಲ; ರಾಜ್ಯದ ಅಭಿವೃದ್ಧಿಗಾಗಿ ಕಮಲ ಅರಳಬೇಕಿದೆ: ಜೆ.ಪಿ. ನಡ್ಡಾ

BJP announces first list for karnataka election 2023

ತುಮಕೂರು: ಕಮಲ ಅರಳಿಸಬೇಕು ಎಂಬುದು ಬಿಜೆಪಿಯ ಅವಶ್ಯಕತೆಯಲ್ಲ. ರಾಜ್ಯದ ಅಭಿವೃದ್ಧಿಗಾಗಿ ಕಮಲ ಅರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ (Vijay Sankalp Yatre) ಜನರು ಬೆಂಬಲ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಜಿಲ್ಲೆಯ ತಿಪಟೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ರೋಡ್ ಶೋನಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ಕೇವಲ ಭಾರತೀಯ ಜನತಾ ಪಾರ್ಟಿಗೆ ಮಾತ್ರವಲ್ಲ, ಕರ್ನಾಟಕದ ಜನತೆಯ ಭವಿಷ್ಯದ ಚುನಾವಣೆಯಾಗಿದೆ. ಅದನ್ನು ನಾವು ತಿಳಿದುಕೊಳ್ಳಬೇಕಿದೆ. ಕಾಂಗ್ರೆಸ್ ಪಾರ್ಟಿಯನ್ನು ಅರ್ಥೈಸುವುದಾದರೆ ಕಮಿಷನ್, ಕರಪ್ಷನ್, ಕ್ರಿಮಿನಲೈಸೇಷನ್ ಹಾಗೂ ಪರಿವಾರವಾದವಾಗಿದೆ. ಆದರೆ ಬಿಜೆಪಿಯ ಅರ್ಥ ವಿಕಾಸ್, ವಿಕಾಸ್‌, ವಿಕಾಸ್ ಆಗಿದೆ ಎಂದು ಹೇಳಿದರು.

ಮೋದಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಮಾಡಿದ್ದಾರೆ. ಈಗ ಸಿಎಂ ಬಸವರಾಜ ಬೊಮ್ಮಾಯಿಯವರು ಅದನ್ನು ಮುಂದುವರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾಗಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಆಗಿದೆ. ಆದರೆ, ಕಾಂಗ್ರೆಸ್‌ ತ್ರಿಪುರದಲ್ಲಿ 3 ಸೀಟ್, ಮೇಘಾಲಯದಲ್ಲಿ 5 ಸೀಟ್ ಮತ್ತು ನಾಗಲ್ಯಾಂಡ್‌ನಲ್ಲಿ ಸೊನ್ನೆ ಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಲಂಡನ್‌ಗೆ ಹೋಗಿ ಭಾರತದ ಪ್ರಜಾತಂತ್ರಕ್ಕೆ ಆಪತ್ತು ಇದೆ ಎನ್ನುತ್ತಾರೆ. ಈ ಮೂಲಕ ಅವರು ಅಮೆರಿಕ ಮತ್ತು ಯುರೋಪಿಯನ್ ದೇಶಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ನವರು ಎಷ್ಟು ಹತಾಶರಾಗಿದ್ದಾರೆ ಎಂದರೆ, ಮೋದಿ ಮರ್ ಜಾ, ಮೋದಿ ಮರ್ ಜಾ ಎನ್ನುತ್ತಿದ್ದಾರೆ. ಆದರೆ ಜನರು ಮಾತ್ರ ಮೋದಿ ಮತ್ ಜಾ, ಮೋದಿ ಮತ್ ಜಾ ಎನ್ನುತ್ತಿದ್ದಾರೆ. ಕರ್ನಾಟಕ ಸದ್ಯ ಇನ್ನೊವೇಶನ್‌ನಲ್ಲಿ ನಂಬರ್ ಒನ್ ಇದೆ. ಸ್ಟಾರ್ಟಪ್‌ನಲ್ಲೂ ನಂಬರ್ ಒನ್ ಇದೆ. ಇನ್ನು ಮುಂದೆಯೂ ನಂಬರ್ ಒನ್ ಆಗಿಯೇ ಇರಬೇಕೋ ಬೇಡವೋ? ಇರಬೇಕು ಎಂದರೆ ಕರ್ನಾಟಕದಲ್ಲಿ ಕಮಲ ಅರಳಬೇಕು. ಇದಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಬಿಜೆಪಿ 140 ಸ್ಥಾನ ಗೆದ್ದು ಸರ್ಕಾರ ರಚಿಸುವುದು ನಿಶ್ಚಿತ: ಬಿಎಸ್‌ವೈ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎಲ್ಲೆಡೆ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದರಿಂದ ಬಿಜೆಪಿ 140 ಸೀಟ್ ಗೆದ್ದು, ಸರ್ಕಾರ ರಚನೆ ಮಾಡುವುದು ನಿಶ್ಚಿತವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ಈ ಹಿಂದೆ ಒಂದು ಮಾತು ಹೇಳಿದ್ದೆ. ಅವರು ಅನಗತ್ಯವಾಗಿ ಅಲ್ಲಿ ಇಲ್ಲಿ ಓಡಾಟ ಮಾಡಿಕೊಂಡು ಕತೆ ಹೇಳುತ್ತಿದ್ದಾರೆ. ಇಲ್ಲಿ ಸತ್ಯಾಂಶ ಅವರು ವರುಣಾ ಕ್ಷೇತ್ರದಿಂದ ನಿಲ್ಲುವುದು ಎಂದು ಹೇಳಿದ್ದೆ. ಬಹಶಃ ನನ್ನ ಮಾತು‌ ನಿಜ ಆಗಬಹುದು ಎನಿಸುತ್ತದೆ ಎಂದು ಹೇಳಿದರು. ಅಭ್ಯರ್ಥಿಗಳ ಪಟ್ಟಿ ನೋಡಿದರೆ ನೀವೆ ನೋಡುತ್ತೀರಾ ಎಂದು ತಿಳಿಸಿದರು.

ಇದನ್ನೂ ಓದಿ | Karnataka Elections 2023 : ಕೋಲಾರದ ಸ್ಪರ್ಧೆಯಿಂದ ಹಿಂದೆ ಸರಿದರಾ ಸಿದ್ದರಾಮಯ್ಯ? ರಾಹುಲ್‌ ಸಲಹೆ ಏನು?

ಅನಗತ್ಯವಾಗಿ ಕೋಲಾರ ಮತ್ತೊಂದು ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಯಾಕೆ ಈ ರೀತಿಯ ಗೊಂದಲ ಮಾಡಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಪ್ರಕಾರ ವರುಣಾದಿಂದಲೇ ನಿಲ್ಲುವುದು ನಿಶ್ಚಿತ ಎಂದು ಹೇಳಿದರು. ಈ ವೇಳೆ ನಿಮ್ಮ ಸಲಹೆ ತಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಬಿಎಸ್‌ವೈ ನಕ್ಕು ಸುಮ್ಮನಾದರು.

ಸೋಮಣ್ಣ ಜತೆ ಅಂತರ ಕಾಯ್ದುಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂಥದ್ದೇನೂ ಇಲ್ಲ‌, ನಾವೆಲ್ಲ ಚೆನ್ನಾಗಿದ್ದೇವೆ ಎಂದ ಅವರು, ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಸರ್ಕಾರ ಬರುವುದು ಅಷ್ಟೇ ಸತ್ಯ. ಕೆಲವರು ನಾನೇ ಸಿಎಂ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ನಾವು ಹೋದ ಕಡೆಯಲ್ಲೆಲ್ಲಾ ಜನರು ಬೆಂಬಲ ನೀಡುತ್ತಿರುವುದು ಅವರಿಗೂ ಗೊತ್ತಿದೆ. ತಿಪಟೂರಿನಲ್ಲಿ ನಾಗೇಶ್ ಎದುರು ಸ್ಪರ್ಧೆ ಮಾಡುವ ಧೈರ್ಯವನ್ನು ಯಾರು ಮಾಡಲ್ಲ. ಈ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ನಡ್ಡಾ ಅವರ ನೇತೃತ್ವದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ನಾವು ಜಯ ಗಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳಿಂದ 140ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ 224 ಕ್ಷೇತ್ರಗಳೂ ಸೇಫ್ ಅಲ್ಲ

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ನನಗೆ ತಿಳಿದಿರುವ ಹಾಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ. ಈಗಾಗಲೇ ಉರಿಗೌಡ ಹಾಗೂ ನಂಜೇಗೌಡ ಎಂದೆಲ್ಲ ಬೆಂಕಿ ಹೊತ್ತಿಕೊಂಡಿದೆ. ಈ ವಿಚಾರ ಎತ್ತಿಕೊಂಡಿರುವುದರಿಂದ ಅವರಿಗೆ ಭಯ ಬಂದಿದೆ. ಮೈಸೂರಿನಲ್ಲಿ ಕೈ ಕೊಟ್ಟ ಹಾಗೇ ಕೋಲಾರದಲ್ಲೂ ಕೈ ಕೊಡಬಹುದು ಎಂಬ ಭಯವಿದೆ. ಹೀಗಾಗಿ ಕೋಲಾರದಲ್ಲಿ ಕೂಡ ಸಿದ್ದರಾಮಯ್ಯ ಖಾಲಿ ಮಾಡುತ್ತಾರೆ ಎಂದರು.

ಇದನ್ನೂ ಓದಿ: Karnataka Elections : ಚನ್ನಗಿರಿಗೆ ಮರಳಿದ ಮಾಡಾಳ್‌ ಮಲ್ಲಿಕಾರ್ಜುನ್‌ಗೆ ಅದ್ಧೂರಿ ಸ್ವಾಗತ, ಭಾರಿ ಮೆರವಣಿಗೆ!

ಕೋಲಾರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಲ್ಲಿಯೂ ಸಿದ್ದರಾಮಯ್ಯಗೆ ವಿರೋಧವಿದೆ. ಸಿದ್ದರಾಮಯ್ಯಗೆ 224 ಕ್ಷೇತ್ರಗಳೂ ಸೇಫ್ ಅಲ್ಲ. ಅವರು ಇರಾನ್, ಇರಾಕ್ ಇಲ್ಲವೇ ಅಫಘಾನಿಸ್ತಾನಕ್ಕೆ ಎಲ್ಲಿಯಾದರೂ ಹೋಗಿ ಸ್ಪರ್ಧೆ ಮಾಡಲಿ. ಅವರು ಟಿಪ್ಪು ಎನ್ನುತ್ತಾರೋ ಅಲ್ಲಿಯವರೆಗೂ ಯಾವ ಕ್ಷೇತ್ರವೂ ಸೇಫ್ ಅಲ್ಲ‌. ಎಲ್ಲಿಯವರೆಗೆ ಶಾದಿ ಭಾಗ್ಯ ಬಿಡುವುದಿಲ್ಲವೋ, ಅಲ್ಲಿಯವರೆಗೆ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಹೇಳಿದರು.

Exit mobile version