Site icon Vistara News

JSS College | ಧಾರವಾಡದ ಜೆಎಸ್ಎಸ್‌ ರೂವಾರಿ ನ. ವಜ್ರಕುಮಾರ್‌ ಇನ್ನಿಲ್ಲ

JSS College

ಧಾರವಾಡ: ಜನತಾ ಶಿಕ್ಷಣ ಸಮಿತಿಯ (JSS College ) ಕಾರ್ಯದರ್ಶಿ ಹಾಗೂ ಎಸ್‌ಡಿಎಂ (SDM) ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿದ್ದ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದ ಡಾ. ನ. ವಜ್ರಕುಮಾರ್ ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.

ವಜ್ರಕುಮಾರ್‌ ಅವರು ಜೈನ ಸಮಾಜದ ಹಿರಿಯರು ಮಾರ್ಗದರ್ಶಕರಾಗಿದ್ದು, ಧಾರವಾಡ ಜೈನ್ ಮಿಲನ್, ಧಾರವಾಡ ಇದರ ಮಹಾಪೋಷಕರು, ಸ್ಥಾಪಕರೂ ಆಗಿದ್ದಾರೆ. ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು.

ಅವಿರತ ಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ ಧಾರವಾಡದಲ್ಲಿ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿಯ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದಾತರಾಗಿದ್ದರು ವಜ್ರಕುಮಾರ್‌. ಅವರ ನಿಧನದ ಹಿನ್ನೆಲೆ ಕಾಲೇಜಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಅಂತಿಮ ದರ್ಶನ ಮಾಡಿದರು.

ಪ್ರಾಧ್ಯಾಪಕರಾಗಿ ವೃತ್ತಿ ಜೀವನ
ಕೊಕ್ಕರ್ಣೆ ಅರಮನೆಯ ಭೋಜರಾಜಯ್ಯ ಹಾಗೂ ಕುತ್ಯಾರು ಅರಮನೆಗೆ ಸೇರಿದ ಚಂದ್ರಮತಿ ಅವರ ದ್ವಿತೀಯ ಪುತ್ರರಾಗಿ 1939ರ ಮೇ 29ರಂದು ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ವಜ್ರಕುಮಾರ್‌ ಅವರು ಜನಿಸಿದರು.

ಉನ್ನತ ಶಿಕ್ಷಣ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಮುಗಿಸಿದ ವಜ್ರಕುಮಾರ್‌ ಅವರು ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಸ್ಥೆಯನ್ನು ವಹಿಸಿಕೊಂಡ ಬಳಿಕ ಡಾ. ನ. ವಜ್ರಕುಮಾರ್ ಅವರು ತಮ್ಮ ಕ್ರಿಯಾಶೀಲತೆ ಹಾಗೂ ಕಾರ್ಯದಕ್ಷತೆಗಳಿಂದ ಜೆಎಸ್ಎಸ್ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ, ಕಾರ್ಯದರ್ಶಿಗಳಾಗಿ ಎಂಜಿನಿಯರಿಂಗ್ ಮತ್ತು ದಂತ ಮಹಾವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದರು.

ಇದನ್ನೂ ಓದಿ | ಧಾರವಾಡ ವಿಶ್ವೇಶ್ವರಯ್ಯ ಕಾಲೇಜಿನ ಲೈಂಗಿಕ ಕಿರುಕುಳ ಆರೋಪ; ಕಾಲೇಜು ಅಧ್ಯಕ್ಷನ ಬಂಧನ

Exit mobile version